ತುಮಕೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶನಿವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವೆ, ಶಿವಕುಮಾರ ಶ್ರೀಗಳಿದ್ದಾಗ ಮೋದಿಯವರು ಮಠಕ್ಕೆ ಬರ್ತಿದ್ರು, ಆಶೀರ್ವಾದ ಪಡೆಯುತ್ತಿದ್ರು. ಸ್ವಾಮೀಜಿ ಬಹಳ ಖುಷಿಪಡ್ತಿದ್ರು. ದೇಶಕ್ಕಾಗಿ ದುಡಿಯುವಂತಹ ಒಬ್ಬ ಪ್ರಧಾನಿ ನಮಗೆ ಸಿಕ್ಕಿದ್ದಾರೆ ಎನ್ನುತ್ತಿದ್ದರು. ಇಂದು ಅವರು ನಮ್ಮ ಮುಂದೆ ಇಲ್ಲ. ಆದರೆ ಅವರ ಆಶೀರ್ವಾದ, ಪ್ರೇರಣೆ ಇದೆ ಎಂದರು.
ಶ್ರೀಗಳ ಶಕ್ತಿ ನಮ್ಮೆಲ್ಲರಿಗೂ ದೇಶದ ಕೆಲಸ ಮಾಡಲು ಪ್ರೇರಣೆ ಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ಅದರಂತೆ ಗದ್ದುಗೆ ಮುಂದೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಮುಂದುವರೆದು, ನಮ್ಮ ಸರ್ಕಾರದಲ್ಲಿ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಉದ್ಯೋಗ ಸೃಷ್ಟಿಸುವ ಯೋಚನೆ ನಡೀತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸಿದ ಅವರು, ಕರ್ನಾಟಕ ಸರ್ಕಾರ ಗೋಲ್ಮಾಲ್ ಸರ್ಕಾರ. ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ಪ್ರತಿದಿನ ಒಂದೊಂದು ಇಲಾಖೆಯ ಅವ್ಯವಹಾರಗಳು ಹೊರಬರ್ತಿವೆ. ವಾಲ್ಮೀಕಿ ನಿಗಮ ಹಗರಣ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಆಚೆ ಬಂದಿರಲಿಲ್ಲ ಎಂದರು.
ಇಡಿ, ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. 187 ಕೋಟಿ ಹಣ ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆದರೆ ಹೈದರಾಬಾದ್ನಲ್ಲಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಚುನಾವಣೆಗೆ ಬಳಕೆ ಮಾಡಿದ್ದಾರೆ. ವೈನ್ ಶಾಪ್, ಜ್ಯುವೆಲರಿ ಶಾಪ್ಗಳಿಗೂ ಹಣ ವರ್ಗಾವಣೆ ಆಗಿದೆ. ರಾಜ್ಯದ ಬಡವರ ಹಣವನ್ನು ಚುನಾವಣಾ ಅವ್ಯವಹಾರ ಹಣವನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರೇ ಮುಡಾದಲ್ಲಿ ಹಗರಣ ಮಾಡಿ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅವರ ರಾಜೀನಾಮೆ ಕೇಳುತ್ತಿದ್ದೇವೆ. ಮುಡಾದ ಎಲ್ಲಾ ಫೈಲ್ಗಳು ಬೆಂಗಳೂರಿಗೆ ಶಿಫ್ಟ್ ಆಗಿವೆ. ಈ ಕೇಸ್ ಮುಚ್ಚಿ ಹಾಕ್ತಾರೆ. ದೇಸಾಯಿ ಕಮಿಟಿಯನ್ನು ಅದಕ್ಕಾಗಿಯೇ ಮಾಡಿದ್ದಾರೆ ಎಂದರು.
ಕೆಂಪಣ್ಣ ಕಮಿಟಿ ಮಾಡಿದ್ರು, ಏನಾಯಿತು?. ಆ ಕಮಿಟಿಯ ರಿಪೋರ್ಟ್ ಆಚೆನೇ ಬರಲಿಲ್ಲ. ಅದಕ್ಕಾಗಿಯೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು, ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸೌಧದ ಗುಮ್ಮಟದಲ್ಲಿ ಕಿರಿದಾದ ಬಿರುಕು; ಸ್ಪೀಕರ್ ಖಾದರ್ ಹೇಳಿದ್ದೇನು? - Vidhana Soudha