ಬೆಳಗಾವಿ: "ಬಿಜೆಪಿಯವರು ಧಮ್ಕಿ ಹಾಕಿರಬಹುದು. ಅದಕ್ಕೆ ಅನ್ವರ್ ಮಾಣಿಪ್ಪಾಡಿ ಉಲ್ಟಾ ಹೊಡೆದಿರಬಹುದು" ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮಾಣಿಪ್ಪಾಡಿ ಅವರ ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, "ವಕ್ಫ್ ಆಸ್ತಿ ವಿವಾದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಮಾಣಿಪ್ಪಾಡಿ, 150 ಕೋಟಿ ರೂ. ಆಫರ್ ಎಂದು ಹೇಳಿದ್ದರು. ಅದು ಪಬ್ಲಿಕ್ ಡೊಮೈನ್ನಲ್ಲೂ ಇದೆ. ಮಾಧ್ಯಮಗಳ ಮುಂದೆ ಅವರೇ ಹೇಳಿದ್ದಾರೆ. ಆ ವಿಡಿಯೋ ನಾವ್ಯಾರು ಪೋಸ್ಟ್ ಮಾಡಿದ್ದಲ್ಲ" ಎಂದರು.
"ಬಿಜೆಪಿಯವರು ಮಾಣಿಪ್ಪಾಡಿಗೆ ಧಮ್ಕಿ ಹಾಕಿರಬಹುದು. ಅದಕ್ಕೆ ಅವರು ಉಲ್ಟಾ ಹೇಳಿರಬಹುದು. ತನಿಖೆಗೆ ಕೊಡುವ ಬಗ್ಗೆ ಚರ್ಚೆ ಮಾಡುತ್ತೇವೆ. ವಕ್ಫ್ ವಿವಾದ ಮುಚ್ಚಿ ಹಾಕಲು ಆಮಿಷ ಒಡ್ಡಿರುವ ಆರೋಪದಲ್ಲಿ ಕಾಂಗ್ರೆಸ್ ನಾಯಕರಿದ್ದರೂ ತನಿಖೆ ಮಾಡೋಣ. ಪರ, ವಿರೋಧ ಟೀಕೆ ಟಿಪ್ಪಣಿ ಬರುತ್ತವೆ. ನಾವು ಸರ್ಕಾರದಲ್ಲಿ ಚರ್ಚೆ ಮಾಡುತ್ತೇವೆ. ಯಾರಿದ್ದಾರೆ ಇರಲಿ ತನಿಖೆ ಮಾಡೋಣ. ಯಾರದ್ದು ತಪ್ಪಿರುತ್ತೆ ಹೊರಬರುತ್ತದೆ" ಎಂದರು.
ರಾಜಕೀಯ ಒತ್ತಡದಿಂದ ಯೂಟರ್ನ್ ಎಂದ ಡಿಕೆಶಿ: ಸುವರ್ಣಸೌಧದ ಆವರಣದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಅನ್ವರ್ ಮಾಣಿಪ್ಪಾಡಿ ಅವರು ತಮ್ಮ ಹೇಳಿಕೆ ಬದಲಿಸುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಮಾಜಿ ಅಧ್ಯಕ್ಷರ ಹೇಳಿಕೆ ವಿಡಿಯೋಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವುದನ್ನು ನಾನು ಗಮನಿಸಿದ್ದೇನೆ. ಅನೇಕ ವಿಚಾರಗಳು ಅವರ ಬಾಯಲ್ಲೇ ಬಂದಿವೆ. ತಮ್ಮ ವಿಚಾರವನ್ನು ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಪತ್ರ ಬರೆದು ತಿಳಿಸಿರುವುದಾಗಿ ಹೇಳಿದ್ದರು. ಅವರು ಹೇಳಿರುವ ವಿಚಾರಗಳನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ. ಈ ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ. ನಾವು ದಾಖಲೆ ಬಿಡುಗಡೆ ಮಾಡುವ ಮುನ್ನ ಅವರೇ ಈ ದಾಖಲೆಗಳನ್ನು ಬಿಡುಗಡೆ ಮಾಡಲಿ'' ಎಂದು ತಿಳಿಸಿದರು.
ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸಿಎಂ ಹೇಳಿದ್ದು, ಸಿಬಿಐಗೆ ವಹಿಸುವ ವಿಚಾರವಾಗಿ ಮಾತನಾಡಿ, ''ಈ ಪ್ರಕರಣದ ಎಲ್ಲಾ ವಿಚಾರ ನಮ್ಮ ಕಣ್ಮುಂದೆ ಇದೆ. ಸಿಬಿಐನವರು ಈ ಪ್ರಕರಣದ ತನಿಖೆ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿ. ನಂತರ ನಾವು ಆಲೋಚನೆ ಮಾಡುತ್ತೇವೆ. ನಾವಾಗಿ ಸಿಬಿಐ ತನಿಖೆಗೆ ನೀಡುವುದಿಲ್ಲ ಎಂದು ಬಿಜೆಪಿ ಅವರಿಗೆ ಗೊತ್ತಿದೆ. ಹೀಗಾಗಿ, ಅವರು ಸಿಬಿಐ ತನಿಖೆಗೆ ಕೇಳುತ್ತಿದ್ದಾರೆ'' ಎಂದರು.
ಈ ವಿಚಾರವಾಗಿ ಯಾಕೆ ಗೊಂದಲ ಮಾಡಲಾಗುತ್ತಿದೆ ಎಂದು ಕೇಳಿದಾಗ, "ಗೊಂದಲ ಮಾಡುತ್ತಿರುವವರು ನೀವು. ಅವರ ಹೇಳಿರುವ ಮಾತನ್ನು ನೀವು ಪ್ರಕಟಿಸಿದ್ದೀರಿ. ಈ ವಿಚಾರವನ್ಮು ಸಿಎಂ ಟ್ವೀಟ್ ಮಾಡಿದ್ದಾರೆ. ಈ ವಿಚಾರ ಮುಚ್ಚಿಕೊಳ್ಳಲು ಅವರಿಂದ ವಿಭಿನ್ನ ಹೇಳಿಕೆ ಕೊಡಿಸಲಾಗಿದೆ. ಅವರು ಹೇಳಿಕೆ ನೀಡಿರುವುದು ಸತ್ಯ. ಬೇಕಾದರೆ ಅವರ ಧ್ವನಿ ನೀವೇ ಪರಿಶೀಲಿಸಿ'' ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ನನಗೆ ಆಫರ್ ಕೊಟ್ಟಿದ್ದಾರೆ ಎಂಬ ಅನ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ''ಈ ವಿಚಾರವನ್ನು ಮೊದಲೇ ಹೇಳಬೇಕಿತ್ತು. ಯಾರೆಲ್ಲಾ ಆಫರ್ ಕೊಟ್ಟಿದ್ದರು ಎಂದು ಆಗ ಹೇಳದೆ, ಈಗ ಹೇಳಿದರೆ ಏನು ಪ್ರಯೋಜನ? ಅಧಿಕಾರ ಇದ್ದಾಗ ಏನು ಹೇಳುತ್ತೇವೆ ಎಂಬುದು ಮುಖ್ಯ'' ಎಂದರು.
ಇದನ್ನೂ ಓದಿ: ವಿಜಯೇಂದ್ರ ನನಗೆ ₹150 ಕೋಟಿ ಆಫರ್ ಮಾಡಿರಲಿಲ್ಲ: ಅನ್ವರ್ ಮಾಣಿಪ್ಪಾಡಿ