ಬೆಂಗಳೂರು/ ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, 13,500 ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಕೆ. ಗೋಪಾಲಯ್ಯ ಅವರ ಪರವಾಗಿ ಶಾಸಕ ಬೈರತಿ ಬಸವರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು 46,755 ಶಾಲೆಗಳಿದ್ದು, 1,65,618 ಕಾರ್ಯನಿರತ ಶಿಕ್ಷಕರ ಹುದ್ದೆಗಳಿವೆ. ಪ್ರಾಥಮಿಕ ಶಿಕ್ಷಣದಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈಗಾಗಲೇ 13,500 ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, 12 ಸಾವಿರ ಶಿಕ್ಷಕರ ನೇಮಕ ಮಾಡಲಾಗಿದೆ. 700 ಶಿಕ್ಷಕರ ನೇಮಕದ ವಿಚಾರ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಕಲ್ಯಾಣ ಕರ್ನಾಟಕದಲ್ಲಿ 5,300 ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದರು.
ಹಿಂದಿನ ಸರ್ಕಾರದಲ್ಲಿ ಮೂರೂವರೆ ವರ್ಷದಲ್ಲಿ 4,500 ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗಿತ್ತು. ಅನುದಾನಿತ ಶಾಲೆಗಳ ಶಿಕ್ಷಕರ ನೇಮಕಾತಿಗೂ ಅವಕಾಶ ಕಲ್ಪಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 20 ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ 20 ಕೊಠಡಿಗಳ ನಿರ್ಮಾಣಕ್ಕೆ 278 ಲಕ್ಷ ರೂ. ಮಂಜೂರಾಗಿದ್ದು, ಈಗಾಗಲೇ 241.19 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ : ಬಿಜೆಪಿ ಶಾಸಕ ಸಿ. ಸಿ ಪಾಟೀಲ್ ಪರವಾಗಿ ಶಾಸಕ ವಿ. ಸುನೀಲ್ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪದವಿ ಪೂರ್ವ ಕಾಲೇಜುಗಳ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಅತಿಥಿ ಶಿಕ್ಷಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟು ಮನವಿ ಸ್ವೀಕರಿಸಲಾಗಿದೆ. ಗೌರವಧನ ಹೆಚ್ಚಳದ ಬೇಡಿಕೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಮಾಸಿಕ 30 ಸಾವಿರ ರೂ.ಗೆ ಗೌರವಧನ ಹೆಚ್ಚಳ ಮಾಡುವುದು ಕಷ್ಟ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಹೆಚ್ಚಳ ಮಾಡಲು ಕೋರಲಾಗುವುದು ಎಂದಾಗ, ಸುನೀಲ್ಕುಮಾರ್ ಅವರು, ನೀವು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗ, ಬಂಗಾರಪ್ಪ ಅವರು ದಿಟ್ಟತನದಿಂದ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರು. ಅದರಂತೆ ನೀವು ಉತ್ತರ ಕೊಡಬೇಕು ಎಂದಾಗ, ಬಂಗಾರಪ್ಪ ಅವರ ರೀತಿಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಉತ್ತರ ಮುಂದುವರೆಸಿದ ಸಚಿವರು, ಅತಿಥಿ ಉಪನ್ಯಾಸಕರಿಗೆ ಗೌರವಧನ ಮಾಸಿಕ 9 ಸಾವಿರದಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ 10 ಗಂಟೆಗಳ ಕಾರ್ಯಭಾರವನ್ನು ನಿಗದಿಪಡಿಸಲಾಗಿದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು. ಟಿ ಖಾದರ್, ಅತಿಥಿ ಉಪನ್ಯಾಸಕರ ವೇತನ ಹೆಚ್ಚಳವಾಗಬೇಕು. ಅವರ ಟೆನ್ಷನ್ ಕಡಿಮೆ ಮಾಡಬೇಕು. ಇದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ಮಾಡಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಕನಿಷ್ಠ ವೇತನ 18 ಸಾವಿರ ರೂ. ಇದೆ. ಅದಕ್ಕೂ ಕಡಿಮೆ ಗೌರವಧನ ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದೆ. ಈಗಾಗಲೇ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡಲಾಗಿದೆ. ಇವರಿಗೂ ಹೆಚ್ಚಿಸಬೇಕು. ಪ್ರತಿ ತಿಂಗಳು ಗೌರವಧನ ನೀಡುವ ಮೂಲಕ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸಕಾಲಕ್ಕೆ ಅತಿಥಿ ಉಪನ್ಯಾಸಕರ ಗೌರವಧನ ನೀಡಲಾಗುವುದು ಎಂದು ಹೇಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 173 ಸರ್ಕಾರಿ ಶಾಲೆಗಳಿದ್ದು, 88 ಶಾಲೆಗಳ 200 ಕೊಠಡಿಗಳು ಶಿಥಿಲಗೊಂಡಿವೆ ಎಂದು ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಶಾಲಾ ಕಟ್ಟಡಗಳ ದುರಸ್ತಿ ಕಾಮಗಾರಿಗಳಿಗೆ ಕಳೆದ ಮೂರು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ 56 ಶಾಲೆಗಳ 74 ಕೊಠಡಿಗಳ ದುರಸ್ತಿ ಕಾಮಗಾರಿಗೆ 174.21 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದರು.
ಜೆಡಿಎಸ್ ಶಾಸಕ ಜಿ. ಟಿ ದೇವೇಗೌಡರು ಮಾತನಾಡಿ, ನೂರಾರು ವರ್ಷದ ಶಾಲಾ ಕಟ್ಟಡ ದುರಸ್ತಿಯಾಗಿಲ್ಲ. ಮರದ ಕೆಳಗೆ ಶಾಲೆಗಳು ನಡೆಯುತ್ತಿವೆ. ಕನಿಷ್ಠ 10 ಲಕ್ಷ ರೂ. ನೀಡಬೇಕು. ಆಯಾ ಕ್ಷೇತ್ರದಲ್ಲಿರುವ ಕೈಗಾರಿಕೆಗಳು ಸಿಎಸ್ಆರ್ ನಿಧಿ ಹಣವನ್ನು ನೀಡಬೇಕು ಎಂದು ಹೇಳಿದರು.
ಆಗ ಮಧ್ಯಪ್ರವೇಶಿಸಿದ ಸ್ಪೀಕರ್, ಸಿಎಸ್ಆರ್ ನಿಧಿ ಹೆಚ್ಚು ಬಳಕೆಯಾಗಬೇಕು. ಶಾಸಕರಿಗೂ ಜವಾಬ್ದಾರಿ ಇದೆ. ವಿಶೇಷ ನಿಧಿ ಅನುದಾನವನ್ನು ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ನೀಡಬೇಕೆಂದು ಸಲಹೆ ನೀಡಿದರು.