ರಾಯಚೂರು: ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಮದ್ಯಪಾನ ಮಾಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ. ಮುಂಬರುವ ರಾಜ್ಯ ಬಜೆಟ್ನಲ್ಲಿ ಮದ್ಯದ ಬೆಲೆ ಏರಿಕೆ ವಿಚಾರವಾಗಿ ಸಿಂಧನೂರು ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದ ದರ ಏರಿಕೆಯಾದರೆ ಲಾಸ್ ಏನಿದೆ ಒಳ್ಳೆಯದಲ್ವಾ, ಮದ್ಯಪಾನ ಮಾಡುವವರ ಸಂಖ್ಯೆ ಕಡಿಯಾಗುತ್ತದೆ ಅಲ್ವಾ ಎಂದರು. ಸದ್ಯ ಹೊಸ ಮದ್ಯದ ಅಂಗಡಿಗಳಿಗೆ ಅನುಮತಿ ನೀಡುವುದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶದ ಮದ್ಯಕ್ಕಿಂತ ನಮ್ಮ ಮದ್ಯ ಉತ್ತಮ ಗುಣಮಟ್ಟದಿಂದ ಕೂಡಿದೆ. ಕಳಪೆ ಗುಣಮಟ್ಟದ ಮದ್ಯ ಮಾರಾಟದ ಬಗ್ಗೆ ಗಮನಕ್ಕೆ ಬಂದರೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಮಂಡ್ಯ ಕೆರಗೋಡು ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಚುನಾವಣೆಗಳು ಬಂದಾಗ ಒಂದು ಪಕ್ಷ ಇಂತಹ ಕೋಮುವಾದಕ್ಕೆ ಉದ್ದೇಶಪೂರಕವಾಗಿ ಉತ್ತೇಜನ ಕೊಡುತ್ತದೆ. ಅದರ ಪರಿಣಾಮವಾಗಿ ಇಂತಹ ಘಟನೆಗಳು ನಡೆಯುತ್ತವೆ ಎಂದರು. ಹನುಮ ಧ್ವಜ ಸ್ಥಂಭ ಅದೇ ಸ್ಥಳದಲ್ಲಿ ಸ್ಥಾಪಿಸುವ ವಿಚಾರಕ್ಕೆ ಸಂಸದೆ ಸುಮಲತಾ ನೀಡಿದ ಹೇಳಿಕೆ ಬಗ್ಗೆ ಮಾತನಾಡಿ, ನಾವು ರಾಷ್ಟ್ರಧ್ವಜವನ್ನ ಪ್ರೀತಿ ಮಾಡುವಂತವರು, ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದರೆ ಸಹಿಸಲ್ಲ, ಚುನಾವಣೆ ಬಂದಾಗಲೆಲ್ಲಾ ಬಿಜೆಪಿಯವರು ಧರ್ಮ, ರಾಮ, ಶ್ರೀರಾಮ, ಹನುಮಂತ ಎನ್ನುತ್ತಾರೆ ಎಂದು ಆರೋಪಿಸಿದರು.
ಧ್ವಜ ಇಟ್ಟುಕೊಂಡು ರಾಜಕೀಯ ಮಾಡುವುದೇ ಬಿಜೆಪಿಗರ ಕೆಲಸ
ಬಾಗಲಕೋಟೆ: ಲೋಕಸಭಾ ಚುನಾವಣೆ ಆಗುವವರೆಗೆ ಬಿಜೆಪಿ ಪಕ್ಷದವರು ಧ್ವಜ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವುದೇ ಕೆಲಸವಾಗಿದೆ ಎಂದು ಸಚಿವ ತಿಮ್ಮಾಪೂರ ಬಾಗಲಕೋಟೆಯಲ್ಲಿ ಆರೋಪಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು , ಎಲ್ಲೆಲ್ಲಿ ಅವಕಾಶ ಸಿಗುತ್ತೋ ಅಲ್ಲೆಲ್ಲ ಹೀಗೆ ಮಾಡುತ್ತಾರೆ. ಎಲೆಕ್ಷನ್ ಮುಗಿಯುವರೆಗೂ ಬಿಜೆಪಿಯ ಕೆಲಸವೇ ಇಂತಹದ್ದು, ಯಾವತ್ತಾದ್ರೂ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಿದ್ದಾರಾ? ಎಂದು ಪ್ರಶ್ನೆ ಮಾಡಿದ ಸಚಿವರು, ಹಿಂದುಗಳೆಲ್ಲ ನಾವೆಲ್ಲ ಒಂದು ಅಂತ ಹೇಳುವುದು ಬಿಜೆಪಿಗರಿಗೆ ಅಧಿಕಾರ ತರುವುದಕ್ಕೆ ಮಾತ್ರ, ಎಲೆಕ್ಷನ್ ಮುಗಿದ ಮೇಲೆ ಮತದಾರ ಎಲ್ಲಿದ್ದಾನೋ ಅಲ್ಲೆ ಇರ್ತಾನೆ ಎಂದು ವ್ಯಂಗ್ಯವಾಡಿದರು.
ಇದೇ ಸಮಯದಲ್ಲಿ ಸಿಎಎ ಜಾರಿ ಬಗ್ಗೆ ಕೇಂದ್ರ ಸರ್ಕಾರದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಇದು ಎಲ್ಲ ಎಲೆಕ್ಷನ್ ಗಿಮಿಕ್, ಚುನಾವಣೆಗೆ ಏನುಬೇಕೋ ಅಷ್ಟೇ ಮಾಡುತ್ತಾರೆ. ಮುಂದೆ ಅದನ್ನ ಇಂಪ್ಲಿಮೆಂಟ್ ಮಾಡಲ್ಲ, ಏನೂ ಮಾಡಲ್ಲ ಎಂದರು. ಮಾಜಿ ಸಚಿವ ಪ್ರಭು ಚವ್ಹಾಣ್ ಬಿಜೆಪಿ ರಾಜ್ಯಾಧ್ಯಕ್ಷರ ಕಾಲಿಗೆ ಬಿದ್ದ ವಿಚಾರವಾಗಿ ಮಾತನಾಡಿ, ಅಂತವರು ಇದ್ದಾರೇ ಏನೂ ಮಾಡಲಿಕ್ಕೆ ಆಗಲ್ಲ ಎಂದು ಹೇಳಿದರು.
ಇದನ್ನೂ ಓದಿ: ನಗರ ಎಸಿಪಿ, ಇನ್ ಸ್ಪೆಕ್ಟರ್ ಗಳ ವರ್ಗಾವಣೆ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದ ಪೊಲೀಸ್ ಕಮೀಷನರ್