ದಾವಣಗೆರೆ: ಇಲ್ಲಿನ ಹಳೆಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಸಾವಿರಾರು ಜನ ಭಕ್ತರು ಆಗಮಿಸಿ ಕೆಂಡ ಹಾಯ್ದು ಭಕ್ತಿ ಸಮರ್ಪಿಸುವುದು ವಿಶೇಷವಾಗಿದೆ.
ಆದರೆ, ಈ ಸಲ ಲೋಕಸಭಾ ಚುನಾವಣಾ ಕಣಕ್ಕಿಳಿದ ತಮ್ಮ ಪತ್ನಿ ಗೆಲುವಿಗಾಗಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಇವರೊಂದಿಗೆ ಮಕ್ಕಳು ಸಹ ಹರಕೆ ಹೊತ್ತಿದ್ದು, ತಾಯಿ ಪ್ರಭಾ ಗೆಲುವಿಗಾಗಿ ಕೆಂಡ ಪ್ರವೇಶ ಮಾಡಿ ಭಕ್ತಿ ಮೆರೆದರು.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಪರ್ವ ಶುರುವಾಗಿದ್ದು, ಸಚಿವ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಪತ್ನಿ ಗೆಲುವಿಗಾಗಿ ಕ್ಷೇತ್ರದಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಇಂದು ಸಚಿವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವೀರಭದ್ರೇಶ್ವರ ಸನ್ನಿಧಿಯಲ್ಲಿ ಬೆಂಕಿ ಕೆಂಡ ಹಾಯ್ದು ಮತದಾರರ ಗಮನ ಸೆಳೆದರು.
ದಾವಣಗೆರೆ ಹಳೆಪೇಟೆಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಪ್ರತಿ ವರ್ಷದಂತೆ ಕೆಂಡೋತ್ಸವ ಜರುಗಿತು. ಇಲ್ಲಿ ಹರಕೆ ಹೊತ್ತು ಕೆಂಡ ತುಳಿದರೆ ಸಾಕು ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಶ್ರೀ ವೀರಭದ್ರೇಶ್ವರ ಸನ್ನಿಧಿ ಕೆಂಡ ಪ್ರವೇಶ: ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಅಭ್ಯರ್ಥಿ ಪತ್ನಿ ಡಾ ಪ್ರಭಾ ಹಾಗೂ ಮಕ್ಕಳ ಸಮೇತ ಇಂದು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ವಿವಿಧ ಧಾರ್ಮಿಕ ಕಾಯಕ್ರಮಗಳಲ್ಲಿ ಭಾಗವಹಿಸಿದ್ದರು. ವೀರಭದ್ರೇಶ್ವರನಿಗೆ ಕೆಂಡ ಪ್ರವೇಶ ಮುನ್ನ ಸುಮಾರು ಅರ್ಧ ಗಂಟೆ ಕಾಲ ಪೂಜೆ ಸಲ್ಲಿಸಿದರು. ನಂತರ ಸಚಿವ ಮಲ್ಲಿಕಾರ್ಜುನ, ಪುತ್ರ ಸಮರ್ಥ ಶಾಮನೂರು, ಪುತ್ರಿ ಜೇಷ್ಠ ಶಾಮನೂರು ಜೊತೆಗೆ ಕೆಂಡ ತುಳಿದರು.
ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿರುವೆ- ಸಚಿವ ಮಲ್ಲಿಕಾರ್ಜುನ್; ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಉತ್ಸವ ಸಹ ಯಶಸ್ವಿಯಾಗಿ ಜರುಗಿತು. ವೀರಭದ್ರೇಶ್ವರ ದೇವರ ಕೆಂಡ ಪ್ರವೇಶದಲ್ಲಿ ಭಾಗಿಯಾಗಿದ್ದೇನೆ, ಜಿಲ್ಲೆಯಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಪ್ರಾರ್ಥಿಸಿರುವೆ. ಚುನಾವಣೆ ಹತ್ತಿರ ಬರುತ್ತಿದೆ. ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭೆ ಕಣದಲ್ಲಿದ್ದು, ಮತದಾರರ ಆಶೀರ್ವಾದವೂ ಸಿಗಲೆಂದು ಬೇಡಿಕೊಂಡಿರುವೆ ಎಂದು ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ತಿಳಿಸಿದರು.
ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಿಷ್ಟು; ಶ್ರೀ ವೀರಭದ್ರೇಶ್ವರ ಕೆಂಡ ಪ್ರವೇಶ ನಾನು ಮಾಡಿಲ್ಲ, ವೀರಭದ್ರೇಶ್ವರ ಗುಗ್ಗಳ ಇತ್ತು, ನಾನು ಆಶೀರ್ವಾದ ಪಡೆದುಕೊಂಡೆ, ನಮ್ಮ ಯಜಮಾನರು, ಮಕ್ಕಳು ಕೆಂಡ ಪ್ರವೇಶ ಮಾಡಿದರು. ದಾವಣಗೆರೆ ನಗರ, ಗ್ರಾಮಾಂತರ ಭಾಗದಲ್ಲಿ ಒಳ್ಳೆ ರೆಸ್ಪಾನ್ಸ್ ಇದ್ದು, ಗ್ಯಾರಂಟಿಗಳು ಕೈ ಹಿಡಿಯಲಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇದನ್ನೂಓದಿ:ಲೋಕಸಭಾ ಅಖಾಡದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ: ನಾಮಪತ್ರ ವಾಪಸ್ - Dingaleshwar Swamiji