ಶಿವಮೊಗ್ಗ: "ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ತಮ್ಮ ಸರ್ಕಾರಿ ವಸತಿ ಗೃಹವನ್ನು ಲೋಕೋಪಯೋಗಿ ಇಲಾಖೆಯ ನಿಯಮಾವಳಿಗೆ ವಿರುದ್ಧವಾಗಿ ಪುನರ್ ನಿರ್ಮಾಣ ಮಾಡಿಕೊಂಡಿದ್ದು, ಈ ಕುರಿತು ಲೋಕೋಪಯೋಗಿ ಇಲಾಖೆರವರು ಪರಿಶೀಲಿಸಿ ಸಮಗ್ರ ವರದಿಯನ್ನು ತಕ್ಷಣ ಮುಖ್ಯಮಂತ್ರಿಗಳಿಗೆ ನೀಡಬೇಕೆಂದು" ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ವೇಳೆ "ಅಧಿಕಾರಿಗಳಿಗೆ ಷಡಕ್ಷರಿ ಅವರು ರಾಜ್ಯಾಧ್ಯಕ್ಷರಾಗಿ ಮ್ಯಾನ್ಯುಪ್ಲೇಟ್ ಮಾಡುತ್ತಾರೆ ಅಂತ ಸುಮ್ಮನಾಗಬಾರದು. ಶಿವಮೊಗ್ಗ ಜಿಲ್ಲೆಯಿಂದ ನೀವು ಸ್ಟ್ರಾಂಗ್ ಆಗಿ ಒಂದು ಮೇಸೆಜ್ ಕಳುಹಿಸಬೇಕಾಗುತ್ತದೆ. ಇದನ್ನು ಸಿಎಂ ಗಮನಿಸುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಕಠಿಣ ಶಿಕ್ಷೆ ಆಗಬೇಕು" ಎಂದರು.
ರಸ್ತೆ ನಿರ್ಮಾಣಕ್ಕೆ ಹಣ ಸಿಗಲ್ಲ, ಅವರಿಗೆ ಹೇಗೆ ಸಿಕ್ಕಿತು?: "ಸರ್ಕಾರಿ ವಸತಿ ಗೃಹದ ಪುನರ್ ನಿರ್ಮಾಣ ಸಂಬಂಧ ನೀವು ನೋಟಿಸ್ ನೀಡಿ, ಅವರ ಮನೆಗೆ ಹೋಗಿ ನೋಡಬೇಕು. ಅವರು ಎಸ್ಟಿಮೇಷನ್ಕ್ಕಿಂತ ಹೆಚ್ಚನ ಹಣ ಖರ್ಚು ಮಾಡಿದ್ದಾರೆ. ಈ ಹೆಚ್ಚುವರಿ ಹಣ ಎಲ್ಲಿಂದ ಬಂತು" ಎಂದು ಪ್ರಶ್ನಿಸಿದರು.
ನಮ್ಮ ವ್ಯವಸ್ಥೆ ದುರ್ಬಳಕೆ: "ಅವರು ತಮ್ಮ ಮನೆಗೆ ಜೆಡ್ಪ್ಲಸ್ ಮಾದರಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಅವರು ನಮ್ಮ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನು ಸಿಎಂ ಗಮನಿಸುತ್ತಿದ್ದಾರೆ. ಈ ಕುರಿತು ವರದಿಯನ್ನು ನೀಡಬೇಕಾಗುತ್ತದೆ. ನಾನು ಈ ಕುರಿತು ಅಧಿಕೃತವಾಗಿ ಪತ್ರ ಬರೆದಿದ್ದೇನೆ. ಮತ್ತೆ ಬೇಕು ಅಂದರೆ ಪತ್ರ ನೀಡುತ್ತೇನೆ. ಅಧಿಕಾರಿಗಳು ಷಡಕ್ಷರಿ ಮನೆಗೆ ಹೋಗಿ ಪರಶೀಲನೆ ಮಾಡಬೇಕು. ಇಲ್ಲಿ ನಾನು ತನಿಖಾಧಿಕಾರಿ ಅಲ್ಲ. ತನಿಖೆ ನಡೆಸುತ್ತಿರುವವರು ಲೋಕೋಪಯೋಗಿ ಇಲಾಖೆಯವರು ಏನು ಮಾಡುತ್ತಿದ್ದಾರೆ? ಇದು ಅಧಿಕಾರಿಗಳು ಬಹಳ ಸೀರಿಯಸ್ ಆಗಿ ಗಮನ ಹರಿಸಬೇಕಾಗುತ್ತದೆ" ಎಂದು ಗರಂ ಆದರು.
ನಂತರ ಮಾಧ್ಯಮದವರೊಂದಿಗೆ ಸಭೆಯ ಕುರಿತು ಮಾಹಿತಿ ನೀಡಿದ ಅವರು, ಇಂದು ಜಿಲ್ಲಾ ಮಟ್ಟದ ಕೆಲ ವಿಚಾರಗಳನ್ನು ಸಭೆ ನಡೆಸಲಾಯಿತು. ಆರ್.ಡಿ.ಪಿ.ಆರ್ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಶರಾವತಿ ಸಂತ್ರಸ್ತರ ಕುರಿತು ಸಿಎಂ ಅಧಿವೇಶನದ ಮುಂಚೆಯೇ ಒಂದು ಸಭೆ ತೆಗೆದುಕೊಳ್ಳಲಿದ್ದಾರೆ. ಕೆಲ ಕೋರ್ಟ್ ವಿಚಾರದ ಕುರಿತು ಸಭೆ ನಡೆಸುತ್ತಾರೆ ಎಂದರು.
ನೂತನ ಜಿಲ್ಲಾಡಳಿತ ಭವನ ನಿರ್ಮಾಣ: ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೇ ಕಡೆ ನಿರ್ಮಾಣ ಮಾಡುವ ಕುರಿತು ಜಾಗ ಗುರುತಿಸಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ಮೆಗ್ಗಾನ್ ಆಸ್ಪತ್ರೆಯ ಮುಂದೆ ಜಾಗವಿದೆ. ಅಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ. ಕಚೇರಿಗಳು ಒಂದೇ ಕಡೆ ಇದ್ದರೆ ಜನತೆಗೆ ಅನುಕೂಲವಾಗಲಿದೆ. ಇಂದಿನ ಸಭೆಯಲ್ಲಿ ಮುಂದಿನ ವರ್ಷದಲ್ಲಿ ಬಜೆಟ್ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಅಲ್ಲಮ ಪ್ರಭು ಮೈದಾನ ಹಾಗೂ ಜನ್ಮ ಸ್ಥಳದ ಅಭಿವೃದ್ದಿಗೆ ಕ್ರಮ: ಅಲ್ಲಮ ಪ್ರಭು ಮೈದಾನದ ಹೆಸರು ಘೋಷಣೆ ಮಾಡಿದ ನಂತರ 5 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಇದರಲ್ಲಿ ಅಭಿವೃದ್ದಿಪಡಿಸಲಾಗುವುದು. ಅಲ್ಲಮ ಪ್ರಭು ಅವರ ಜನ್ಮ ಸ್ಥಳವನ್ನು ಅಭಿವೃದ್ಧಿಪಡಿಸುವ ಕುರಿತು ಪುರಾತತ್ವ ಇಲಾಖೆಯ ಜೊತೆ ಮಾತನಾಡಿ ಅಭಿವೃದ್ದಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಚಂದ್ರಗುತ್ತಿ ಕ್ಷೇತ್ರದ ಸಮಗ್ರ ಅಭಿವೃದ್ಧಿ: ಸೊರಬ ತಾಲೂಕಿನ ಧಾರ್ಮಿಕ ಕೇಂದ್ರವಾದ ಚಂದ್ರಗುತ್ತಿ ಸ್ಥಳ ಅಭಿವೃದ್ಧಿಗೆ ಅರಣ್ಯ ಹಾಗೂ ಅರಣ್ಯ ಇಲಾಖೆಯ ಸಮಸ್ಯೆಗಳಿತ್ತು. ಈಗ ಆ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಈಗ ಅಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗುತ್ತಿದೆ ಎಂದರು.
ಕೆಡಿಪಿ ಸಭೆಯ ನಂತರ ಜನ ಸ್ಪಂದನ ಸಭೆಯನ್ನು ಹೊಸನಗರದಲ್ಲಿ ನಡೆಸಲಾಗುತ್ತದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಕುಮಾರ್ ಸೇರಿ ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಸಿ ಎಸ್ ಷಡಕ್ಷರಿ ವರ್ಗಾವಣೆಗೆ ಶಿವಮೊಗ್ಗ ನೊಳಂಬ ಸಮಾಜದಿಂದ ಖಂಡನೆ