ಬೆಂಗಳೂರು: ಐಟಿ ಕ್ಷೇತ್ರದ ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾಪಕ್ಕೆ ಕೆಲವರು ಪರ ಇದ್ದಾರೆ, ಒಂದಿಷ್ಟು ಜನ ವಿರೋಧ ಮಾಡ್ತಿದ್ದಾರೆ. ಅಂತಿಮವಾಗಿ ಸರ್ಕಾರ ತೀರ್ಮಾನ ಮಾಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಐಟಿ ನೌಕರರು 14 ಗಂಟೆ ಕೆಲಸ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಯಾವುದೋ ಇಂಡಸ್ಟ್ರಿ ಕಡೆಯಿಂದ ಡಿಮ್ಯಾಂಡ್ ಬಂದಿದೆ. ಐಟಿ ಉದ್ಯೋಗಿಗಳ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಪ್ರಸ್ತಾಪಕ್ಕೆ ಕೆಲವರು ಪರ ಇದ್ದಾರೆ, ಒಂದಿಷ್ಟು ಜನ ವಿರೋಧ ಮಾಡ್ತಿದ್ದಾರೆ. ಅಂತಿಮವಾಗಿ ಸರ್ಕಾರ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.
ಕೇಂದ್ರ ಬಜೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಹೆಚ್ಚಿನ ಹಣ ಬೇಕು, ನೀರಾವರಿ ಯೋಜನೆಗೆ ಹಣ ಕೊಡಬೇಕು. ರಾಜ್ಯ ಸರ್ಕಾರದ ಮನವಿ ಯಾವ ರೀತಿ ಇದೆ, ಅದು ನನಗೆ ಗೊತ್ತಿಲ್ಲ. ಕಾನೂನು ಬದ್ಧವಾಗಿ ಹಣ ಕೊಡಲಿ. ಪ್ರಧಾನ ಮಂತ್ರಿಗಳು ಸುಪ್ರೀಂ ಆಗಿ ಟ್ರೀಟ್ ಮಾಡಿಕೊಂಡೇ ಬರುತ್ತಾ ಇದ್ದಾರೆ. ರಾಜ್ಯಕ್ಕೆ 10 ವರ್ಷದಿಂದ ಅನ್ಯಾಯ ಮಾಡಿಕೊಂಡು ಬರ್ತಾ ಇದ್ದಾರೆ ಎಂದು ದೂರಿದರು.
ಏನಿದು ಐಟಿ ಕ್ಷೇತ್ರದ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾಪ?: ಕರ್ನಾಟಕದ ಐಟಿ ಸಂಸ್ಥೆಗಳು ಕೆಲಸದ ಅವಧಿಯನ್ನು ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಹೀಗಾಗಿ, ರಾಜ್ಯ ಸರ್ಕಾರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಆ ಮೂಲಕ ಐಟಿ ಕ್ಷೇತ್ರದ ಉದ್ಯೋಗಿಗಳ ಕೆಲಸದ ಅವಧಿ ದಿನಕ್ಕೆ 12 ತಾಸಿಗೂ ಹೆಚ್ಚಿಗೆ ವಿಸ್ತರಣೆಯಾಗಲಿದೆ. ಈ ಪ್ರಸ್ತಾಪಿತ ತಿದ್ದುಪಡಿಯಂತೆ ಐಟಿ, ಬಿಪಿಒ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ದಿನಕ್ಕೆ 12 ತಾಸಿಗೂ ಹೆಚ್ಚು ಅವಧಿ ಕೆಲಸ ಮಾಡಬೇಕಾಗಲಿದೆ. ಸತತ ಮೂರು ತಿಂಗಳಲ್ಲಿ 125 ತಾಸು ಮೀರದಂತೆ ಕೆಲಸ ಮಾಡುವ ತಿದ್ದುಪಡಿ ಇದಾಗಿದೆ. ಪ್ರಸಕ್ತ ಕಾಯ್ದೆಯಂತೆ ದಿನಕ್ಕೆ ಗರಿಷ್ಠ 10 ತಾಸು ಕೆಲಸ ಮಾಡಬಹುದಾಗಿದೆ. ಇದರಲ್ಲಿ ಒಟಿಯೂ (Over Time) ಒಳಗೊಂಡಿದೆ.
ಕೆಲಸದ ಅವಧಿ ವಿಸ್ತರಣೆ ಸಂಬಂಧ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆ ಪ್ರಕಾರ, ಸಕ್ತ ದಿನಕ್ಕೆ 10 ತಾಸು ಇರುವ ಕೆಲಸದ ಅವಧಿಯನ್ನು ದಿನಕ್ಕೆ 12 ತಾಸು ಜೊತೆಗೆ, 2 ತಾಸು ಒಟಿ ಸೇರಿ 14 ತಾಸಿನವರೆಗೆ ಅವಧಿ ವಿಸ್ತರಿಸಲು ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಸಕ್ತ ಕಾಯ್ದೆಗೆ ತಿದ್ದುಪಡಿ ತರುವಂತೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಮೀಸಲಾತಿ ವಿಚಾರ: ಕನ್ನಡಿಗರ ಕ್ಷಮೆ ಯಾಚಿಸಿದ ಫೋನ್‌ಪೇ ಸಿಇಒ ಸಮೀರ್ ನಿಗಮ್ - PhonePe CEO Apology