ಬೆಳಗಾವಿ: ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮೊದಲ ಪ್ರತಿಕ್ರಿಯೆ ನೀಡಿದ್ದು, "ಮೊದಲನೇಯದಾಗಿ ಇಂಥ ಘಟನೆಗಳು ನಡೆಯಬಾರದು. ಮಾಧ್ಯಮಗಳ ಮೂಲಕವೇ ನನಗೂ ಮಾಹಿತಿ ಬಂದಿದ್ದು" ಎಂದು ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತಮ್ಮ ಆಪ್ತ ಸಹಾಯಕ ಸೋಮು ಹೆಸರು ಉಲ್ಲೇಖ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, "ಇದರ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಮಾಧ್ಯಮಗಳಲ್ಲಿ ನೋಡಿದ ಬಳಿಕ ಗೊತ್ತಾಗಿದೆ. ನಾನ್ಯಾವತ್ತೂ ರುದ್ರಣ್ಣನನ್ನು ಭೇಟಿಯಾಗಿಲ್ಲ. ಯಾವುದೇ ಕೆಲಸಕ್ಕೂ ಸಂಪರ್ಕ ಮಾಡಿಲ್ಲ. ಪ್ರಾಥಮಿಕ ತನಿಖೆ ಆರಂಭವಾಗಿದೆ. ಮಂತ್ರಿ ಎಂದ ಮೇಲೆ 10-15 ಜನ ಆಪ್ತ ಸಹಾಯಕರು ಇರುವುದು ಸ್ವಾಭಾವಿಕ. ಕ್ಷೇತ್ರದ ಕೆಲಸ, ಇತರೆ ಕೆಲಸಗಳಿಗೆ ಪಿಎಗಳನ್ನು ನೇಮಕ ಮಾಡಿಕೊಂಡಿರುತ್ತೇವೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. ನಾನೇನೂ ಹೆಚ್ಚಿಗೆ ಹೇಳೋದಿಲ್ಲ" ಎಂದರು.
"ನಿನ್ನೆ ಇಡೀ ದಿನ ನಾನು ಬ್ಯುಸಿ ಇದ್ದೆ, ಸಚಿವರಾದ ಹೆಚ್.ಕೆ.ಪಾಟೀಲ್ ಕೂಡ ಬಂದಿದ್ದರು. ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಏನು ಬರುತ್ತದೆಯೋ ನೋಡೋಣ. ನಾನು ರುದ್ರಣ್ಣ ಅವರ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿ ಎನ್ನುವುದೇ ನನ್ನ ಆಶಯ. ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸತ್ಯಾಸತ್ಯತೆ ಹೊರಬರಲಿ ಎಂದು ಸೂಚನೆ ಕೊಡುತ್ತೇನೆ. ಊಹಾಪೋಹಗಳು ಶುರುವಾದರೆ ಬಹಳಷ್ಟು ಊಹಾಪೋಹಗಳಾಗುತ್ತವೆ. ಕೂಲಂಕಷವಾಗಿ ತನಿಖೆ ಮಾಡಿ ಆದಷ್ಟು ಬೇಗ ಸತ್ಯ ಹೊರಬರಲಿ, ಕುಟುಂಬಕ್ಕೆ ನ್ಯಾಯ ಸಿಗಲಿ" ಎಂದು ಹೇಳಿದರು.
ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದ್ದಕ್ಕೆ ಪ್ರತಿಕ್ರಿಯಿಸಿ, "ಬಿಜೆಪಿಯವರಿಗೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಲ್ಲ. ಎಲ್ಲಿಯಾದರೂ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪ ಆಗಿದೆಯೇ ಎಂದು ಅರ್ಥ ಮಾಡಿಕೊಳ್ಳಬೇಕು. ರುದ್ರಣ್ಣ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣ ಎಂದು ಎಲ್ಲಾದರೂ ಹೇಳಿದ್ದಾರಾ? ರುದ್ರಣ್ಣ ತಾವಾಗಿಯೇ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಈ ವಿಷಯ ಗೊತ್ತಿಲ್ಲ ಅಂದಿದ್ದಾರೆ. ತನಿಖೆ ಆಗಲಿ, ಎಲ್ಲವೂ ಗೊತ್ತಾಗುತ್ತದೆ. ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವಹಾರದ ಬಗ್ಗೆ ತನಿಖೆಗೆ ರುದ್ರಣ್ಣ ಮನವಿ ಮಾಡಿರುವುದಕ್ಕೆ ಆ ಎಲ್ಲದರ ಬಗ್ಗೆಯೂ ತನಿಖೆ ಆಗಲಿ" ಎಂದು ಹೇಳಿದರು.
"ಈಶ್ವರಪ್ಪ ಹಾಗೂ ಈ ಪ್ರಕರಣಕ್ಕೆ ಬಹಳಷ್ಟು ವ್ಯತ್ಯಾಸಗಳಿವೆ. ಅಲ್ಲಿ ನೇರವಾಗಿ ಈಶ್ವರಪ್ಪ ಹೆಸರು ಪ್ರಸ್ತಾಪ ಆಗಿತ್ತು. ನನಗೆ ಆಶ್ಚರ್ಯವಾಗುತ್ತಿದೆ ರುದ್ರಣ್ಣ ಮೊಬೈಲ್ ಸಿಗಬೇಕು. ಸಾಕ್ಷ್ಯಾಧಾರಗಳು ಸಿಗಬೇಕು. ತನಿಖಾ ಹಂತದಲ್ಲಿ ಬಹಳಷ್ಟು ಮಾತನಾಡುವುದು ಬೇಡ. ನೀವೂ ಸಹಕಾರ ಕೊಡಿ, ನಾನೂ ಸಹಕಾರ ಕೊಡುವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿಗೆ ರುದ್ರಣ್ಣ ಪ್ರಯತ್ನಿಸಿದ್ದರೆಂಬ ಬಗ್ಗೆ ಪ್ರತಿಕ್ರಿಯಿಸಿ, "ಮೇಡಂ ಆಫೀಸ್ ಮುಂದೆ ಇದ್ದೇನೆ ಎಂದು ಆಡಿಯೋ ಸಂಭಾಷಣೆಯಲ್ಲಿ ರುದ್ರಣ್ಣ ಹೇಳಿದ್ದಾರೆ. ಆದರೆ, ಅವರು ಬಂದ ವಿಚಾರ ನನಗೆ ಗೊತ್ತಿಲ್ಲ. ಆಫೀಸ್ನಲ್ಲಿ ಬೆಳಗ್ಗೆ ಸಾವಿರಾರು ಜನರನ್ನು ಭೇಟಿ ಆಗುತ್ತೇನೆ. ಮೊನ್ನೆ ನಾನು 9 ಕಾರ್ಯಕ್ರಮಗಳಿಗೆ ಹೋಗಿದ್ದೆ, ಅವರು ಬಂದ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಪಾಪದ ಕೊಡ ತುಂಬಿದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, "ಯತ್ನಾಳ್ ಅವರು ಹಿರಿಯರು, ಯಾರು ಪಾಪ ಮಾಡಿದ್ದಾರೋ ಅವರ ಕೊಡ ತುಂಬುತ್ತದೆ" ಎಂದು ತಿರುಗೇಟು ಕೊಟ್ಟರು.
ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ವಿಚಾರಣೆ ನಡೆಸುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿ, "ಲೋಕಾಯುಕ್ತ ಸಂಸ್ಥೆಗೆ ತನ್ನದೇ ಗೌರವ ಇದೆ. ನಿಷ್ಪಕ್ಷಪಾತವಾಗಿ ತನಿಖೆ ಆಗಲಿ, ಸಿಎಂ ದೋಷಮುಕ್ತರಾಗಿ ಬರುವ ಭರವಸೆ ಇದೆ. ಇದೆಲ್ಲಾ ರಾಜಕೀಯ ಷಡ್ಯಂತ್ರ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ನಾವೆಲ್ಲ ಸಿಎಂ ಜೊತೆಗೆ ಇದ್ದೇವೆ. ಬಿಜೆಪಿಯವರು ಎಷ್ಟೇ ರಾಜಕೀಯ ಮಾಡಲಿ. ಬಣ್ಣ-ಸುಣ್ಣ ಬಳಿಯಲಿ, ಅವರ ಪ್ರಯತ್ನ ಸಫಲ ಆಗುವುದಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ತಹಶೀಲ್ ಕಚೇರಿಯಲ್ಲಿ ಎಸ್‌ಡಿಎ ಆತ್ಮಹತ್ಯೆ ಕೇಸ್: ಸಚಿವ ಸತೀಶ ಜಾರಕಿಹೊಳಿ, ಡಿಸಿ ಹೇಳಿದ್ದೇನು?