ಬೆಳಗಾವಿ: ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳು, ಕೆರೆಕಟ್ಟೆಗಳು ತುಂಬಿವೆ. ರೈತರ ಮುಖದಲ್ಲಿ ಸಂತಸ ಮನೆಮಾಡಿದೆ. ಉತ್ತರ ಕರ್ನಾಟಕದ ಜೀವನಾಡಿ ಮಲಪ್ರಭಾ ಜಲಾಶಯದಲ್ಲಿ ರೈತರ ಅಗತ್ಯಕ್ಕೆ ತಕ್ಕಷ್ಟು ನೀರು ಲಭ್ಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದರು.
ಇಂದು ಸವದತ್ತಿ ತಾಲೂಕಿನ ಇಂದಿರಾ ಗಾಂಧಿ ಆಣೆಕಟ್ಟು ನವಿಲುತೀರ್ಥ ಜಲಾಶಯಕ್ಕೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸಿದ ಬಳಿಕ ಸಚಿವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕಾಲ್ಗುಣದಿಂದಾಗಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿದೆ. ಮಲಪ್ರಭಾ ಜಲಾಶಯ 50 ವರ್ಷದ ಇತಿಹಾಸದಲ್ಲಿ 10ನೇ ಬಾರಿಗೆ ಭರ್ತಿಯಾಗಿದೆ. ಜಲಾಶಯ ಪೂರ್ತಿ ತುಂಬಿರುವುದರಿಂದ ರೈತರಿಗೆ ಅಗತ್ಯವಾದಾಗ ನೀರು ಬಿಡುವುದಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಳೆದ ವರ್ಷ ಮಳೆ ಅಭಾವದಿಂದಾಗಿ ಜಲಾಶಯ ಭರ್ತಿಯಾಗಿರಲಿಲ್ಲ. ಇದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಆದರೆ, ಈ ವರ್ಷ ಜಲಾಶಯ ಭರ್ತಿಯಾಗಿದೆ. ಜಲಾಶಯದ ಗರಿಷ್ಟ ಮಟ್ಟ 2079.5 ಅಡಿ, 37.731 ಟಿಎಂಸಿ ಸಾಮರ್ಥ್ಯವಿದ್ದು, ಪೂರ್ತಿ ನೀರು ಸಂಗ್ರಹವಾಗಿದೆ. ಇಂದು ಎಲ್ಲರ ಜೊತೆ ಸೇರಿ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ್ದೇನೆ. ಜನರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದೇನೆ ಎಂದು ಹೆಬ್ಬಾಳ್ಕರ್ ತಿಳಿಸಿದರು.
ಜಲಾಶಯದಲ್ಲಿ ಒಟ್ಟು 37 ಟಿಎಂಸಿ ನೀರು ತುಂಬಿದ್ದು, ಇದರಲ್ಲಿ 16 ಟಿಎಂಸಿ ನೀರು ಕುಡಿಯುವುದಕ್ಕೆ ಹಾಗೂ 16 ಟಿಎಂಸಿ ಕೃಷಿ ನೀರಾವರಿಗೆ ಬೇಕಾಗುತ್ತದೆ. ರೈತರಿಗೆ ನೆರವು ನೀಡುವುದೇ ನಮ್ಮ ಉದ್ದೇಶವಾಗಿದೆ. ಇನ್ನು ಈ ಜಲಾಶಯದ ಮೊದಲ ಆದ್ಯತೆ ಕುಡಿಯುವ ನೀರು. ಹಾಗೆಯೇ, ರೈತರ ಹಿತ ಕಾಯುವುದಕ್ಕೆ ಕೂಡ ನಾವು ಬದ್ಧ ಎಂದು ಭರವಸೆ ನೀಡಿದರು.
ಈ ವೇಳೆ ನವಲಗುಂದ ಶಾಸಕ ಎನ್.ಹೆಚ್.ಕೋನರೆಡ್ಡಿ, ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷ ಸದಾಶಿವಗೌಡ ಪಾಟೀಲ್, ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಎ.ಎಲ್.ವಾಸನದ, ಅಧೀಕ್ಷಕ ಇಂಜಿನಿಯರ್ ವಿ.ಎಸ್.ಮಧುಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಗ್ರಂಥಾಲಯ ನಿರ್ಮಿಸಿದ ಮಹಿಳೆಗೆ ಪುಸ್ತಕ ನೀಡಿ ಶ್ಲಾಘಿಸಿದ ಲಕ್ಷ್ಮೀ ಹೆಬ್ಬಾಳ್ಕರ್