ಬೆಳಗಾವಿ: ವಕ್ಫ್ ಅಕ್ರಮ ಮುಚ್ಚಿ ಹಾಕಲು ಯಡಿಯೂರಪ್ಪ ತಮ್ಮ ಮಗನನ್ನು ಕಳಿಸಿ ಕೋಟ್ಯಂತರ ರೂಪಾಯಿ ಆಫರ್ ಮಾಡಿದ್ದರು ಎಂಬ ಬಿಜೆಪಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಆರೋಪವನ್ನು ಸಚಿವ ಪ್ರಿಯಾಂಕ್ ಖರ್ಗೆ ಸದನದಲ್ಲಿಂದು ಪ್ರಸ್ತಾಪಿಸಿದರು.
ವಕ್ಫ್ ಆಸ್ತಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಚಿವ ಖರ್ಗೆ, ಅನ್ವರ್ ಮಾಣಿಪ್ಪಾಡಿ ಪ್ರಧಾನಿಗೆ ಪತ್ರ ಬರೆದು, ವಕ್ಫ್ನಲ್ಲಿ 2.3 ಲಕ್ಷ ಕೋಟಿ ರೂ ಅಕ್ರಮ ಆಗಿದೆ. ಇದರಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ನಾಯಕರು ಇದ್ದಾರೆ. ಇದನ್ನು ಮುಚ್ಚಿ ಹಾಕಲು ಅಂದಿನ ಸಿಎಂ ಯಡಿಯೂರಪ್ಪ ಅವರು ವಿಜಯೇಂದ್ರರನ್ನು ಕಳಿಸಿ ನನಗೆ ಕೋಟ್ಯಂತರ ರೂಪಾಯಿ ಆಫರ್ ಮಾಡಿದ್ದರು. ನನ್ನ ಮನೆಗೆ ಗನ್ ಮ್ಯಾನ್ ಜತೆ ವಿಜಯೇಂದ್ರ ಬಂದು ವಕ್ಫ್ ಅಕ್ರಮ ಬಗ್ಗೆ ಮಾತಾಡದಂತೆ 150 ಕೋಟಿ ರೂ. ಆಫರ್ ಮಾಡಿದ್ರು ಎಂದು ಮಾಣಿಪ್ಪಾಡಿ ಆರೋಪಿಸಿದ್ದನ್ನು ಸಚಿವರು ಇಲ್ಲಿ ಪ್ರಸ್ತಾಪಿಸಿದರು.
ಈ ಕುರಿತು ಬಿಜೆಪಿಯ ಯಾವ ಸಿಎಂ ಸಹ ಕ್ರಮ ಕೈಗೊಳ್ಳಲಿಲ್ಲ ಯಾಕೆ?. ಈಗಿನ ಬಿಜೆಪಿ ರಾಜ್ಯಾಧ್ಯಕ್ಷರು ಯಾರ ಹಿತಾಸಕ್ತಿ ಕಾಪಾಡಲು ಮಾಣಿಪ್ಪಾಡಿಗೆ ಹಣದ ಆಮಿಷ ಕೊಡಲು ಹೋಗಿದ್ದರು ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಅನ್ವರ್ ಮಾಣಿಪ್ಪಾಡಿ ಮೋದಿಗೆ ಪತ್ರ ಬರೆದ ವಿಚಾರಕ್ಕೆ ಸದನದಲ್ಲಿ ಗದ್ದಲ ಉಂಟಾಯಿತು. ಯತ್ನಾಳ್ ಸಹ ಮಧ್ಯಪ್ರವೇಶಿಸಿ, ನೀವೇ ಕ್ರಮ ತೆಗೆದುಕೊಳ್ಳಿ, ಇಷ್ಟು ದಿನ ಏಕೆ ಆಟ ಆಡುತ್ತಿದ್ದೀರಿ ಎಂದು ತಿರುಗೇಟು ನೀಡಿದರು. ಇನ್ನು ಪ್ರಿಯಾಂಕ್ ಖರ್ಗೆ ಮಾತಿಗೆ ಆಕ್ಷೇಪಿಸಿದ ಅರವಿಂದ ಬೆಲ್ಲದ್, ಮಾಣಿಪ್ಪಾಡಿ ಮಾತು ನೂರು ಪ್ರತಿಶತ ಸತ್ಯ ಅಂತ ಒಪ್ಕೋತೀರಾ? ಅದು ಸತ್ಯ ಇದ್ರೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಪ್ರಿಯಾಂಕ್ ಖರ್ಗೆ ಆರೋಪದ ವೇಳೆ ವಿಜಯೇಂದ್ರ ಸದನದಲ್ಲಿ ಗೈರಾಗಿದ್ದರು. ಈ ಸಂಬಂಧ ಎದ್ದುನಿಂತ ಯತ್ನಾಳ್, ಪ್ರಿಯಾಂಕ್ ಖರ್ಗೆ ಅವರು ಯಾರ ಮೇಲೆ ಆರೋಪ ಮಾಡಿದ್ರೋ ಅವರು ಈಗ ಸದನದಲ್ಲಿ ಇಲ್ಲ. ಅವರು ಸದನಕ್ಕೆ ಬಂದಾಗ ಮಾತಾಡಿ. ಸೋಮವಾರ ಬಂದಾಗ ಮಾತಾಡಿ ಎಂದರು.
ಇದಕ್ಕೂ ಮುಂಚೆ ವಕ್ಫ್ ಪ್ರಕರಣ ಬಗ್ಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಅಧಿಕಾರಿಗಳಿಗೆ ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ರೆ ಕ್ರಮ ಅಂತ ಸಚಿವರು ಬೆದರಿಕೆ ಹಾಕಿದ್ರು. 4.5 ಸಾವಿರ ಎಕರೆಗೂ ಹೆಚ್ಚು ರೈತರ ಭೂಮಿಗೆ ನೊಟೀಸ್ ಕೊಟ್ಟಿದೆ ವಕ್ಫ್ ಬೋರ್ಡ್. ಬಿಜೆಪಿ ಅವಧಿಯಲ್ಲಿ ಯಡಿಯೂರಪ್ಪ ಅಥವಾ ಬೊಮ್ಮಾಯಿ ಅವರು ರೈತರಿಗೆ ನೋಟಿಸ್ ಕೊಡಿ ಅಂದಿರಲಿಲ್ಲ. ಆಗ ಆಗಿದ್ದು ಅಧಿಕಾರಿಗಳ ಮಟ್ಟದಲ್ಲಿ. ಮೋದಿಯವರು ರೈತರಿಗೆ ಅನ್ಯಾಯ ಆಗಬಾರದು ಅಂತ ವಕ್ಫ್ ತಿದ್ದುಪಡಿಗೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕ ಆಗಿದ್ರೆ ಕೇಂದ್ರದ ವಕ್ಫ್ ತಿದ್ದುಪಡಿ ನಿಯಮಗಳಿಗೆ ಸಹಕಾರ ಕೊಡಲಿ. ರಾಜ್ಯದಲ್ಲಿ, ದೇಶದಲ್ಲಿ ವಕ್ಫ್ ಅನಾಹುತ ಆಗ್ತಿದೆ, ಇದನ್ನು ತಪ್ಪಿಸಲು ತಿದ್ದುಪಡಿ ಕಾನೂನು ಬರ್ತಿದೆ. ಅಲ್ಪಸಂಖ್ಯಾತರು ಮಾತ್ರ ಮತ ಹಾಕಿದ್ದಕ್ಕೆ ಸರ್ಕಾರ ಬಂದಿದೆ ಎನ್ನುವ ಭ್ರಮೆಯಲ್ಲಿ ಸರ್ಕಾರ ಇದೆ. 1974ರ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡಿ ರೈತರಿಗೆ ಆಗುವ ಅನ್ಯಾಯ ನಿಲ್ಲಿಸಿ ಎಂದು ವಿಜಯೇಂದ್ರ ಒತ್ತಾಯಿಸಿದರು.
ಇದನ್ನೂ ಓದಿ: ವಕ್ಫ್ ಹೆಸರಲ್ಲಿ ಕಾಂಗ್ರೆಸ್‌ನಿಂದ ಒಡೆದು ಆಳುವ ನೀತಿ: ಆರ್.ಅಶೋಕ್