ಮೈಸೂರು : ಮುಡಾ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಮೈಸೂರಿನಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ ವಾಲ್ಮೀಕಿ ನಿಗಮದ ಅಕ್ರಮದ ತನಿಖೆ ಮಾಡುತ್ತಿದೆ. ಎರಡು ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದ ಜೊತೆಯಲ್ಲಿ ಯಾವತ್ತು ಬರದೇ ಇರುವ ಮಳೆ ಬಂದು ಜನರ ಜೀವನ ಅಸ್ತವ್ಯಸ್ತವಾಗಿದೆ. ಇದರ ಬಗ್ಗೆ ಸರ್ಕಾರ ಗಮನಹರಿಸದೇ ಇರುವುದು ವಿಪರ್ಯಾಸವಾಗಿದೆ. ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಒಂದು ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. ಕಾನೂನು ತನ್ನ ಕೆಲಸವನ್ನು ಮಾಡಲು ಶುರು ಮಾಡಿದೆ. ಇದೆಲ್ಲವನ್ನು ನೋಡಿದಾಗ ಜನರು ಎನ್ಡಿಎ ಪಕ್ಷಕ್ಕೆ ರಾಜ್ಯದಲ್ಲಿ ಒಲವನ್ನು ತೋರುತ್ತಿದ್ದಾರೆ ಎಂದರು.
ಎನ್ಡಿಎ ಪಕ್ಷಕ್ಕೆ ಗೆಲುವು : ಮೂರು ಕ್ಷೇತ್ರಗಳ ಉಪಚುನಾವಣೆಗಳು ರಾಜ್ಯದಲ್ಲಿ ನಡೆಯುತ್ತಿದ್ದು, ಚನ್ನಪಟ್ಟಣದಲ್ಲಿ ಸಿ. ಪಿ ಯೋಗೇಶ್ವರ್ ಅವರ ಆತುರದ ನಿರ್ಧಾರದಿಂದ ಜನ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಸಂಶಯ ಸಾಮಾನ್ಯರಲ್ಲಿ ಕಾಡುತ್ತಿದೆ. ಸರ್ಕಾರಕ್ಕೆ ಎಚ್ಚರಿಕೆ ಗಂಟೆಯನ್ನು ಜನರು ಈ ಉಪಚುನಾವಣೆ ಮೂಲಕ ನೀಡುತ್ತಾರೆ. ಮೂರಕ್ಕೆ ಮೂರು ಸ್ಥಾನವನ್ನು ನಮ್ಮ ಎನ್ಡಿಎ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು.
ಮುಡಾ ವಿಚಾರ : ಇದು ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಮುಡಾದಲ್ಲಿ ಇಷ್ಟೊಂದು ಅಕ್ರಮ ಆಗಿದೆ ಅಂದುಕೊಂಡಿರಲಿಲ್ಲ. ನಾನು ಈ ಹಿಂದೆ ಮೈಸೂರು ಜಿಲ್ಲಾ ಮಂತ್ರಿಯಾಗಿದ್ದೆ. ಅವಾಗ ನಾನು ಪ್ರತಾಪ್ ಸಿಂಹ ಎಲ್ಲರೂ ಕೂಡ ಮುಡಾದ ಸೈಟುಗಳ ಬಗ್ಗೆ ಮಾಹಿತಿ ಪಡೆದಿದ್ದೆವು. 7200 ಸೈಟುಗಳನ್ನು ಪತ್ತೆ ಹಚ್ಚಿ ಹರಾಜು ಹಾಕಲು ತೀರ್ಮಾನ ಮಾಡಿದ್ವಿ. ಈ ಹಿಂದೆ ಮೈಸೂರು ಡಿಸಿಯಾಗಿದ್ದ ಅಭಿರಾಮ್ ಜಿ ಶಂಕರ್, ಮುಡಾ ಆಯುಕ್ತರಾದ ಕಾಂತರಾಜ್ ಎಲ್ಲರೂ ಜನರ ಪರ ಕೆಲಸ ಮಾಡಲು ನಿರ್ಧಾರ ಮಾಡಿದ್ವಿ. ಆದ್ರೆ ಅದು ಆಗಲಿಲ್ಲ. ಈಗ ತನಿಖೆಗಳು ನಡೆಯುತ್ತಿವೆ. ಅಕ್ರಮ ಹೊರ ಬರಲಿ ಎಂದು ಹೇಳಿದರು.
ಯಡಿಯೂರಪ್ಪ ಪತ್ನಿ ಸಾವು ಬಗ್ಗೆ ಬೈರತಿ ಸುರೇಶ್ ಹೇಳಿಕೆಯ ಬಗ್ಗೆ ಮಾತನಾಡಿ, ಅವರು ಒಬ್ಬರು ಮಂತ್ರಿಯಾಗಿದ್ದಾರೆ. ಅವರು ಹೀಗೆ ಮಾತನಾಡುವುದು ಸರಿಯಲ್ಲ. ಶೋಭಾ ಕರಂದ್ಲಾಜೆ ಪುಟಕ್ಕಿಟ್ಟ ಚಿನ್ನ. ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಸರಿಯಲ್ಲ ಎಂದರು.
ನಿರುದ್ಯೋಗಳಿಗೆ ಉದ್ಯೋಗ ಮಂಜೂರಾತಿ ಪ್ರಮಾಣ ಪತ್ರ : ದೇಶದಲ್ಲಿನ ನಿರುದ್ಯೋಗ ಸಮಸ್ಯೆ ಅರ್ಥ ಮಾಡಿಕೊಂಡು ಪ್ರಧಾನ ಮಂತ್ರಿ, ರೋಜ್ಗಾರ್ ಯೋಜನೆ ಮೂಲಕ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವಂತಹ ಕೆಲಸ ಆಗುತ್ತಿದೆ. ಇಂತಹ ಹತ್ತಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ್ದಾರೆ ಎಂದರು.
ಸಿಎಂಗೆ ಕಷ್ಟ ಬಂದಾಗ ಚಾಮುಂಡಿ ತಾಯಿ ನೆನಪಾಗ್ತಾರೆ : ಮುಖ್ಯಮಂತ್ರಿಗಳಿಗೆ ಮುಡಾ ಕಷ್ಟ ಎದುರಾದಾಗ ಚಾಮುಂಡಿ ತಾಯಿ, ಹಾಸನಾಂಬೆ ತಾಯಿ ನೆನಪಾಗ್ತಾರೆ. ಕಷ್ಟ ಬಂದಾಗ ಮುಖ್ಯಮಂತ್ರಿಗಳ ಸಹಾಯಕ್ಕೆ ಬರುವುದು ನಮ್ಮ ದೇವತೆಗಳೇ ಹೊರತು, ಬೇರೆ ಧರ್ಮದವರಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಿಂದೂಗಳ ವಿರುದ್ದ ನಿಲುವು ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ. ಪ್ರಧಾನ ಮಂತ್ರಿಗಳು ವಕ್ಫ್ ಕಾಯಿದೆ, ವಕ್ಪ್ ಬೋರ್ಡ್ಗಳನ್ನ ರದ್ದು ಮಾಡಬೇಕು ಎಂದರು.
ಮುಡಾ ಕ್ಲೀನ್ ಆಗಬೇಕು : ಇಡಿ ತನಿಖೆ ಶುರು ಮಾಡಿದ ಮೇಲೆ ಮುಡಾ ಕ್ಲೀನ್ ಆಗಬಹುದು ಎಂಬ ನಂಬಿಕೆ ಬಂದಿದೆ. 50:50 ಅನುಪಾತದಲ್ಲಿ ಅಕ್ರಮವಾಗಿ ಸೈಟ್ ಪಡೆದಿರುವವರ ಎಲ್ಲಾ ಸೈಟ್ಗಳನ್ನು ವಾಪಾಸ್ ಕಿತ್ತುಕೊಳ್ಳಿ. ಮುಡಾ ಕ್ಲೀನ್ ಮಾಡಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಒಳ್ಳೆಯ ಪ್ರಾಧಿಕಾರವಾಗಬೇಕು, ಒಳ್ಳೆಯ ಜನಪ್ರತಿನಿಧಿಗಳು ಬೇಕು ಎಂದರು.
ಯತ್ನಾಳ್ ಬಿಜೆಪಿಯ ಜನಪ್ರಿಯ ನೇತಾರ. ವಕ್ಫ್ ಅಕ್ರಮಗಳ ಬಗ್ಗೆ ಮೊದಲು ಧ್ವನಿ ಎತ್ತಿದವರೇ ಯತ್ನಾಳ್. ಮುಖ್ಯಮಂತ್ರಿಗಳು ಕೇಸರಿ ಶಾಲು ಕಿತ್ತು ಬಿಸಾಕಿದರು, ಮುಡಾ ಪ್ರಕರಣದ ನಂತರ ಹಿಂದೂ ಧರ್ಮ - ದೇವರುಗಳ ಮೇಲೆ ಸಿಎಂಗೆ ಭಕ್ತಿ ಬಂದಿದೆ. ನಾನು ಸಹ ಯತ್ನಾಳ್ ಜತೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಮುಡಾ ಹಗರಣ ತಾರ್ಕಿಕ ಅಂತ್ಯ ಕಾಣುತ್ತದೆ : ಮುಡಾ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿರುವುದು ನಮಗೆ ವಿಶ್ವಾಸ ಬಂದಿದೆ. ಈ ಬಾರಿ ಮುಡಾ ಹಗರಣ ತಾರ್ಕಿಕ ಅಂತ್ಯ ಕಾಣುತ್ತದೆ ಎಂದು ಮೈಸೂರಿನಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಸಿಎಂ ಪ್ರಕರಣಕ್ಕೆ ಇಡಿ ಎಂಟ್ರಿಯಾಗಿರುವುದು ನಮಗೆ ವಿಶ್ವಾಸ ಬಂದಿದೆ. ಈ ಬಾರಿ ಮುಡಾ ಹಗರಣವು ತಾರ್ಕಿಕ ಅಂತ್ಯ ಕಾಣಲಿದೆ. ನಿನ್ನೆ ಇನ್ಕಲ್ ನಲ್ಲಿ ಇಡಿ ರೈಡ್ ನಡೆದಿದೆ. ಆದರೆ ನನಗಿರುವ ಮಾಹಿತಿ ಪ್ರಕಾರ, ಮೂಲ ದಾಖಲಾತಿಗಳನ್ನ ಅದೇ ಊರಿನ ಬೇರೋಬ್ಬರ ಮನೆಗೆ ರಾಕೇಶ್ ಪಾಪಣ್ಣ ತೆಗೆದುಕೊಂಡು ಹೋಗಿ ಇಟ್ಟಿದ್ದಾರೆ. ಹೀಗಾಗಿ ಮೂಲ ದಾಖಲಾತಿಗಳು ಇಡಿಗೆ ದೊರೆತಿಲ್ಲ ಅನಿಸುತ್ತದೆ. ಇಡಿಗೆ ಮನವಿ ಮಾಡುವುದು ಏನೆಂದರೆ, ಅಕ್ಕ-ಪಕ್ಕದ ಸ್ನೇಹಿತರ ಮನೆಯಲ್ಲಿ ಹುಡುಕಿದರೆ ಮೂಲ ದಾಖಲಾತಿಗಳು ಸಿಗಬಹುದು ಎಂಬ ಸಂಶಯ ವ್ಯಕ್ತಪಡಿಸಿದರು.
ನಿನ್ನೆ ಬೆಂಗಳೂರಿನಲ್ಲಿ ಬಿಲ್ಡರ್ ಮಂಜುನಾಥ್ ಮನೆ ಮೇಲೆ ಇಡಿ ದಾಳಿ ಮಾಡಿದೆ. ಈ ಪ್ರಕರಣದಲ್ಲಿ ಬಿಲ್ಡರ್ ಮಂಜುನಾಥ್ ಲೇಔಟ್ ಫಾರಂ ಆಗದೆ, ಸ್ಕೆಚ್ ಆಗದೆ, ಸೈಟ್ ನಂಬರ್ ಅನುಮೋದನೆಯಾಗದೆ, ಎಲ್ಲಾ ಸೈಟ್ಗಳನ್ನ ಸೆಟಲ್ಮೆಂಟ್ ಡೀಡ್ ನಲ್ಲಿ ಮಾಡಿದ್ದಾನೆ. ಈ ಕುರಿತು ಇಡಿಗೆ ದಾಖಲೆಗಳು ಸಿಕ್ಕಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಮುಡಾ ಪ್ರಕರಣ; ಮುಂದುವರೆದ ಇಡಿ ದಾಳಿ, ದಾಖಲೆಗಳ ಪರಿಶೀಲನೆ