ಬೆಳಗಾವಿ: ಸಾಕು ನಾಯಿ, ಬೆಕ್ಕುಗಳ ಅಂತ್ಯಕ್ರಿಯೆಗೆ ಚಿತಾಗಾರ ಸ್ಥಾಪಿಸಲು ಕ್ರಮ ವಹಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ)ಗೆ ಸೂಚನೆ ನೀಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್, ಸಾಕು ನಾಯಿ, ಸಾಕು ಬೆಕ್ಕುಗಳು ಸತ್ತಾಗ ಅಂತಿಮ ಕ್ರಿಯೆಗೆ ಯಾವ ವ್ಯವಸ್ಥೆ ಇದೆ?. ಬೆಂಗಳೂರು ನಗರದಲ್ಲಿ ಮೂರು ಕಡೆಯಾದರೂ ಸಾಕು ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ, ಸಾಕು ಪ್ರಾಣಿಗಳು ಅಗಲಿದಾಗ ಎಂಥವರಿಗೂ ನೋವಾಗುತ್ತದೆ. ಅವುಗಳ ಗೌರವಾರ್ಥ ವಿಲೇವಾರಿಗೂ ವ್ಯವಸ್ಥೆ ಇಲ್ಲ ಅಂದಾಗ ನೋವು ಇನ್ನೂ ಹೆಚ್ಚಾಗುತ್ತದೆ. ಎಷ್ಟೇ ಜನ ಅವುಗಳನ್ನು ಪ್ರಾಣಿಗಳಂತೆ ನೋಡದೇ, ಕುಟುಂಬದ ಸದಸ್ಯರಂತೆ ಸಾಕಿರುತ್ತಾರೆ. ಕುಟುಂಬದ ಅವಿಭಾಜ್ಯ ಭಾಗವಾಗಿದ್ದ ಪ್ರಾಣಿಗಳು ಸತ್ತಾಗ ಅವುಗಳ ವಿಲೇವಾರಿ ಮಾಡಲು ನಗರದಲ್ಲಿ ವ್ಯವಸ್ಥೆ ಇಲ್ಲ. ಅದಕ್ಕೆ ಎಲ್ಲೋ ಕಾಲುವೆಗೆ ಎಸೆಯಲು ಅವರಿಗೆ ನೋವಾಗುತ್ತದೆ. ಪ್ರಾಣಿಗಳ ಗೌರವಯುತ ಅಂತ್ಯಸಂಸ್ಕಾರದ ಅಗತ್ಯವಿದೆ. ಇದರ ಬಗ್ಗೆ ಬಿಬಿಎಂಪಿಯವರಿಗೆ ಸೂಚನೆ ಕೊಡ್ತೇವೆ ಎಂದರು.
ಪ್ರಾಣಿ ದಯೆ ದೃಷ್ಟಿಯಿಂದ ನೋಡಿದಾಗ ಮತ್ತು ಪ್ರಾಣಿ ದಯೆಯಲ್ಲಿ ನಂಬಿಕೆ ಇಟ್ಟಿರುವ ನಮ್ಮ ಸಮಾಜ, ಪ್ರಾಣಿ ಸಂಕುಲವನ್ನು ಜೀವ ಸಂಕುಲ ಎಂದು ಕಾಣುವ ನಮ್ಮ ಸಂಪ್ರದಾಯದಲ್ಲಿ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ಸಾಲುತ್ತಿಲ್ಲ ಎಂದು ಸದಸ್ಯರು ಹೇಳುತ್ತಿದ್ದಾರೆ. ಅಂತೆಯೇ ನಗರದಲ್ಲಿ ಪ್ರಾಣಿಗಳ ಚಿತಾಗಾರ ಸ್ಥಾಪಿಸಲು ಮನವಿ ಮಾಡಿದ್ದಾರೆ. ಆದ್ದರಿಂದ ನಗರದಲ್ಲಿ ಕನಿಷ್ಠ ನಾಲ್ಕು ಚಿತಾಗಾರ ಸ್ಥಾಪನೆ ಕುರಿತು ಬಿಬಿಎಂಪಿಗೆ ಸೂಚಿಸುವುದಾಗಿ ಸಚಿವರು ತಿಳಿಸಿದರು.
ಬೆಂಗಳೂರಿನ ನಾಲ್ಕು ಕಡೆಯಾದರೂ ಸಾಕು ಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಎಲೆಕ್ಟ್ರಿಕ್ ಚಿತಾಗಾರ ಸ್ಥಾಪನೆಗೆ ಕ್ರಮ ವಹಿಸಲು ಸೂಚಿಸ್ತೇವೆ. ಚಿತಾಗಾರ ಸ್ಥಾಪನೆಗೆ ಜಾಗದ ಸಮಸ್ಯೆ ಇದೆ. ಆದ್ದರಿಂದ ಪಶುಸಂಗೋಪನಾ ಇಲಾಖೆಯವರ ಬಳಿಯೂ ಜಾಗದ ಬಗ್ಗೆ ಚರ್ಚೆ ಮಾಡ್ತೇವೆ. ಶಿವಾಜಿನಗರ, ಹೆಬ್ಬಾಳ ಇನ್ನೆಲ್ಲಾದರೂ ಸೂಕ್ತ ಜಾಗದಲ್ಲಿ ಎಲೆಕ್ಟ್ರಿಕ್ ಚಿತಾಗಾರ ಮಾಡ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: ಐವಿ ದ್ರಾವಣ ಉತ್ಪಾದಿಸದಂತೆ ಪ.ಬಂಗಾಳದ ಕಂಪನಿಗೆ ನಿರ್ಬಂಧ - ಸಚಿವ ದಿನೇಶ್ ಗುಂಡೂರಾವ್