ಬೆಂಗಳೂರು: ಅಯೋಧ್ಯೆಯ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಹನುಮಾನ್ ದೇವರಿಗೆ ಸಚಿವ ರಾಮಲಿಂಗಾರೆಡ್ಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಂಗಳೂರಿನ ಬಾಲಬ್ರೂಯಿ ಬಳಿ ಇರುವ ಹನುಮಾನ್ ದೇಗುಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ಹಂಚಿದ ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಆಗ್ತಿದೆ. ನಾನು ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಹೇಳಿದ್ದೆ. ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಹೇಳಿದ್ದೆವು. ಅಲ್ಲದೆ, 15 ದಿನಗಳ ಹಿಂದೆಯೇ ಸರ್ಕ್ಯೂಲರ್ ಹೊರಡಿಸಿದ್ದೆವು. ಶ್ರೀರಾಮ ಎಲ್ಲರಿಗೂ ಆಶೀರ್ವಾದ ಮಾಡಲಿ. ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಸರ್ಕಾರಿ ರಜೆ ಕೊಡಬೇಕೆಂಬ ಬಿಜೆಪಿ ಒತ್ತಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರಿಂದ ಹೇಳಿಸಿಕೊಳ್ಳಬೇಕಿಲ್ಲ. ನಾವು ಎಲ್ಲ ದೇವಸ್ಥಾನಗಳಲ್ಲಿ ಪೂಜೆಗೆ ಹೇಳಿದ್ದೇವೆ. ಹೊಸ ದೇವಸ್ಥಾನ ಪೂಜೆಗೆ ನಾನು ಹೋಗ್ತೇನೆ. ರಜೆ ಕೊಡಬೇಕು ಅಂತ ಬಿಜೆಪಿಯವರು ಪ್ರಶ್ನೆ ಮಾಡ್ತಾರೆ. ರಾಜ್ಯದಲ್ಲಿ ಬಿಜೆಪಿಯವರು ಅಧಿಕಾರ ನಡೆಸಿದ್ದಾರೆ. ರಾಮನವಮಿ ದಿನದಂದು ಅವರು ರಜೆ ಕೊಟ್ಟಿದ್ರಾ? ಬಿಜೆಪಿ ಅವಧಿಯಲ್ಲಿ ರಾಮನವಮಿ ದಿನ ರಜೆ ಕೊಡಬಹುದಿತ್ತು ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಕೇಂದ್ರದಲ್ಲಿ 10 ವರ್ಷದಿಂದ ಅಧಿಕಾರದಲ್ಲಿದ್ದಾರೆ. ನಾವು ರಾಜಕಾರಣದಲ್ಲಿ ಧರ್ಮವನ್ನು ಬೆರೆಸಲು ಹೋಗಲ್ಲ. ಧರ್ಮವೇ ಬೇರೆ, ರಾಜಕಾರಣವೇ ಬೇರೆ. ಇಂದು ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ನಾವೇ ಆದೇಶ ಮಾಡಿದ್ವಿ. ಬಿಜೆಪಿಯವರನ್ನು ಕೇಳಿ ಮಾಡಿಲ್ಲ. ನಾನು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಬೆಳಗ್ಗೆ ದೇವರಿಗೆ ಕೈಮುಗಿದು ಹೊರಡ್ತೀವಿ. ಬಿಜೆಪಿಯವರು ಮೊದಲು ರಾಜಕಾರಣ ಅಂತ ಹೇಳ್ತಾರೆ. ನಿದ್ದೆಯಲ್ಲೂ ಅವರು ರಾಜಕಾರಣ ಮಾಡ್ತಾರೆ. ರಾಜಕಾರಣಕ್ಕಾಗಿ ಸುಮ್ಮನೆ ನಮ್ಮನ್ನು ಹಿಂದು ವಿರೋಧಿಗಳು ಅಂತ ಹೇಳ್ತಾರೆ ಎಂದು ಟೀಕಿಸಿದರು.
ಅಯೋಧ್ಯೆಗೆ ಭೇಟಿ ನೀಡುವ ವಿಚಾರವಾಗಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಈಗ ಎಲ್ಲ ರಶ್ ಇರುತ್ತದೆ, ಮುಂದೆ ನೋಡೋಣ. ರಾಜೀವ್ ಗಾಂಧಿ ಶ್ರೀರಾಮನ ದೇಗುಲದ ಬಾಗಿಲು ತೆಗೆಸಿದ್ದರು. ಶ್ರೀರಾಮನ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದರು. ಎಲ್ಲ ಮಾಧ್ಯಮಗಳಲ್ಲಿ ಅದರ ಬಗ್ಗೆ ಬರ್ತಿಲ್ಲ. ರಾಜೀವ್ ಗಾಂಧಿ ಬಗ್ಗೆ ಜಾಣ ಮರೆವು ಯಾಕೆ?. ಸಾವಿರಾರು ವರ್ಷದಿಂದ ಪೂಜೆ ಮಾಡ್ತಿದ್ದೇವೆ. ಕಾಂಗ್ರೆಸ್ ನವರು ಪೂಜೆ ಮಾಡಿಯೇ ಬರೋದು. ಬಿಜೆಪಿಯವರಿಂದ ನಾವು ಕಲಿಯಬೇಕಿಲ್ಲ. ಕಾಶಿಗೆ ಹೋಗುವವರಿಗೆ ಅವಕಾಶ ಕೊಟ್ಟಿದ್ದೇವೆ ಎಂದು ಹೇಳಿದರು.
ಆಯೋಧ್ಯೆಗೆ ಸರ್ಕಾರದಿಂದ ರೈಲು ಓಡಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ರೈಲ್ವೆ ಇಲಾಖೆಗೆ ಪ್ರಪೋಸಲ್ ಕೊಡ್ತೇನೆ. ನಮ್ಮ ಸಿಎಂ ಲಿಬರಲ್ ಆಗಿದ್ದಾರೆ. ನೊಡೋಣ ಏನ್ಮಾಡ್ತಾರೆ ಎಂದರು.
ಇದನ್ನೂಓದಿ:ನಾನು ನಾಸ್ತಿಕನಲ್ಲ, ಆಸ್ತಿಕ; ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ: ಸಿಎಂ ಸಿದ್ದರಾಮಯ್ಯ