ಧಾರವಾಡ: "ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತಿದೆ" ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದರು.
ಪ್ರಕರಣದ ಕುರಿತು ಇಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ನಾಗೇಂದ್ರ ಅವರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈಗ ಎಸ್‌ಬಿಐ ಬ್ಯಾಂಕ್ನವರು ಸಿಬಿಐಗೆ ದೂರು ಕೊಟ್ಟಿದ್ದಾರೆ. ಈಗ ಇಡಿ ಕೂಡ ಪ್ರವೇಶಿಸಿದೆ. ಎಸ್‌ಐಟಿ ತನಿಖೆ ಸಹ ನಡೆಯುತ್ತಿದೆ. ಪಾರದರ್ಶಕ ತನಿಖೆ ನಡೆಯುತ್ತಿದೆ" ಎಂದರು.
ಭ್ರಷ್ಟಾಚಾರ ಆಗಿರೋದಕ್ಕೆ ಇಡಿ ವಶಕ್ಕೆ ಪಡೆದಿರುವುದೇ ಸಾಕ್ಷಿ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, "ಭ್ರಷ್ಟಾಚಾರ ಆಗಿದೆಯೋ ಇಲ್ಲವೋ ಎಂಬುದು ವರದಿ ಬಂದ ಮೇಲೆಯೇ ಗೊತ್ತಾಗುತ್ತದೆ. ಎಲೆಕ್ಟೋರಲ್ ಬಾಂಡ್ನಲ್ಲಿ ಭ್ರಷ್ಟಾಚಾರ ಆಗಿದೆಯೋ? ಇಲ್ಲವೋ?. ಮಾಧ್ಯಮಗಳು ವಿಜಯೇಂದ್ರ ಅವರನ್ನು ಕೇಳಬೇಕು" ಎಂದರು. ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನಿಕ ಅಂತಾ ಯಾಕೆ ಹೇಳಿತು? ಅಲ್ಲಿ ಯಾಕೆ ಸಿಬಿಐ ತನಿಖೆ ಆಗಬಾರದು" ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಇಲ್ಲ, ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವ ವಿಪಕ್ಷಗಳ ಹೇಳಿಕೆ ಕುರಿತು ಮಾತನಾಡಿ, "ಅವರ ದೃಷ್ಟಿಯಲ್ಲಿ ಹೇಳಿರಬಹುದು. ಆದರೆ ಅಭಿವೃದ್ಧಿ ಆಗುತ್ತಿದೆ. ಅಭಿವೃದ್ಧಿ ಸಂಬಂಧಿತ ಸಭೆಗಳು ಆಗುತ್ತಿವೆಯಲ್ಲಾ? ನಾವು ಗ್ಯಾರಂಟಿ ಕೊಟ್ಟಿರುವ ಬಗ್ಗೆ ಅವರಿಗೆ ಹೊಟ್ಟೆ ಕಿಚ್ಚಿದೆ. ಹೀಗಾಗಿ ಅವರು ಏನೇನೋ ಹೇಳಬೇಕಲ್ವಾ? ಅದಕ್ಕೆ ಹಾಗೆ ಹೇಳುತ್ತಾರೆ. ಅಧಿವೇಶನ ಪ್ರಾರಂಭವಾಗಲಿದೆ, ಅದಕ್ಕಾಗಿ ಹೀಗೆ ಹೇಳುತ್ತಾರೆ. ಇವರ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆಯಂತೆ? ಹತ್ತು ವರ್ಷ ಮೋದಿ ಅವಧಿಯಲ್ಲಿ ಏನಾಗಿದೆ ಅಭಿವೃದ್ಧಿ? ಅದಕ್ಕೆ ಸ್ಪಷ್ಟೀಕರಣ ಕೊಡ್ತಾರಾ? ಒಟ್ಟಿನಲ್ಲಿ ಆರೋಪ ಮಾಡುತ್ತಿರುತ್ತಾರೆ." ಎಂದರು.
ರಾಜ್ಯ ಸರ್ಕಾರ ಹೈಕಮಾಂಡ್ಗೆ ಎಟಿಎಂ ಎಂಬ ಆರೋಪಗಳಿಗೆ ನಾವೇನು ಉತ್ತರ ಕೊಡಲು ಬರುವುದಿಲ್ಲ. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಮೂರು ಏಜೆನ್ಸಿಗಳಿಂದ ತನಿಖೆ ನಡೆದಿದೆ. ಸಿಬಿಐ, ಎಸ್‌ಐಟಿ, ಇಡಿ ಕೂಡ ಇದೆ. ತನಿಖೆ ಪೂರ್ಣಗೊಳ್ಳುವ ಮೊದಲೇ ಈ ರೀತಿ ಆರೋಪ ಮಾಡಿದರೆ ಏನು ಹೇಳೋಣ? ಅವರ ಹಗರಣಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಆದರೂ ಅವರು ಟೀಕೆಗಳನ್ನು ಮಾಡುತ್ತಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತೇನೆ" ಎಂದು ಹೇಳಿದರು.
ಅನುದಾನದ ಬಗ್ಗೆ ಬಸವರಾಜ ರಾಯರೆಡ್ಡಿ ಹೇಳಿಕೆ ಕುರಿತು ಮಾತನಾಡಿ, "ಯಾವ ರೀತಿ ಅನುದಾನ ಬಂದಿಲ್ಲ ಎನ್ನುವುದನ್ನು ಅವರನ್ನೇ ಕೇಳಬೇಕು. ಅಭಿವೃದ್ಧಿಗಾಗಿ 56-60 ಕೋಟಿ ಖರ್ಚು ಮಾಡಿದ್ದೇವೆ. ರಾಯರೆಡ್ಡಿ ಅವರು ಹಿರಿಯ ನಾಯಕರು, ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಕೇಳಿರುವ ಹೆಚ್ಚಿನ ಅನುದಾನ ಸಿಕ್ಕಿಲ್ಲ ಅಂತ ಹೇಳಿರಬಹುದು" ಎಂದರು.
ಖ್ಯಾತ ನಿರೂಪಕಿ ಅಪರ್ಣಾ ನಿಧಾನಕ್ಕೆ ಲಾಡ್ ಸಂತೋಷ್ ಸಂತಾಪ ಸೂಚಿಸಿದರು. "ನನ್ನ ಸಣ್ಣ ವಯಸ್ಸಿನಿಂದಲೇ ಅವರನ್ನು ನೋಡುತ್ತಿದ್ದೇನೆ. ಜನಪ್ರಿಯ ನಿರೂಪಕಿ. ಕನ್ನಡವನ್ನು ಬಹಳ ಚೆನ್ನಾಗಿ ಪ್ರತಿನಿಧಿಸಿದ್ದಾರೆ. ಅವರ ನಿಧನ ದುಃಖ ತಂದಿದೆ. ಆತ್ಮಕ್ಕೆ ದೇವರು ಶಾಂತಿ ಕೊಡಲಿ. ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದರು.
ಇದನ್ನೂ ಓದಿ: ಇಡಿ ದಾಳಿ ಹಾಗೂ ವಿಚಾರಣೆ ಕುರಿತು ನಾನು ಉತ್ತರ ನೀಡುವುದಿಲ್ಲ: ಸಚಿವ ಕೆ ಜೆ ಜಾರ್ಜ್ - valmiki nigama scam