ಬೆಂಗಳೂರು : ಧೈರ್ಯವಾಗಿ ಪ್ರಶ್ನಿಸಿ ಅಂದಿದ್ದು ತಪ್ಪಿಲ್ಲ. ಕುತೂಹಲ ಇಲ್ಲ ಅಂದರೆ ಕಲಿಕೆ ಬರಲ್ಲ ಎಂದು ವಸತಿ ಶಾಲೆಗಳಲ್ಲಿನ ಘೋಷವಾಕ್ಯ ಬದಲಾವಣೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಾಮಾಜಿಕ ಸ್ಥಿತಿಗತಿಗೆ ತಕ್ಕಂತೆ ಬದಲಾವಣೆ ಆಗಬೇಕು. ಕಲಿಗೆ ಬರಲ್ಲ ಅಂದರೆ ಜ್ಞಾನ ಬರಲ್ಲ. ಸಮಾಜದಲ್ಲಿ ಪ್ರಬುದ್ಧತೆ ಇರಲ್ಲ. ಪ್ರಬುದ್ಧ ಭಾರತ, ಪ್ರಬುದ್ಧ ಸಮಾಜ ಕಟ್ಟಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದು ಬೆಳೆಯಬೇಕು ಅಂದ್ರೆ ಪ್ರಶ್ನೆ ಮಾಡಲೇಬೇಕು ಅಲ್ವಾ?. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಅದಕ್ಕೆ ಪ್ರಶ್ನೆ ಕೇಳುವುದು ಮುಖ್ಯ. ಎಲ್ಲದಕ್ಕೂ ಉತ್ತರ ಸಿಗಲ್ಲ. ಪ್ರಶ್ನೆ ಮಾಡಿದ್ರೆ ವೈಜ್ಞಾನಿಕ ಮನೋಭಾವ ಬೆಳೆಯುತ್ತೆ. ಶಿಕ್ಷಕರಿಗೆ ಹೊಸ ರೂಪದಲ್ಲಿ ಕಲಿಕೆ ಆಗುತ್ತೆ ಎಂದು ಹೇಳಿದರು.
ವಸತಿ ಶಾಲೆಗಳು ಜ್ಞಾನ ಕೇಂದ್ರವಾಗಬೇಕು: ಹಿಂದೂಪರ ಸಂಘಟನೆಗಳ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾವೇನು ಬೇರೆ ವಿಚಾರ ಹೇಳಿಲ್ಲ. ಜ್ಞಾನಕ್ಕೆ ನಾವು ತಲೆ ಬಾಗಲೇಬೇಕು. ಲೈಬ್ರರಿಗಳಿಗೆ ಅರಿವು ಕೇಂದ್ರ ಎಂದು ಬದಲಾವಣೆ ಮಾಡಿದ್ದೇವೆ. ಅರಿವೇ ಗುರು ಅಂತ ಬಸವಣ್ಣ ಹೇಳಿದ್ದಾರೆ. ಇದು ತಪ್ಪಾ?. ಅರಿವು ಮೂಡಿಸಲು ಏನು ಮಾಡಬೇಕೋ ಅದನ್ನು ಸರ್ಕಾರ ಮಾಡುತ್ತಿದೆ. ನಾಲೆಡ್ಜ್ ಬೇಸ್ ಸೊಸೈಟಿ ಕ್ರಿಯೇಟ್ ಮಾಡುತ್ತಿದ್ದೇವೆ. ವಿಶ್ವಗುರು ಆಗಬೇಕು ಅಂದ್ರೆ ನಾಲೆಡ್ಜ್ಗೆ ಅಗ್ರಸ್ಥಾನ ನೀಡಬೇಕು. ಹಾಸ್ಟೆಲ್ಗಳು, ಎಲ್ಲಾ ವಸತಿ ಶಾಲೆಗಳು ಜ್ಞಾನ ಕೇಂದ್ರಗಳಾಗಬೇಕು. ಆಗ ಪ್ರಬುದ್ಧ ಮತ್ತು ಸಮೃದ್ಧ ಭಾರತ ಕಟ್ಟಬಹುದು ಎಂದರು.
ಕಾಂಗ್ರೆಸ್ಗೆ ಸಿದ್ಧಾಂತ ಇಲ್ಲ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅನಂತ್ ಕುಮಾರ ಹೆಗಡೆಗೆ ಯಾಕ್ರಿ ಅಷ್ಟು ಮಹತ್ವ ಕೊಡ್ತೀರಾ?. ಅವರ ಪಾರ್ಟಿಯವರೆ ಬೆಲೆ ಕೊಡ್ತಾ ಇಲ್ಲ. ಎಲ್ಲಿ ಮಾತನಾಡಬೇಕು ಅಲ್ಲಿ ಆ ಮನುಷ್ಯ ಮಾತನಾಡಲ್ಲ. ಕನ್ನಡಿಗರ ಪರವಾಗಿ ಸಂಸತ್ತಿನಲ್ಲಿ ಎಷ್ಟು ಬಾರಿ ಮಾತನಾಡಿದ್ದಾರೆ. ಈಗ ಟಿಕೆಟ್ಗಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಂಸತ್ತಿನಲ್ಲಿ ಏಕೆ ಮಾತನಾಡಲಿಲ್ಲ? : ಕನ್ನಡಿಗರ ಪರವಾಗಿ ಎಂದಾದರೂ ಮಾತನಾಡಿದ್ದಾರಾ?. ನಡೆಯಲಾರದ ಕರೆನ್ಸಿಯನ್ನು ನೀವು ಏಕೆ ನಡೆಸುತ್ತಿದ್ದೀರಾ?. ಅನಂತ್ ಕುಮಾರ್ ಕೆಲಸ ಮಾಡಿದ್ರೆ, ಟಿಕೆಟ್ಗಾಗಿ ಏಕೆ ಭಿಕ್ಷೆ ಬೇಡಬೇಕು. ಸಿದ್ದರಾಮಯ್ಯ ಹೆಸರು ಹೇಳಲಿಲ್ಲ ಅಂದ್ರೆ ನಿದ್ದೆ ಬರಲ್ಲ. ಕಾಂಗ್ರೆಸ್ ಬಗ್ಗೆ ಮಾತನಾಡದಿದ್ದರೆ ಮೇಲುಗಡೆಯವರು ಕಿಮ್ಮತ್ತು ಕೊಡಲ್ಲ. ವಾಕ್ ಚಾತುರ್ಯರು ಜ್ಞಾನ ಭಂಡಾರ ಇರುವವರು. ಸಂಸತ್ತಿನಲ್ಲಿ ಏಕೆ ಮಾತನಾಡಲಿಲ್ಲ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಇದನ್ನೂ ಓದಿ : ನಾನು ಯಾವ ದೈವ ಭಕ್ತನೂ ಅಲ್ಲ, ನಾನು ಸಂವಿಧಾನದ ಭಕ್ತ: ಸಚಿವ ಪ್ರಿಯಾಂಕ್ ಖರ್ಗೆ