ಬೆಂಗಳೂರು: ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಮುಂದುವರಿದಿದ್ದು, ಕೆಲ ಸಚಿವರು ಈ ವಿಷಯವನ್ನು ಹೈಕಮಾಂಡ್ ಅಂಗಳಕ್ಕೆ ಚೆಂಡು ಹಾಕಿದ್ದಾರೆ. ಈ ಸಂಬಂಧ ಮಾತನಾಡಿರುವ ಸಚಿವ ಕೆ.ಹೆಚ್.ಮುನಿಯಪ್ಪ, ಹೆಚ್ಚುವರಿ ಡಿಸಿಎಂ ಸೃಷ್ಟಿ ಹೈಕಮಾಂಡ್ಗೆ ಬಿಟ್ಟಿದ್ದು, ಅವರು ತೀರ್ಮಾನ ಮಾಡಲಿ. ನಾನು ಡಿಸಿಎಂ ಆಕಾಂಕ್ಷಿ ಅಲ್ಲ. ಈ ಬಗ್ಗೆ ನಾನು ಮಾತನಾಡಿ ಗೊಂದಲ ಮಾಡಲ್ಲ. ಎಲ್ಲರಿಗೂ ಜವಾಬ್ದಾರಿ ಕೊಟ್ಟಿದ್ದಾರೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವ ಸಚಿವರು ಹೈಕಮಾಂಡ್ ಭೇಟಿ ಮಾಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಯಾವುದಕ್ಕೂ ಡಿಮ್ಯಾಂಡ್ ಇಟ್ಟಿಲ್ಲ. ನಮ್ಮ ಸಾಮರ್ಥ್ಯ ನೋಡಿ ಜವಾಬ್ದಾರಿ ಕೊಟ್ಟಿದ್ದಾರೆ. ಎರಡೂವರೆ ವರ್ಷಕ್ಕೆ ಸಚಿವರ ಬದಲಾವಣೆ ಹೇಳಿಕೆಗೆ ಬದ್ಧ. ಸಚಿವ ಸಂಪುಟ ಬದಲಾವಣೆ ಸದ್ಯಕ್ಕೆ ಅವಶ್ಯಕತೆ ಇಲ್ಲ ಎಂದು ಮುನಿಯಪ್ಪ ತಿಳಿಸಿದ್ದಾರೆ.
ಸಚಿವ ಎನ್.ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಡಿಸಿಎಂ ಮಾಡುವ ಬಗ್ಗೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೈಕಮಾಂಡ್ಗೆ ತೀರ್ಮಾನ ಮಾಡುವ ಶಕ್ತಿ ಇದೆ. ಯಾರ ಬೇಡಿಕೆ ಸರಿ ತಪ್ಪು, ಯಾರ ಬೇಡಿಕೆ ಈಡೇರಿಸಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ವಿಚಾರಕ್ಕೆ ನಾವು ಮಧ್ಯೆ ಹೋಗೋದು ಸರಿಯಲ್ಲ. ನನ್ನ ಅಭಿಪ್ರಾಯ ಈ ವಿಚಾರದಲ್ಲಿ ಇಲ್ಲ. ಹೈಕಮಾಂಡ್ ತೀರ್ಮಾನವೇ ನಮ್ಮ ತೀರ್ಮಾನ ಆಗುತ್ತದೆ ಎಂದಿದ್ದಾರೆ.
ನನ್ನ ಸಹೋದ್ಯೋಗಿಗಳೇ ಹೇಳಿದರೆ ಅದಕ್ಕೆ ನಾನೇನು ಹೇಳೋಕೆ ಆಗುತ್ತದೆ. ಸಿಎಂ, ಅಧ್ಯಕ್ಷರು, ಎಐಸಿಸಿ ನಾಯಕರು ಇದನ್ನ ತೀರ್ಮಾನ ಮಾಡಬೇಕು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಚುನಾವಣೆ ಮುಂಚೆ ಸಿದ್ದರಾಮಯ್ಯ, ಡಿಕೆ ಬಣ ಅಂತ ನೀವೇ ಹೇಳಿದ್ರಿ, ಆದರೆ ಅದು ಆಗಲಿಲ್ಲ. ಸಿಎಂ ಆಗುವಾಗಲೂ ಹೇಳಿದ್ರಿ. ಪಾಪ ನಮ್ಮ ಮೇಲೆ ಪ್ರೀತಿ ಮತ್ತು ಬೇರೆಯವರ ಒತ್ತಡ ನಿಮ್ಮ ಮೇಲೆ ಇದೆ. ಲೋಕಸಭೆ ಚುನಾವಣೆಗೆ ಕಿತ್ತಾಡುತ್ತೀರಾ ಅಂತಾ ಹೇಳಿದ್ರಿ. 9 ಸೀಟು ಗೆದ್ದಾಯ್ತು. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲರೂ ಚೆನ್ನಾಗಿ ಇದ್ದಾರೆ. ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಕೂಡಾ ಒಟ್ಟಾಗಿ ಇದ್ದಾರೆ. ಸಚಿವ ರಾಜಣ್ಣ ಹೇಳಿಕೆ ವಿಚಾರ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಡಿಸಿಎಂ, ಸಚಿವರು ಎಲ್ಲರೂ ಒಂದೇ: ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಡಿಸಿಎಂ ಆಯ್ಕೆ ಬಗ್ಗೆ ಯಾವುದೇ ಜಟಾಪಟಿ ಇಲ್ಲ. ಇದಕ್ಕೆಲ್ಲಾ ಸಿಎಂ ಅಂತಿಮ ತೀರ್ಮಾನ. ಅಂತಿಮವಾಗಿ ಕ್ಯಾಬಿನೆಟ್ನಲ್ಲಿ ಯಾರು ಇರಬೇಕು. ಇರಬಾರದು ಅಂತಾ ಸಿಎಂ ಹೇಳುತ್ತಾರೆ. ಕೆಲವರು ತಮ್ಮ ಅಭಿಪ್ರಾಯ ಹೇಳಿರಬಹುದು. ನನ್ನ ಅಭಿಪ್ರಾಯ ಇದರಲ್ಲಿ ಯಾವುದೂ ಇಲ್ಲ. ಸಾರ್ವಜನಿಕವಾಗಿ ನನ್ನ ಅಭಿಪ್ರಾಯ ಅವಶ್ಯಕತೆ ಇಲ್ಲ ಎಂದರು.
ಡಿಸಿಎಂ ಸ್ಥಾನಕ್ಕೆ ಒಂದು ಗೌರವ ಇದೆ. ಈ ಬಗ್ಗೆ ಹಗುರವಾಗಿ ಮಾತನಾಡಬಾರದು. ಬಿಜೆಪಿ ಸರ್ಕಾರದಲ್ಲಿ ಮೂರು ಡಿಸಿಎಂ ಮಾಡಿದ್ರು. ಕಾಂಗ್ರೆಸ್ ಒಂದಕ್ಕಿಂತ ಹೆಚ್ಚು ಡಿಸಿಎಂ ಮಾಡಿದ ಉದಾಹರಣೆ ಇಲ್ಲ. ಡಿಸಿಎಂಗೆ ವಿಶೇಷ ಸ್ಥಾನಮಾನ ಏನು ಇಲ್ಲ. ಡಿಸಿಎಂ ಹೆಚ್ಚು ಮಂತ್ರಿ ಕೆಳಗೆ ಅನ್ನೋ ರೀತಿ ಏನಿಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: 'ಡಿಸಿಎಂ' ಚರ್ಚೆ ಮತ್ತೆ ಮುನ್ನೆಲೆಗೆ: ಉಪಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟ ಸಚಿವರಾರು?