ಬೆಳಗಾವಿ: ನಾಗಮಂಗಲ ಗಲಭೆಯನ್ನು ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸಿರುವುದಕ್ಕೆ ತಿರುಗೇಟು ನೀಡಿರುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಅದನ್ನು ಬಿಟ್ಟು ಬೇರೆ ಏನು ಹೇಳೋದಿದೆ ಅವರಿಗೆ. ರಾಜ್ಯದಲ್ಲಿ 60 ಸಾವಿರ ಗಣೇಶಮೂರ್ತಿಗಳು ಪ್ರತಿಷ್ಠಾಪನೆ ಆಗಿವೆ. ಎಲ್ಲೋ ಒಂದು ಕಡೆ ಆಕಸ್ಮಿಕವಾಗಿ ಗಲಾಟೆ ಆಗಿರಬಹುದು. ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಬಂಧನ ಮಾಡಿದ್ದಾರೆ ಅಂತಾ ನೀವು ಬೆಂಗಳೂರಿನವರನ್ನೇ ಕೇಳಬೇಕು. ಸಿಕ್ಕ ಸಿಕ್ಕ ಹಾಗೆ ಯಾರು ಅವರಿಗೆ ಬಾಯಿಗೆ ಬಂದಂತೆ ಬೈಯುವಂತೆ ಹೇಳಿದ್ರಾ?, ಕಾಂಗ್ರೆಸ್ನವರು ಹೇಳಿದ್ರಾ? ಬಿಜೆಪಿಯವರು ಹೇಳಿದ್ರಾ? ಜೆಡಿಎಸ್ ನವರು ಹೇಳಿದ್ರಾ ಎಂದು ಟಾಂಗ್ ಕೊಟ್ಟರು.
ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧಿಸಿದ್ದಾರೆ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಆರೋಪದ ಬಗ್ಗೆ ಮಾತನಾಡಿ, ಬಂಧನ ಮಾಡಿಲ್ಲ ಅಂದರೆ ಮಾಡಿಲ್ಲ ಅಂತಾ ಹೇಳ್ತಾರೆ. ಬಂಧನ ಮಾಡಿದರೆ ಈ ರೀತಿ ಹೇಳ್ತಾರೆ ಎಂದು ಕುಟುಕಿದರು.
ಬೆಳಗಾವಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸ್ತಾವನೆ ಕುರಿತು ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುವಲ್ಲಿ ಬೆಳಗಾವಿ ಬಿಟ್ಟು ರಾಜ್ಯದಲ್ಲಿ ಬೇರೆ ಎಲ್ಲಿಯೂ ಅಷ್ಟೊಂದು ಅವಕಾಶ ಇಲ್ಲ. ಈಗಾಗಲೇ 6 ಹೊಸ ಟರ್ಮಿನಲ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ, ಮತ್ತಷ್ಟು ಬೆಳೆಯಲಿದೆ ಎಂದರು.
ನಾಳೆ ವಂದೇ ಭಾರತ್ ರೈಲನ್ನು ಬಿಜೆಪಿಯವರು ಬೆಳಗಾವಿಯಲ್ಲಿ ಸ್ವಾಗತಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಾವು ಖಾನಾಪುರದಲ್ಲಿ ಸ್ವಾಗತಿಸುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದ ಸತೀಶ ಜಾರಕಿಹೊಳಿ, ಪುಣೆಯಿಂದ ಹುಬ್ಬಳ್ಳಿಗೆ ಹೋಗಲು ಯಾವುದೇ ತಾಂತ್ರಿಕ ಸಮಸ್ಯೆ ಇರುವುದಿಲ್ಲ. ಆದರೆ, ಬೆಂಗಳೂರಿನಿಂದ ಬೆಳಗಾವಿಗೆ ಬರಲು ಸಮಸ್ಯೆ ಇರುತ್ತಾ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ಒಂದೇ ಬಾರಿಗೆ ಆಗುವುದಿಲ್ಲ. ಸ್ವಲ್ಪ ದಿನ ಕಾಯಬೇಕಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಶಾಸಕ ಮುನಿರತ್ನ ಅವರದ್ದೇ ಆಡಿಯೋ ಎಂದು ಖಚಿತವಾದರೆ ಕಾನೂನು ಕ್ರಮ: ಸಚಿವ ಜಿ. ಪರಮೇಶ್ವರ್ - G Parameshwara