ಬೆಳಗಾವಿ: ಹೊರ ವಲಯದ ನಾವಗೆ ಗ್ರಾಮದ ಸ್ನೇಹಂ ಅಂತಾರಾಷ್ಟ್ರೀಯ ಇನ್ಸೂಲಿನ್ ಟೇಪ್ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ರಾತ್ರಿ ಭೇಟಿ ನೀಡಿ ಪರಿಶೀಲಿಸಿದರು.
ಭೀಕರ ಅಗ್ನಿ ದುರಂತರದಲ್ಲಿ ಕಾರ್ಮಿಕ ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ (20) ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಮೂವರು ಕಾರ್ಮಿಕರಿಗೆ ಚಿಕಿತ್ಸೆ ಮುಂದುವರಿದಿದೆ. ಬುಧವಾರ ರಾತ್ರಿ ಕಾರ್ಖಾನೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಘಟನೆಯ ಕುರಿತು ಮಾಹಿತಿಯನ್ನು ನೀಡಿದರು.
ಯಾವ ರೀತಿಯ ಇನ್ಸುಲಿನ್ ಟೇಪ್ ತಯಾರಿಸುತ್ತಿದ್ದರು ಎಂಬುದನ್ನು ಪರಿಶೀಲಿಸಿ, ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡವರ ಬಗ್ಗೆಯೂ ಸಚಿವ ಸತೀಶ ಜಾರಕಿಹೊಳಿ ಮಾಹಿತಿ ಪಡೆದರು. ಮೃತ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ (20) ಅವರ ಕುಟುಂಬಕ್ಕೆ ಹಾಗೂ ಅಗ್ನಿ ಅವಘಡದಲ್ಲಿ ಗಂಭೀರ ಗಾಯಗೊಂಡವರಿಗೂ ಸರ್ಕಾರದಿಂದ ಪರಿಹಾರ ವಿತರಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಈ ವೇಳೆ ಜಿಪಂ ಸಿಇಒ ರಾಹುಲ್ ಶಿಂಧೆ ಸೇರಿ ಮತ್ತಿತರರು ಇದ್ದರು.
ಅವಘಡ ಕುರಿತು ಕಾರ್ಖಾನೆ ಮಾಲೀಕ ಅನೀಶ್ ಮೇತ್ರಾಣಿ ಪ್ರತಿಕ್ರಿಯಿಸಿದ್ದು, "ಬೆಂಕಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೊಡಲಾಗುವುದು. ಅಲ್ಲದೇ, ಆತನ ಮನೆಯ ಕುಟುಂಬದವರಿಗೆ ನೌಕರಿ ನೀಡುವ" ಭರವಸೆ ನೀಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಘಾತ ವ್ಯಕ್ತಪಡಿಸಿದ್ದು, " ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ ಮೃತರಾಗಿರುವುದಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿರುವ ಸಚಿವರು ದೂರವಾಣಿ ಮೂಲಕ ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಸೂಕ್ತ ಪರಿಹಾರ ಒದಗಿಸುವುದಾಗಿ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಸಚಿವೆ ಪ್ರಾರ್ಥಿಸಿದ್ದಾರೆ.