ಧಾರವಾಡ : ದಿಂಗಾಲೇಶ್ವರ ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರೆ ಏನು ಡ್ಯಾಮೇಜ್ ಆಗಲಿದೆ ಅನ್ನೋದನ್ನು ಹೇಳೋಕೆ ಆಗಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ರು. ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿಂಗಾಲೇಶ್ವರ ಶ್ರೀ ಬಹಳ ಪ್ರಭಾವಿಗಳು. ಅವರಿಗೆ ಎಲ್ಲ ಸಮಾಜದ ಜನರು ಬೆಂಬಲಿಗರಿದ್ದಾರೆ. ಅವರು ಇರುವ ಮಠ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮಠ. ಅವರು ಕೇವಲ ಧಾರವಾಡ ಜಿಲ್ಲೆಗೆ ಮಾತ್ರ ಸೀಮಿತರಾದವರಲ್ಲ, ಇಡೀ ರಾಜ್ಯಕ್ಕೆ ಬೇಕಾದವರು. ಅವರು ಚುನಾವಣೆಗೆ ಸ್ಪರ್ಧಿಸಿದರೆ, ಯಾವ ರೀತಿ ಆಗುತ್ತೆ ಅನ್ನೋದನ್ನು ಹೇಳೋಕೆ ಕಷ್ಟ ಆಗುತ್ತದೆ ಎಂದು ಹೇಳಿದರು.
''ಮೋದಿಯವರ ಗಾಳಿ ಕಡಿಮೆ ಕಾಣುತ್ತಿದೆ. ಜನರ ನಂಬಿಕೆಯನ್ನ ಬಿಜೆಪಿ ಕಳೆದುಕೊಂಡಿದೆ. ಸುಳ್ಳು ಹೇಳಿ ಮನಸ್ಸು ಗೆದ್ದಿರುವ ಬಿಜೆಪಿ ಪರ ಈ ಜನರು ಇಲ್ಲ. 10 ವರ್ಷ ಏನು ಮಾಡಿದ್ರು ಅನ್ನೋದನ್ನು ಬಿಟ್ಟು, ಬರೀ ಟೀಕೆ. ಇದನ್ನೇ ಹೇಳುತ್ತಿದ್ದಾರೆ'' ಎಂದು ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ಹರಿಹಾಯ್ದರು.
ಇದೇನು ಹೊಸದಲ್ಲ. ಅಮಿತ್ ಶಾ, ಮೋದಿ ಬಂದಾಗ ಲೋಕಲ್ ಒಂದೆರಡು ಹೇಳಿರುತ್ತಾರೆ. ಅದನ್ನೇ ಹೇಳ್ತಾರೆ. ಹೊಸದು ಏನ್ ಹೇಳ್ತಾರೆ. ಈಗ 40-50 ಸಾರಿ ಬರ್ತಾರೆ. ಕಳೆದ 10 ವರ್ಷದಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಎಷ್ಟು ಸಮಯ ಕಳೆದಿದ್ದಾರೆ ನೋಡಿ. ಪ್ರಧಾನಮಂತ್ರಿ ಕೇವಲ ಪ್ರಚಾರಕ್ಕೆ ಮಾತ್ರ ಸಾವಿರಾರು ದಿನ ಸೀಮಿತ ಇಟ್ಟಿದ್ದಾರೆ ಎಂದು ಲಾಡ್ ಆರೋಪಿಸಿದರು.
ಇವರು ಯಾವ ರೀತಿ ಅಧಿಕಾರ ನಡೆಸುತ್ತಾರೆ ನೀವೇ ಹೇಳಿ. ಪ್ರಧಾನಿ ಒಂದೊಂದು ರಾಜ್ಯಕ್ಕೆ 40 ಸಾರಿ ಹೋದ್ರೆ, ಯಾವ ರೀತಿ ಪ್ರಚಾರಕ್ಕೆ ಸೀಮಿತ ನೀವೇ ಹೇಳಿ. ಅವರನ್ನು ಬಿಟ್ಟರೆ ಬೇರೆ ಯಾರೂ ಪ್ರಚಾರ ಮಾಡಲ್ವಾ?. ಇವರ ಬಳಿ ಬ್ರ್ಯಾಂಡ್ ಮೋದಿ ಬಿಟ್ಟರೆ, ಬ್ರ್ಯಾಂಡ್ ಇಂಡಿಯಾ ಇಲ್ಲ. ಇಂಡಿಯಾಗಿಂತ ದೊಡ್ಡ ಬ್ರ್ಯಾಂಡ್ ಆಗಿ ಮೋದಿಯವರನ್ನು ಕೂರಿಸಿದ್ದಾರೆ. ಈ ಬ್ರ್ಯಾಂಡ್ನ ಮಾರಬೇಕು. ಈಗ ಇಂಡಿಯಾ, ಭಾರತ, ಹಿಂದೂಸ್ತಾನ್ ಏನೂ ಇಲ್ಲ. ಬ್ರ್ಯಾಂಡ್ ಮೋದಿ ಅಷ್ಟೇನೆ. ಅದನ್ನೇ ತೋರಿಸಿ ಮತ ಕೇಳುವುದು ಬಿಟ್ಟರೆ ಏನೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೆ ಮಾತನಾಡಿದ್ರೆ ಸರ್ಕಾರ ಬೀಳುತ್ತೆ ಅಂತ ಹೇಳ್ತಾರೆ. ಕೇಂದ್ರದಲ್ಲಿ ಸರ್ಕಾರ ಬಂದಾಗೊಮ್ಮೆ 50-60 ಶಾಸಕರನ್ನು ಖರೀದಿ ಮಾಡುವ ಕೆಲಸ ಮಾಡ್ತಾರೆ. ಹೀಗಾಗಿ ಜನರನ್ನ ನಾವು ಜಾಗೃತಿ ಮಾಡುತ್ತಿದ್ದೇವೆ. ಇವರು ಸಂವಿಧಾನವನ್ನೇ ಬದಲು ಮಾಡ್ತೀವಿ ಅಂತಾರೆ. ಸಂವಿಧಾನದಲ್ಲಿ ತಿದ್ದುಪಡಿ ತರುವುದೇ ಬೇರೆ, ಬದಲಾವಣೆ ಮಾಡುವುದೇ ಬೇರೆ. ಬಿಜೆಪಿ ಏನೇ ಮಾಡಿದ್ರೂ ನನಗೆ ಇಂಟ್ರೆಸ್ಟ್ ಇಲ್ಲ. ಆದ್ರೆ 10 ವರ್ಷದಲ್ಲಿ ಇವರು ಏನು ಮಾಡಿದ್ದಾರೆ ಅನ್ನೋದಕ್ಕೆ ಉತ್ತರ ಕೊಡಿ. 27 ಸಾವಿರ ರೂಪಾಯಿ ಇದ್ದ ಚಿನ್ನದ ಬೆಲೆ, ಈಗ 67 ಸಾವಿರ ಆಗಿದೆ ಎಂದರು.
58 ರೂ. ಇದ್ದ ಡಾಲರ್ ಬೆಲೆ 84 ರೂ. ಆಗಿದೆ. 30 ರೂಪಾಯಿ ಇದ್ದ ಸಕ್ಕರೆ 50 ರೂಪಾಯಿ ಆಗಿದೆ. 30 ರೂ. ಇದ್ದ ಹಾಲು 54 ರೂ. ಆಗಿದೆ. 80 ರೂಪಾಯಿ ಇದ್ದ ಅಡುಗೆ ಎಣ್ಣೆ 250 ರೂಪಾಯಿ ಆಗಿದೆ. ಇಂತಹ ಪ್ರಮುಖ ವಿಷಯಗಳಿಗೆ ಉತ್ತರ ಕೊಡಲಿ. ಅಮಿತ್ ಶಾ ಬಂದು ಈಶ್ವರಪ್ಪ ಕಡೆ ಮಾತನಾಡಿಸಿ ಹೋದ್ರು ಅನ್ನೋದು ನನಗೆ ಇಂಟ್ರೆಸ್ಟ್ ಇಲ್ಲ. ಸ್ವಿಸ್ ಬ್ಯಾಂಕ್ನಿಂದ ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡ್ತೀನಿ ಅಂತ ಹೇಳಿದ್ರು. ಬುಲೆಟ್ ಟ್ರೈನ್ ಮಾಡ್ತೀವಿ ಅಂತ ಹೇಳಿದ್ರು. 100 ಹೊಸ ಸ್ಮಾರ್ಟ್ ಸಿಟಿ ಮಾಡ್ತೀವಿ ಅಂದಿದ್ರು. ರೈತರ ಸಾಲಮನ್ನಾ ಬಗ್ಗೆ ಹೇಳಿದ್ರು. ಜಿಡಿಪಿ ಬಗ್ಗೆ ಮಾತನಾಡಿ ಎಂದು ಲಾಡ್ ಸವಾಲು ಹಾಕಿದ್ರು.
ಬಾಂಗ್ಲಾದೇಶದಲ್ಲಿ ಒಂದು ತಲಾದಾಯ 2.30 ಲಕ್ಷ ಇದೆ. ನಮ್ಮ ದೇಶದ್ದು 1.80 ಲಕ್ಷ ಇದೆ. 2014ರಲ್ಲಿ 97ಸಾವಿರ ರೂ. ಇತ್ತು. 2004 ರಲ್ಲಿ 29 ಸಾವಿರ ಇತ್ತು. 2004 ರಲ್ಲಿ 700 ಬಿಲಿಯನ್ ಡಾಲರ್ ಜಿಡಿಪಿ ಇತ್ತು. 2014 ರಲ್ಲಿ 2.3 ಟ್ರಿಲಿಯಲ್ ಡಾಲರ್ ಮಾಡಿದ್ವಿ. ಚೈನಾ 2 ರಿಂದ 10 ಟ್ರಿಲಿಯನ್ ಆಯ್ತು. ಇದರ ಬಗ್ಗೆ ಮಾತನಾಡಿದ್ರೆ ನಮಗೆ ಸಂತೋಷ ಆಗುತ್ತದೆ. ಮೋದಿ, ಅಮಿತ್ ಶಾ ಬಂದು ಮಾತನಾಡಿ ಹೋದ್ರೆ ಅವರ ಬಗ್ಗೆ ನನಗೆ ಆಸಕ್ತಿ ಇಲ್ಲ. ಸುಬ್ರಹ್ಮಣ್ಯಂ ಸ್ವಾಮಿ ಅವರು ಹೇಳಿದ್ದಾರೆ. ಚೈನಾ 4500 ಸ್ಕ್ವೇರ್ ಮೀಟರ್ ಭಾರತದ ಒಳಗೆ ನುಗ್ಗಿದೆ ಅಂತ ಹೇಳಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿಶ್ವಗುರು, ಪವರ್ ಫುಲ್, ಉಕ್ರೇನ್- ರಷ್ಯಾ ಯುದ್ಧ ನಿಲ್ಲಿಸುವಂತವರು. ಚೈನಾವನ್ನ ಯಾಕೆ ಎದುರಿಸಲ್ಲ. ಹಿಮಾಚಲಪ್ರದೇಶದ 30 ಹಳ್ಳಿಗಳಿಗೆ ಚೈನಾ ಹೆಸರು ಇಟ್ಟಿದ್ದಾರೆ. ಇದರ ಬಗ್ಗೆ ಉತ್ತರ ಕೊಡಬೇಕು ಅಲ್ವಾ?. ಚೈನಾದ ಬೀಜಿಂಗ್ಗೆ ನಿಮ್ಮ ಹೆಸರು ಕೊಡಿ ನೋಡೋಣ. ಚೀನಾದ ಹಳ್ಳಿಗಳಿಗೂ ನಿಮ್ಮ ಹೆಸರು, ಭಾರತದ ಹೆಸರು ಕೊಡಿ ನೋಡೋಣ. ಎಲ್ಲಿದೆ ಮತ್ತೆ ನಿಮ್ಮ ಹವಾ.? ಬಂದು ರೋಡ್ ಶೋನಲ್ಲಿ ಏನೋ ಹೇಳಿ ಹೋಗೋದು, ಜನರ ದಿಕ್ಕು ತಪ್ಪಿಸುವುದು ಇದೆ ಆಗಿದೆ ಎಂದು ಸಚಿವ ಲಾಡ್ ಟೀಕಿಸಿದರು.
3 ಲಕ್ಷ ಕೋಟಿ ಕಪ್ಪು ಹಣ ಇದೆ ಎಂದು ಹೇಳಿದ್ರು: ''ಚುನಾವಣಾ ಬಾಂಡ್ ಬಗ್ಗೆ ಯಾಕೆ ಮಾತನಾಡಿಲ್ಲ. ಹಗಲು ದರೋಡೆ ಮಾಡಿದವರು ಇವರು. ದೇಶಾಭಿಮಾನ, ಹಿಂದುತ್ವ, ಪಾಕಿಸ್ತಾನ, ತಾಲಿಬಾನ್ ಅಂತ ಎಷ್ಟು ಸುಳ್ಳು ಹೇಳ್ತೀರಿ. ದಯಮಾಡಿ ಕೈ ಮುಗಿತೀವಿ ಸಾಕು ಮಾಡಿ ಇದನ್ನ. ದೇಶ ಪ್ರಗತಿ ಆಗಬೇಕು. ಯುವ ಜನತೆಗೆ ಅವಕಾಶ ಸಿಗಬೇಕು. ಹಿಂದುತ್ವದ ಬಗ್ಗೆ ಮತ ಕೇಳಿ 10 ವರ್ಷ ಏನೂ ಮಾಡಿಲ್ಲ. ಸುಪ್ರೀಂಕೋರ್ಟ್ ನೋಟು ಅಮಾನ್ಯೀಕರಣದ ಬಗ್ಗೆ ಹೇಳಿದೆ. ಅದರ ಬಗ್ಗೆ ಯಾರೂ ಮಾತನಾಡಿಲ್ಲ. 3 ಲಕ್ಷ ಕೋಟಿ ಕಪ್ಪು ಹಣ ಇದೆ ಎಂದು ಹೇಳಿದ್ರು. ಆ ಕಪ್ಪು ಹಣ ಎಲ್ಲಿ ಹೋಯ್ತು?'' ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ : ಪ್ರಧಾನಿ ಮೋದಿ ವಿರೋಧಿ ಅಲೆ, ಗ್ಯಾರೆಂಟಿಗಳು ನಮ್ಮ ಕೈ ಹಿಡಿಯಲಿವೆ: ಸಂತೋಷ್ ಲಾಡ್ - Santosh Lad