ದಾವಣಗೆರೆ: ಹಿಂಗಾರು ಹಾಗು ಮುಂಗಾರು ಮಳೆ ರಾಜ್ಯದಲ್ಲಿ ಭಾರಿ ನಷ್ಟ ಉಂಟು ಮಾಡಿದ್ದು, ಜನ ಮನೆ ಕಳೆದುಕೊಂಡಿದ್ದರೆ, ರೈತರ ಬೆಳೆ ನೆಲಕಚ್ಚಿದೆ. ಅಲ್ಲದೆ ಒಟ್ಟು 21 ಜನ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದೆಲ್ಲೆಡೆ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಕಾರ್ಯ ಕೈಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಇಂದು ದಾವಣಗೆರೆಗೂ ಭೇಟಿ ನೀಡಿ, ಮಳೆಹಾನಿ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಿರೇಮಲ್ಲನಕೆರೆ, ಭರಮಸಮುದ್ರ, ಉಚ್ಚಂಗಿಪುರ, ದೊಣ್ಣೆಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಮಳೆಹಾನಿ ಪ್ರದೇಶವನ್ನು ಪರಿಶೀಲನೆ ನಡೆಸಿದರು. ಮಳೆಯಿಂದ ಮನೆಹಾನಿ, ಬೆಳೆಹಾನಿಯಾಗಿರುವ ಬಗ್ಗೆ ವೀಕ್ಷಿಸಿದರು. ಜೊತೆಗೆ ಆಯಾಯ ಮಾಲೀಕರಿಗೆ ಪರಿಹಾರ ಹಾಗು ಮನೆ ಕಟ್ಟಿಕೊಳ್ಳಲು ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬಳಿಕ ಮೆಕ್ಕೆಜೋಳ ಜಮೀನಿಗೆ ತೆರಳಿ ರೈತರ ನೋವನ್ನು ಅಲಿಸಿದ್ದಾರೆ. ಮನೆ ಬಿದ್ದಿರುವುದನ್ನು ಗಮನಿಸಿ ಮನೆಗಳನ್ನು ಮಂಜೂರು ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.
ಮಳೆಯಿಂದ ದಾವಣಗೆರೆ ಜಿಲ್ಲೆಯಲ್ಲಿ ಆಗಿರುವ ಹಾನಿ ಎಷ್ಟು?: ಪರಿಶೀಲನೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, "ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್‍ನಿಂದ ಮೇವರೆಗೆ ಜಿಲ್ಲೆಯಲ್ಲಿ 1 ಮನೆ ಸಂಪೂರ್ಣ ಹಾನಿಯಾಗಿದ್ದು, 35 ಮನೆಗಳು ಭಾಗಶಃ ಹಾನಿಯಾಗಿವೆ. 25 ಕುರಿಗಳು ಸಾವನ್ನಪ್ಪಿವೆ. 251.8 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಈಗಾಗಲೇ ರೂ.11.24 ಲಕ್ಷ ಪರಿಹಾರ ನೀಡಲಾಗಿದೆ. ಜೂನ್ನಿಂದ ಸೆಪ್ಟೆಂಬರ್ವರೆಗೆ ಸುರಿದ ಮಳೆಯಿಂದ 5 ಹಸುಗಳು, 17 ಕುರಿಗಳು ಮೃತಪಟ್ಟಿದ್ದು ರೂ.2.71 ಲಕ್ಷ ಪರಿಹಾರ ನೀಡಲಾಗಿದೆ. ಅಲ್ಲದೆ ಮನೆಗಳಲ್ಲಿ 85 ಪೂರ್ಣಹಾನಿ, 97 ಭಾಗಶಃ ಹಾನಿ, 109 ಅಲ್ಪ ಹಾನಿಯಾಗಿದ್ದು ಒಟ್ಟು 1,83,20,000 ರೂ.ಗಳ ಪರಿಹಾರ ನೀಡಲಾಗಿದೆ. ಹಾನಿಯಾದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ರೂ. 2,14,95,000ಗಳನ್ನು ಒದಗಿಸಲಾಗಿದೆ" ಎಂದು ತಿಳಿಸಿದರು.
"ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್ನಲ್ಲಿ ಮನೆ ಗೋಡೆ ಬಿದ್ದು ಮೃತರಾದವರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಲಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ ಹಳ್ಳದಲ್ಲಿ ಕೊಚ್ಚಿ ಮೃತರಿಗೆ ವರದಿ ಬಂದ ತಕ್ಷಣ ಪರಿಹಾರ ಒದಗಿಸಲಾಗುತ್ತದೆ. 4 ಹಸುಗಳು, 16 ಕುರಿಗಳು ಮರಣ ಹೊಂದಿದ್ದು ರೂ.2.13 ಲಕ್ಷ ಪರಿಹಾರ ನೀಡಲಾಗಿದೆ. ಸಮೀಕ್ಷೆ ನಡೆಯುತ್ತಿದ್ದು ಸಮೀಕ್ಷೆ ನಂತರ ಪರಿಹಾರ ನೀಡಲಾಗುತ್ತದೆ. ಜಿಲ್ಲೆಯ ಎಲ್ಲ ತಹಶೀಲ್ದಾರರ ಖಾತೆಯಲ್ಲಿ ರೂ.1.68 ಕೋಟಿ ಮತ್ತು ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ರೂ.10.60 ಕೋಟಿ ಹಣ ಲಭ್ಯವಿದೆ" ಎಂದು ಮಾಹಿತಿ ನೀಡಿದರು.
ಹಿಂಗಾರು ಮಳೆಯಿಂದ ರಾಜ್ಯದಲ್ಲಿ ಭಾರಿ ಅನಾಹುತ: "ಹಿಂಗಾರು ಮಳೆ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ವಾಡಿಕೆ ಪ್ರಕಾರ ಮಳೆ ಆಗ್ಬೇಕಿತ್ತು. ಅಕ್ಟೋಬರ್ ತಿಂಗಳ ಮಳೆ ನೋಡಿದ್ರೆ 104 ಮಿಮೀ ಮೀಟರ್ ಮಳೆ ಆಗ್ಬೇಕಿತ್ತು. ಅದರೆ 160 ಮಿ.ಮೀ ಮಳೆ ಆಗಿದೆ. 56,993 ಹೆಕ್ಟೇರ್ (ಇದು ಹೆಚ್ಚಾಗುವ ಸಾಧ್ಯತೆ ಇದೆ) ಬೆಳೆಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಇದೀಗ ಸರ್ವೇ ಮಾಡಲಾಗುತ್ತಿದೆ. ಕೃಷಿ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಮಾಡಬೇಕೆಂದು ಸಿಎಂ ತಿಳಿಸಿದ್ದಾರೆ" ಎಂದು ಹೇಳಿದರು.
ಮುಂಗಾರು ಮಳೆ ಅವಧಿಯಲ್ಲೂ ಭಾರಿ ಅನಾಹುತ: "ರಾಜ್ಯದಲ್ಲಿ ಮುಂಗಾರು ಮಳೆ ಅವಧಿಯಲ್ಲಿ, 1,18000 ಹೆಕ್ಟೇರ್ ಪ್ರದೇಶ ಮೆಳೆಹಾನಿಗೆ ತುತ್ತಾಗಿದೆ. (ಇದು ಹೆಚ್ಚಾಗುವ ಸಾಧ್ಯತೆ ಇದೆ) ಬೆಳೆ ಹಾನಿ ನಷ್ಟ ಭರಿಸಲಾಗುತ್ತಿದೆ. ಹಿಂಗಾರು ಮಳೆಗೆ 21 ಜನ ಪ್ರಾಣ ಕಳೆದುಕೊಂಡಿದ್ದಾರೆ. 6 ಕಡೆ ಮನೆ ಕುಸಿತದಿಂದ ಹಾಗು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಮುಂಗಾರು-ಹಿಂಗಾರು ಎರಡೂ ಸೇರಿಸಿದ್ರೆ 121 ಪ್ರಕರಣಗಳಲ್ಲಿ ಪ್ರಾಣ ಹಾನಿ ಸಂಭವಿಸಿವೆ. ಇನ್ನು ದಾವಣಗೆರೆಯ ಹಿರೇಮಲ್ಲನಕೆರೆ ಗ್ರಾಮದಲ್ಲಿ ಕೋಡಿ ಬೀಳುವ ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿದ್ದಾರೆ. 31 ಕುಟುಂಬಗಳಿಗೆ ಮನೆ ಕಟ್ಟಿಕೊಡಲು ನಿವೇಶನ ಕೊಡಲು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ" ಎಂದರು.
ಪರಿಹಾರ ಸಾಲುವುದಿಲ್ಲ ಎಂಬ ಕೂಗು: ಮಳೆಯಿಂದಾಗಿರುವ ಹಾನಿಗೆ ನೀಡುವ ಪರಿಹಾರ ಸಾಲುವುದಿಲ್ಲ ಎಂಬ ಕೂಗಿನ ಬಗ್ಗೆ ಪ್ರತಿಕ್ರಿಯಿಸಿ, "ಸರ್ಕಾರ ನೀಡುವ ಪರಿಹಾರ ಮನುಷ್ಯನಿಗೆ ಸಾಕಾವುದಿಲ್ಲ. ಪರಿಹಾರ ಕೊಡುತ್ತೇವೆ, ಮನೆಯನ್ನು ಕೂಡ ಮಂಜೂರು ಮಾಡಿಕೊಡುತ್ತೇವೆ. ಅನಧಿಕೃತ ಮನೆಗಳಿಗೆ ಪರಿಹಾರ ಕೊಡಲು ಬರುವುದಿಲ್ಲ. ಇಂತಹವರಿಗೆ 1 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇವೆ. ಕೊಡುತ್ತಿರುವ ಪರಿಹಾರ ಸಾಲುವುದಿಲ್ಲ ಎಂದು ಪರಿಹಾರ ಪರಿಷ್ಕರಿಸಿ ಹೆಚ್ಚು ಮಾಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ" ಎಂದರು.
ಕಂದಾಯ ಗ್ರಾಮಗಳ ರಚನೆ: "ಕಂದಾಯ ಗ್ರಾಮಗಳನ್ನು ರಚನೆ ಮಾಡುವ ಕೆಲಸ ಮಾಡುತ್ತಿದ್ದೇವೆ. 1,500 ಹೊಸ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ. ಅದರಲ್ಲಿ 1 ಲಕ್ಷದ 20 ಸಾವಿರ ಜನರಿಗೆ ಹಳೇ ತಾಂಡ, ಹಟ್ಟಿಗಳಲ್ಲಿ ಒಟ್ಟು ಶಾಶ್ವತವಾಗಿ ಪರಿಹಾರ ಕೊಡುವ ಕೆಲಸ ಭರದಿಂದ ಸಾಗಿದೆ. ಡಿಸೆಂಬರ್ ಕೊನೆಗೆ 1.20 ಲಕ್ಷ ಜನರಿಗೆ ಹಕ್ಕುಪತ್ರ ಕೊಡುವ ಕೆಲಸಕ್ಕೆ ತಯಾರಿ ಮಾಡುತ್ತಿದ್ದೇವೆ" ಎಂದರು.
ಇದನ್ನೂ ಓದಿ: ಹಾವೇರಿಯಲ್ಲಿ ಶವಸಂಸ್ಕಾರಕ್ಕೂ ಅಡ್ಡಿಯಾದ ಮಳೆರಾಯ..!; ಅಂತ್ಯಕ್ರಿಯೆ ನಡೆಸಲಾಗದೇ ಪರದಾಟ