ಬೆಳಗಾವಿ: ಬೆಳಗಾವಿ ತಹಶೀಲ್ ಕಚೇರಿಯಲ್ಲಿ ದ್ವಿತೀಯ ದರ್ಜೆ ನೌಕರ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕನ ಕಿರುಕುಳ ಕಾರಣ ಎಂಬ ಆರೋಪಕ್ಕೆ ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಆಪ್ತ ಸಹಾಯಕ ಮಾಡಿರಬಹುದು. ಅದಕ್ಕೂ ಸಚಿವರಿಗೂ ಏನು ಸಂಬಂಧ. ನೇರವಾಗಿ ಸಚಿವರ ಹೆಸರು ಹೇಳಿಲ್ಲ. ಸಚಿವರ ಪಿಎ ಹೆಸರನ್ನು ಮೃತ ನೌಕರ ಹೇಳಿದ್ದಾನೆ. ಹಾಗಾಗಿ, ಪಿಎ ವಿರುದ್ಧ ಪೊಲೀಸರು ವಿಚಾರಣೆ ನಡೆಸಬೇಕು ಎಂದು ಸತೀಶ ಜಾರಕಿಹೊಳಿ ಹೇಳಿದರು.
ಪ್ರಕರಣದಲ್ಲಿ ಏನಾಗಿದೆ..? ಯಾಕೆ ಆಗಿದೆ..? ಎಂದು ಪೊಲೀಸರು ತನಿಖೆ ನಡೆಸಬೇಕು. ಯಾರಿಂದ ಆತ್ಮಹತ್ಯೆ ಆಗಿದೆ ಎಂದು ಈಗಲೇ ಹೇಳಲು ಬರುವುದಿಲ್ಲ. ಹಾಗಾಗಿ, ಪೊಲೀಸ್ ತನಿಖೆಯ ಬಳಿಕ ಸತ್ಯಾಂಶ ಹೊರ ಬರಬೇಕು ಎಂದರು.
ಕಚೇರಿಯಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಿ ಎಂದು ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಮೃತನು ಮೆಸೇಜ್ ಮಾಡಿರುವ ಬಗ್ಗೆ ಪೊಲೀಸರು ತನಿಖೆ ಮಾಡಬೇಕು. ಅಲ್ಲಿಯವರೆಗೂ ಏನೂ ಹೇಳಲು ಬರುವುದಿಲ್ಲ. ನಾನು ತನಿಖಾ ಅಧಿಕಾರಿ ಅಲ್ಲ. ತನಿಖೆಯ ವರದಿ ಬರುವವರೆಗೂ ಕಾಯ್ದು ನೋಡೋಣ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಹೇಳಿದ್ದೇನು..? ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆತ್ಮಹತ್ಯೆ ಬಗ್ಗೆ ಬೆಳಗ್ಗೆ ಗೊತ್ತಾಯಿತು. ಕುಟುಂಬಸ್ಥರಿಗೆ ನಾನು ವೈಯಕ್ತಿಕವಾಗಿ ಸಂತಾಪ ಸೂಚಿಸುತ್ತೇನೆ. ಡಿಸಿಪಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತನಿಖೆ ಜಾರಿಯಲ್ಲಿದೆ. ನಮ್ಮ ಎಲ್ಲ ಸಹಕಾರವನ್ನು ಪೊಲೀಸ್ ಇಲಾಖೆಗೆ ಕೊಡುತ್ತೇವೆ. ಮೃತ ವ್ಯಕ್ತಿಯಿಂದ ಯಾವುದೇ ಮನವಿ ಬಂದಿರಲಿಲ್ಲ. ವಾಟ್ಸ್ಆ್ಯಪ್ ಮೆಸೇಜ್ ಬಗ್ಗೆ ತನಿಖೆ ಆಗಬೇಕು. ಈ ಬಗ್ಗೆ ತನಿಖೆ ಮಾಡಲು ಪೊಲೀಸರಿಗೆ ಹೇಳಿದ್ದೇನೆ. ಸೂಕ್ಷ್ಮತೆಯಿಂದ ತನಿಖೆ ಮಾಡಲು ತಿಳಿಸಿದ್ದೇನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಒತ್ತಡ ಇಲ್ಲದೇ ತನಿಖೆ ಮಾಡುತ್ತೇವೆ. ಕಂದಾಯ ಇಲಾಖೆಯ ಮುಖ್ಯಸ್ಥ ನಾನೇ ಇರುತ್ತೇನೆ. ಹಾಗಾಗಿ, ಪೊಲೀಸ್ ಇಲಾಖೆಯ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರಬರಲಿದೆ ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಆಗ್ರಹ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಕಾರ್ಯದರ್ಶಿ ಸೋಮು ಅವರೇ ತಮ್ಮ ಆತ್ಮಹತ್ಯೆಗೆ ಕಾರಣವೆಂದು ಪತ್ರ ಬರೆದಿಟ್ಟು ಎಸ್ಡಿಎ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಹೊಣೆ ಹೊತ್ತು ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನೇಕ ದಿನಗಳಿಂದ ನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರುದ್ರಣ್ಣ ವಾಟ್ಸ್ಆ್ಯಪ್ ಸಂದೇಶ ಕಳಿಸಿದ್ದಾರೆ. ನನ್ನ ಸಾವಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಕಾರ್ಯದರ್ಶಿ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಸಂದರ್ಭದಲ್ಲೂ ಇದೇ ಮಾದರಿ ಪತ್ರ ಬರೆದಿಡಲಾಗಿತ್ತು ಎಂದು ಹೇಳಿದರು. ಹೇಗೆ ಈಶ್ವರಪ್ಪ ಅವರು ರಾಜೀನಾಮೆ ಕೊಟ್ಟಿದ್ದರೋ ಅದೇ ಮಾದರಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲೇ ದ್ವಿತೀಯ ದರ್ಜೆ ಸಹಾಯಕ ಆತ್ಮಹತ್ಯೆ
ಇದನ್ನೂ ಓದಿ: ಜಾನಪದ ಗಾಯಕ ಮಾಳು ನಿಪನಾಳಗೆ ಬೆಳಗಾವಿ ಎಸ್ಪಿ ಎಚ್ಚರಿಕೆ