ಹುಬ್ಬಳ್ಳಿ : ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ವಿರುದ್ಧ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಪಠಾಣ್ ರೌಡಿಶೀಟರ್ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಯಾಸೀರ್ ಖಾನ್ ಪಠಾಣ್ ವಿರುದ್ಧ ಯಾವುದೇ ರೌಡಿಶೀಟರ್ ಪ್ರಕರಣಗಳಿಲ್ಲ. ಚುನಾವಣಾ ಅಧಿಕಾರಿಗಳು ಒತ್ತಡಕ್ಕೆ ಮಣಿದು ಪರಿಶೀಲನೆ ಮಾಡಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಈ ಬಗ್ಗೆ ಹಾವೇರಿ ಎಸ್ಪಿ ಸ್ಪಷ್ಟ ಮಾಹಿತಿ ನೀಡಿದ್ದಾರೆ ಎಂದರು.
ಬಸವರಾಜ ಬೊಮ್ಮಾಯಿ ಸತ್ಯಕ್ಕೆ ದೂರವಾದಂತಹ ಆಪಾದನೆ ಮಾಡುತ್ತಿದ್ದಾರೆ. ಎಸ್ಪಿ ಅವರ ಮೇಲೆ ಆಪಾದನೆ ಮಾಡುವುದು ತಪ್ಪು. ಚುನಾವಣಾಧಿಕಾರಿ ಮೇಲೆ ಈ ರೀತಿ ಆಪಾದನೆ ಮಾಡೋದು ಸಮಂಜಸವಲ್ಲ. ಪ್ರತಿ ಬಾರಿಯೂ ಮುಸ್ಲಿಂ ಅಭ್ಯರ್ಥಿ ಚುನಾವಣೆಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಬಿಜೆಪಿಯವರು ಈ ರೀತಿ ಆಪಾದನೆ ಮಾಡುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಬೊಮ್ಮಾಯಿ ಅವರು ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರು.
ಹಿಂದೂ - ಮುಸ್ಲಿಂ ವಿಚಾರದ ಬಗ್ಗೆ ಮಾತನಾಡುತ್ತಾರೆ: ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಹಿಂದೂ - ಮುಸ್ಲಿಂ ವಿಚಾರದ ಬಗ್ಗೆ ಮಾತನಾಡುತ್ತಾರೆ. ಈ ಹಿಂದೆ ಖಾದ್ರಿ ಅವರ ಬಗ್ಗೆಯೂ ಆರೋಪ ಮಾಡಿದ್ದರು. ಬೊಮ್ಮಾಯಿ ಅವರು ತಮ್ಮ ಹೇಳಿಕೆಯನ್ನ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ : ಉಪಚುನಾವಣೆಯಲ್ಲಿ ಸರ್ಕಾರ ಯಾವುದೇ ಪ್ರಭಾವ ಬೀರಿಲ್ಲ. ನಾನೇನಾದ್ರು ಪ್ರಭಾವ ಬೀರಿರುವುದು ಸಾಬೀತಾದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಪ್ರಣಾಳಿಕೆ ಮೇಲೆ ಮತ ಕೇಳಬೇಕು : ಬಿಜೆಪಿಯವರು ಅವರ ಪ್ರಣಾಳಿಕೆ ಮೇಲೆ ಮತ ಕೇಳಬೇಕು. ಅವರ ಅಭಿವೃದ್ದಿ ಮೇಲೆ ಮತ ಕೇಳಬೇಕು. ಅದು ಬಿಟ್ಟು ಒಬ್ಬ ಗೃಹ ಸಚಿವರಾದವರು, ಮುಖ್ಯಮಂತ್ರಿಯಾದವರು ಈ ರೀತಿ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ : ಬೊಮ್ಮಾಯಿ ಬಳಿ ದುಡ್ಡಿದೆ, ಲೀಡರ್ಗಳನ್ನು ಬುಕ್ ಮಾಡ್ತಾರೆ: ಯಾಸೀರ್ ಖಾನ್ ಪಠಾಣ್