ಬೆಂಗಳೂರು : ರಾಜಧಾನಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಕಿ. ಮೀ ಆಸುಪಾಸಿನಲ್ಲಿ ತಮ್ಮ ಉದ್ಯಮ ಘಟಕ ಸ್ಥಾಪಿಸಲು 25 ಎಕರೆ ಭೂಮಿ ಅಗತ್ಯವಿದೆ ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಲೆನ್ಸ್ ಕಾರ್ಟ್ ಸಮೂಹದ ಮನವಿಗೆ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಸ್ಪಂದಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಲೆನ್ಸ್ ಕಾರ್ಟ್ ಉನ್ನತಾಧಿಕಾರಿ ಪಿಯೂಷ್ ಬನ್ಸಾಲ್ ಅವರು 'ಎಕ್ಸ್'ನಲ್ಲಿ ತಮ್ಮ ಅಗತ್ಯದ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು, ಯಾವುದಾದರೂ ಉದ್ಯಮ ಸಂಸ್ಥೆಗೆ ಜಮೀನು ಮಾರಾಟ ಮಾಡಲು ಆಸಕ್ತಿ ಇದ್ದರೆ ತಮಗೆ ಇ-ಮೇಲ್ ಕಳಿಸುವಂತೆ ಕೋರಿದ್ದರು.
ಇದನ್ನು ಗಮನಿಸಿದ ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿ, 'ಕೈಗಾರಿಕಾ ಇಲಾಖೆಯು ನಿಮ್ಮ ಬೆಂಬಲಕ್ಕಿದ್ದು, ನಿಮ್ಮ ಅಗತ್ಯಗಳನ್ನೆಲ್ಲ ಪೂರೈಸಲಿದೆ. ನಮ್ಮ ಅಧಿಕಾರಿಗಳು ತಕ್ಷಣವೇ ನಿಮ್ಮನ್ನು ಸಂಪರ್ಕಿಸಲಿದ್ದಾರೆ. ನೀವು ಇರಬೇಕಾದ ಜಾಗ ಕರ್ನಾಟಕ!' ಎಂದು ಮರುಪೋಸ್ಟ್ ಮಾಡಿ, ಭರವಸೆ ನೀಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಅವರು ಅಗತ್ಯ ಸೂಚನೆಗಳನ್ನು ಸಹ ಕೊಟ್ಟಿದ್ದಾರೆ.
ಇದನ್ನೂ ಓದಿ : ಬೆಂಗಳೂರು-ಬಾಗಲಕೋಟೆ-ವಿಜಯಪುರ ರೈಲು ಪ್ರಯಾಣದ ಅವಧಿ 10 ಗಂಟೆಗೆ ಇಳಿಸಲು ಚರ್ಚೆ