ಚಿಕ್ಕೋಡಿ (ಬೆಳಗಾವಿ) : ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ನೀಡುತ್ತಿರುವ 'ಗೃಹಲಕ್ಷ್ಮಿ' ಯೋಜನೆ ಹಣದಿಂದ ಇಡೀ ಊರಿಗೆ ಅಜ್ಜಿಯೊಬ್ಬರು ಹೋಳಿಗೆ ಊಟ ಹಾಕಿಸಿದ್ದಾರೆ. ಈ ಅಜ್ಜಿಯ ಕಾರ್ಯದ ಬಗ್ಗೆ ಖುದ್ದು ಮಾಹಿತಿ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂತಸ ವ್ಯಕ್ತಪಡಿಸಿ ಗೃಹಲಕ್ಷ್ಮಿ ಜಾರಿಗೆ ತಂದಿದ್ದು ಸಾರ್ಥಕವಾಗುತ್ತಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿರುವ ಅಜ್ಜಿ ಅಕ್ಕಾತಾಯಿ ಲಂಗೂಟಿ ಅವರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೂರವಾಣಿ ಮೂಲಕ ಮಾತನಾಡಿ, ಹರ್ಷ ವ್ಯಕ್ತಪಡಿಸಿದ್ದಾರೆ. ಅಜ್ಜಿಯೊಂದಿಗೆ ಕೆಲಹೊತ್ತು ಸಚಿವರು ಗೌರವ ಮತ್ತು ಸಂಯಮದಿಂದ, ಬೆಳಗಾವಿ ಶೈಲಿಯಲ್ಲೇ ಮಾತನಾಡಿದ್ದಾರೆ.
'ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಿ, ನಿನ್ನ ಮಗಳಾದ ನನಗೆ ಯಾವಾಗ ಊಟ ಹಾಕಿಸುತ್ತೀ?' ಎನ್ನುವ ಸಚಿವರ ಪ್ರಶ್ನೆಗೆ, 'ಜರೂರೇ ಬಾ ನಿನಗೂ ಊಟ ಹಾಕಿಸ್ತೀನಿ, ನೀನೇ ನಮಗೆಲ್ಲ ಗೃಹಲಕ್ಷ್ಮಿ ಹಣ ಕೊಡುವ ಮನೆ ಮಗಳು.. ನಿನಗೆ ಇಲ್ಲ ಎನ್ನಲಾಗುವುದೇ?' ಎಂದು ಅಜ್ಜಿ ಹೇಳಿದ್ದಾರೆ. ಅಜ್ಜಿಯ ಮಾತುಗಳಿಂದ ಬಹಳ ಸಂತಸಗೊಂಡ ಸಚಿವರು, ನಿನಗೊಂದು ರೇಷ್ಮೆ ಸೀರೆ ಕಳುಹಿಸಿರುವುದಾಗಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವ ಗೃಹಲಕ್ಷ್ಮಿ ಹಣ ಕೂಡಿಟ್ಟು ಸಿದ್ದರಾಮಯ್ಯನವರ ಶ್ರೇಯಸ್ಸಿಗಾಗಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿ, ಐದು ಜನ ಮುತೈದೆಯರಿಗೆ ಉಡಿ ತುಂಬಿರುವುದು ಗೃಹಲಕ್ಷ್ಮಿ ಯೋಜನೆಯ ಸಾರ್ಥಕ ಕ್ಷಣಕ್ಕೆ ಮತ್ತೊಂದು ಉದಾಹರಣೆ. ಇಂದು ಈ ತಾಯಿಯ ಜೊತೆ ಮಾತನಾಡಿ,… pic.twitter.com/aIMRTPrugH
— Laxmi Hebbalkar (@laxmi_hebbalkar) August 25, 2024
ಗೃಹಲಕ್ಷ್ಮಿ ಯೋಜನೆ ನಿಮ್ಮಂತವರ ಮನೆಗೆ ತಲುಪುತ್ತಿರುವುದರಿಂದ ಏನೆಲ್ಲಾ ಅನುಕೂಲವಾಗುತ್ತಿದೆ ಎಂದು ತಿಳಿದು ಸಂತಸವಾಗುತ್ತಿದೆ. ಬಡ ಜನರ ಬದುಕಿಗೆ ನೆರವಾಗಬೇಕು, ನೊಂದವರ ಬಾಳಲ್ಲಿ ನೆಮ್ಮದಿ ಮೂಡಿಸಬೇಕು ಎಂಬ ತಮ್ಮ ಸರ್ಕಾರದ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆ ಈಡೇರಿಸುತ್ತಿದೆ ಎಂದರು. ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಸಚಿವರು ತಿಳಿಸಿದರು.
ಅಜ್ಜಿಗೆ ಸನ್ಮಾನ: ತಮ್ಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೂಲಕ ಸಚಿವರು ಅಜ್ಜಿಗೆ ರೇಷ್ಮೆ ಸೀರೆ ಮತ್ತು ಹೋಳಿಗೆ ಕಳುಹಿಸಿ ಕೊಟ್ಟಿದ್ದರು. ಅಜ್ಜಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬ ಹಿರಿಯ ಜೀವ 'ಗೃಹಲಕ್ಷ್ಮಿ' ಹಣ ಕೂಡಿಟ್ಟು ಸಿದ್ದರಾಮಯ್ಯನವರ ಶ್ರೇಯಸ್ಸಿಗಾಗಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿ, ಐದು ಜನ ಮುತೈದೆಯರಿಗೆ ಉಡಿ ತುಂಬಿರುವುದು ಮನಸ್ಸಿಗೆ ಖುಷಿ ತಂದಿದೆ.
— Laxmi Hebbalkar (@laxmi_hebbalkar) August 25, 2024
ಇಂದು ನನ್ನ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಬಿ.ಬಾಗೋಜಿಕೊಪ್ಪ… pic.twitter.com/MWYTZK7cQM
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬವರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹಬ್ಬದ ಊಟ ಹಾಕಿಸಿದ್ದಾರೆ. ಅಜ್ಜಿಯ ಈ ನಡೆಗೆ ರಾಜ್ಯದೆಲ್ಲೆಡೆಯಿಂದ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಅಜ್ಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಅಜ್ಜಿಯ ಜೊತೆ ಫೋನ್ ಕರೆಯಲ್ಲಿ ಮಾತನಾಡುತ್ತಿರುವುದು ಹಾಗೂ ಸನ್ಮಾನ ಮಾಡಿರುವ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಚಿಕ್ಕೋಡಿ: ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಹೋಳಿಗೆ ಊಟ ಹಾಕಿಸಿದ ಅಜ್ಜಿ! - GRANDMOTHER HOLIGE MEALS