ಬೆಳಗಾವಿ: "ರಾಜಕೀಯ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾವೂ ಕೂಡ ರಾಜಕೀಯ ಮಾಡುತ್ತಿದ್ದು, ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ. ರಾಜಕೀಯವಾಗಿಯೇ ಉತ್ತರ ನೀಡುತ್ತೇವೆ‘‘ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, "ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ಆಗಿದೆ. ಇದೊಂದು ಕಾನೂನು ಪ್ರಕ್ರಿಯೆ. ತನಿಖೆ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿಗಳೇ ಘಂಟಾಘೋಷವಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ, ಜಗ್ಗಲ್ಲ, ಬಗ್ಗಲ್ಲ. ಕಾನೂನು ಪ್ರಕಾರ ತನಿಖೆ ಏನು ಆಗಬೇಕು ಅದು ಆಗುತ್ತದೆ" ಎಂದು ಹೇಳಿದರು.
"ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. 6 ಸಾವಿರ ಕೋಟಿ ಮೊತ್ತದ ಎಲೆಕ್ಟ್ರೋ ಬಾಂಡ್ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಡಿನೋಟಿಫೈ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ರಾಜೀನಾಮೆ ನೀಡಲಿ, ನಂತರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಬಿಜೆಪಿಯವರು ಮಾತನಾಡಲಿ" ಎಂದು ಕಿಡಿಕಾರಿದರು.
136 ಜನ ಕಾಂಗ್ರೆಸ್ ಶಾಸಕರಿದ್ದೇವೆ: "136 ಜನ ಕಾಂಗ್ರೆಸ್ ಶಾಸಕರಿದ್ದು, ಸರ್ಕಾರಕ್ಕೆ ಯಾವುದೇ ಆಪತ್ತಿಲ್ಲ. ಸಿದ್ದರಾಮಯ್ಯನವರಂಥ ಧೀಮಂತ ನಾಯಕನ ನಾಯಕತ್ವ ನಮ್ಮ ಪಕ್ಷಕ್ಕಿದ್ದು, ಅವರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನದ್ದಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿಗರು ಹಗಲುಗನಸು ಕಾಣುತ್ತಿದ್ದಾರೆ" ಎಂದು ತಿರುಗೇಟು ಕೊಟ್ಟರು.
ಜಿಲ್ಲಾ ವಿಭಜನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, "ಭೌಗೋಳಿಕವಾಗಿ ಮತ್ತು ಜನಸಂಖ್ಯೆ ದೃಷ್ಟಿಯಿಂದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ವಿಭಜನೆಯಾಗದ ಹೊರತು, ಅಭಿವೃದ್ಧಿ ಸಾಧ್ಯವಿಲ್ಲ. ಈ ಕುರಿತಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಚರ್ಚಿಸಿ, ಮನವಿ ಪತ್ರ ಕೊಡುತ್ತೇವೆ. ಯಾವುದನ್ನು ಹೊಸ ಜಿಲ್ಲೆ ಮಾಡಬೇಕೆಂದು ನಾನು ಹೇಳುವುದಿಲ್ಲ. ಆದರೆ, ಬೆಳಗಾವಿಯನ್ನು ಎರಡು ಅಥವಾ ಮೂರು ಜಿಲ್ಲೆಗಳಾಗಿ ವಿಭಜಿಸಬಹುದು. ದಸರಾ ಮುಗಿದ ನಂತರ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಮನವಿ ಪತ್ರ ಕೊಡುತ್ತೇವೆ" ಎಂದು ಹೇಳಿದರು.
ನಾನು ಶ್ರೀಗಳ ಜತೆ ಮಾತನಾಡುತ್ತೇನೆ: "ಪಂಚಮಸಾಲಿ ಮೀಸಲಾತಿ ಕುರಿತು ಚರ್ಚಿಸಲು ಸಿದ್ದರಾಮಯ್ಯ ಸಮಯ ಕೊಡುತ್ತಿಲ್ಲ. ನಮ್ಮ ಸಮುದಾಯದ ಶಾಸಕರೂ ಧ್ವನಿ ಎತ್ತುತ್ತಿಲ್ಲ" ಎಂಬ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ಕುರಿತು ಮಾತನಾಡಿ, "ಮುಖ್ಯಮಂತ್ರಿಗಳ ಭೇಟಿಯಾಗಲು ಶ್ರೀಗಳಿಗೆ ಹಿಂದೆಯೇ ಸಮಯ ಕೊಡಿಸಿದ್ದೇವೆ. ಸುವರ್ಣ ವಿಧಾನಸೌಧದಲ್ಲೂ ಭೇಟಿಗೆ ಅವಕಾಶ ಕೊಡಿಸಿದ್ದೆವು. ಶ್ರೀಗಳು ಏಕೆ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನಾನು ಶ್ರೀಗಳ ಜತೆಗೆ ಮಾತನಾಡುತ್ತೇನೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸಮಾಜಕ್ಕೆ ಒಳ್ಳೆಯದು ಆ ಮೇಲೆ ಬಂಗಾರದ ಮಾತು: ಮಾಜಿ ಸಚಿವ ಮುರುಗೇಶ ನಿರಾಣಿ ಆರೋಪದ ಕುರಿತು ಪ್ರತಿಕ್ರಿಯಿಸಿ, "ಸ್ವಾಭಿಮಾನಿ ಪಂಚಮಸಾಲಿ ಸಮುದಾಯಕ್ಕೆ ನಿರಾಣಿ ಏನು ಒಳ್ಳೆಯದನ್ನು ಮಾಡಿದ್ದಾರೆ ಹೇಳಲಿ. ಆಮೇಲೆ ನನಗೆ ಬಂಗಾರ ಕೊಡಿಸುವ ಬಗ್ಗೆ ತಿಳಿಸಲಿ. ತಮ್ಮ ಅಧಿಕಾರ ಅವಧಿಯಲ್ಲಿ ನಿರಾಣಿ ಈ ಸಮುದಾಯಕ್ಕೆ ಏನೂ ಮಾಡಲಿಲ್ಲ. ಆದರೆ, ನಾನು ಮೀಸಲಾತಿ ಹೋರಾಟದ ಪರ ಇದ್ದೇನೆ" ಎಂದು ತಿರುಗೇಟು ಕೊಟ್ಟರು.
"ವಿಧಾನಸಭೆ ಚುನಾವಣೆಗೂ ಮೊದಲು ನಾವು ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಗಿಮಿಕ್ ಎಂದು ಛೇಡಿಸಿದ್ದರು. ನಾವು ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದೆವು. ಇದನ್ನು ಸಹಿಸದ ವಿಪಕ್ಷಗಳು ಇದೀಗ ಯೋಜನೆಗಳು ಮತ್ತು ಸರ್ಕಾರದ ಬಗ್ಗೆ ವಿನಾಕಾರಣ ಆರೋಪಗಳನ್ನು ಮಾಡುತ್ತಿವೆ" ಎಂದು ಕಿಡಿಕಾರಿದರು.
"ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ. ಇದು ನಿರಂತರ ಪ್ರಕ್ರಿಯೆ. ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ" ಎಂದು ಸ್ಪಷ್ಟಪಡಿಸಿದರು.
"ಯತ್ನಾಳ್ ಅವರು ಬಸವತತ್ವ ಪರಿಪಾಲಕರು. ಸರ್ವಧರ್ಮ ಸಮನ್ವಯತೆ ಸಾರುವುದು ಬಸವತತ್ವ. ಜಾತಿ ಪದ್ಧತಿ ವಿರುದ್ಧ ಹೋರಾಟ ಮಾಡಿದವರು. ಬಸವಣ್ಣ, ಬಸವಣ್ಣ ಅಂತಾ ಹೇಳಿ ಯತ್ನಾಳ ಅವರು, ಒಂದು ಕೋಮಿನ ವಿರುದ್ಧ ದ್ವೇಷ ಕಾರುವುದು ಏಕೆ? ಗ್ಯಾರಂಟಿ ಹಣ ಎಲ್ಲ ಜಾತಿ, ಜನಾಂಗಗಳ ಮಹಿಳೆಯರಿಗೆ ಕೊಡುತ್ತಿದ್ದೇವೆ. ಯತ್ನಾಳ ಅವರು ತಮ್ಮ ಮನೋಭಾವನೆ ಬದಲಿಸಿಕೊಳ್ಳುತ್ತಿದ್ದರೆ ಅವರಿಗೆ ರಾಜಕೀಯ ಭವಿಷ್ಯ ಇಲ್ಲ" ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಸುಮ್ಮನೆ ರಾಜೀನಾಮೆ ಕೊಡಲು ನನಗೆ ತಲೆ ಕೆಟ್ಟಿದ್ಯಾ? ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ - HD Kumaraswamy