ಬೆಳಗಾವಿ: ಮಾಜಿ ಪ್ರಧಾನಿ ದಿವಂಗತ ಜವಾಹರ್ ಲಾಲ್ ನೆಹರು ಅವರು 1964ರಲ್ಲಿಯೇ ಒನ್ ನೇಷನ್ ಒನ್ ಎಲೆಕ್ಷನ್‌ಗೆ ಪ್ರಯತ್ನ ಮಾಡಿದ್ದರು. ಇದು ಯಾವ ರೀತಿ ಇದೆ ಎಂಬ ಮಾಹಿತಿ ಇಲ್ಲ. ಮೇಲ್ನೋಟದಲ್ಲಿ ಚೆನ್ನಾಗಿ ಕಾಣುತ್ತಿದೆ. ನಾನು ಒನ್ ನೇಷನ್ ಒನ್ ಎಲೆಕ್ಷನ್‌ಗೆ ವೈಯಕ್ತಿಕವಾಗಿ ವಿರೋಧ ಮಾಡಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಡಿಜಿಟಲ್ ಇಂಡಿಯಾ, ಖೇಲೋ ಇಂಡಿಯಾ, ಮೆಕ್ ಇನ್ ಇಂಡಿಯಾ ಘೋಷಣೆಗಳಾಗಿವೆ. ಜಿಎಸ್ಟಿ ಘೋಷಣೆ ಮಾಡಿದರು. ಆದರೆ ಘೋಷಣೆಗಳ ಪರಿಣಾಮ ಏನಾಗಿದೆ ಎಂದು ಹೇಳಲಿ. ಒನ್ ನೇಷನ್ ಒನ್ ಎಲೆಕ್ಷನ್ ಹೇಳೋದಕ್ಕೆ ಚೆನ್ನಾಗಿದೆ. ಮೇಕ್ ಇನ್ ಇಂಡಿಯ ಏನಾಯ್ತು? ಇದರಿಂದ ಎಷ್ಟು ಜನಕ್ಕೆ ಉಪಯೋಗ ಆಗಿದೆ ಎಂದು ತಿಳಿಸಲಿ. ಒನ್ ನೇಷನ್ ಒನ್ ಎಲೆಕ್ಷನ್ ಸ್ಲೋಗನ್‌ಗಾಗಿ ಸೀಮಿತ ಆಗಬಾರದು. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಎಲ್ಲರೂ ಸೇರಿ ನಡೆದರೆ ದೇಶ ನಡೆಯುತ್ತದೆ ಎಂದರು.
ಇಂದು ಸದನದಲ್ಲಿ ಪ್ರತಿಪಕ್ಷಗಳು ವಕ್ಫ್ ಬೋರ್ಡ್ ಕುರಿತು ನಿಲುವಳಿ ಸೂಚನೆ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ನಾವು ವಕ್ಪ್ ಚರ್ಚೆಗೆ ತಯಾರಿದ್ದೇವೆ. ವಿರೋಧ ಪಕ್ಷಗಳು ವಕ್ಫ್ ಕುರಿತು ಯಾವುದೇ ದಾಖಲೆ ಇಲ್ಲದೆ ಮಾತನಾಡುತ್ತಿದ್ದಾರೆ. ವಕ್ಪ್ ಅನಾನುಕೂಲವಾಗಿದೆ ಎಂದು ದಾಖಲೆ ನೀಡಲಿ ಎಂದು ಸವಾಲು ಹಾಕಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ 4567ಕ್ಕೂ ಅಧಿಕ ಮ್ಯುಟೆಷನ್ ಚೆಂಜ್ ಆಗಿದೆ, ಇದರ ಬಗ್ಗೆ ಚರ್ಚೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತಿಲ್ಲ ಎಂಬ ವಿಚಾರಕ್ಕೆ, ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಬಿಜೆಪಿಯವರಿಗೆ ಮನಸ್ಸಿಲ್ಲ. ಯು.ಟಿ.ಖಾದರ್ ಸಭಾಪತಿಗಳಾದ ಬಳಿಕ ಅತಿಹೆಚ್ಚು ಚರ್ಚೆ ಮಾಡಲು ಬಿಜೆಪಿಯವರಿಗೆ ಕಾಲಾವಕಾಶ ನೀಡಿದ್ದಾರೆ. ಆದರೂ ಬಿಜೆಪಿಯವರು ಚರ್ಚಿಸುತ್ತಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ : ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ಗೆ ಸಚಿವ ಸಂತೋಷ್ ಲಾಡ್ ಬೇಸರ - MINISTER SANTOSH LAD