ಬೆಂಗಳೂರು: 'ಬಿಜೆಪಿಯವರು ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ. ನಮಗೆ ಬುದ್ಧಿ ಹೇಳುತ್ತಾರಲ್ಲ' ಎಂದು ಗೃಹ ಸಚಿವ ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಸಂಬಂಧ ಬಿಜೆಪಿಯಲ್ಲೇ ಒಮ್ಮತ ಇಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಾ, "ಬಿಜೆಪಿಯವರು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ. ಅವರ ಪಕ್ಷದ ವಿಚಾರ ಮಾತನಾಡುವುದಿಲ್ಲ. ಮನೆ ಒಂದು ಮೂರು ಬಾಗಿಲೋ, ನಾಲ್ಕು ಬಾಗಿಲೋ ಏನೋ ಅಂತಾರಲ್ಲ. ಅದೆಲ್ಲ ನಮಗೆ ಗೊತ್ತಿಲ್ಲ" ಎಂದರು.
ವಿರೋಧ ಪಕ್ಷಗಳ ಪಾದಯಾತ್ರೆ ಕುರಿತು ಮಾತನಾಡಿ, "ನಾವು ಪಾದಯಾತ್ರೆ ಮಾಡುವುದಿಲ್ಲ. ಸಮಾವೇಶದ ಮಾದರಿಯಲ್ಲಿ ಜನರಿಗೆ ಏನು ತಿಳಿಸಬೇಕೋ ತಿಳಿಸುತ್ತೇವೆ. ಬಿಜೆಪಿ ಪಾದಯಾತ್ರೆಗೆ ನಾವು ಅನುಮತಿ ಕೊಡುವುದಿಲ್ಲ ಅಂತ ಹೇಳಿದ್ದೇನೆ, ಕೊಡುವುದಿಲ್ಲ. ಅವರ ಪಾಡಿಗೆ ಅವರು ಪಾದಯಾತ್ರೆ ಮಾಡಿಕೊಳ್ಳಲಿ. ಜನರಿಗೆ ತೊಂದರೆ ಆದರೆ ಮಾತ್ರ ಸುಮ್ಮನೆ ಇರುವುದಿಲ್ಲ. ಕಾನೂನು ಬಾಹಿರ ಕೆಲಸ ಮಾಡಿದರೆ ಮಾತ್ರ ಕ್ರಮ ತೆಗೆದುಕೊಳ್ಳುತ್ತೇವೆ. ಅವರ ಪಾಡಿಗೆ ಅವರು ನಡೆದುಕೊಂಡು ಹೋಗಲು ನಮ್ಮದೇನೂ ಅಭ್ಯಂತರ ಇಲ್ಲ" ಎಂದರು.
ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರವಾಗಿ ಪ್ರತಿಕ್ರಿಯಿಸಿ, "ಯಾರು ಅಕ್ರಮವಾಗಿ ಬಾಂಗ್ಲಾದೇಶಿಗರು ಬೆಂಗಳೂರಲ್ಲಿ, ರಾಜ್ಯದಲ್ಲಿ ನೆಲೆಸಿದ್ದಾರೋ ಅವರನ್ನು ಗುರುತಿಸಿ, ನಿಯಮ ಬಾಹಿರವಾಗಿ ದೇಶದಲ್ಲಿ ತಂಗಿದ್ದರೆ ಅವರನ್ನು ಬಂಧಿಸಿ ಡಿಟೆನ್ಶನ್ ಸೆಂಟರ್ಗೆ ಕಳುಹಿಸುತ್ತೇವೆ. ಅಲ್ಲಿಗೆ ಕಳಿಸಿದ ಮೇಲೆ ಬಾಂಗ್ಲಾದೇಶದ ರಾಯಭಾರಿಯನ್ನು ಸಂಪರ್ಕಿಸುತ್ತೇವೆ. ಇದು ನಿತ್ಯದ ಪ್ರಕ್ರಿಯೆಯಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಸರ್ಕಾರದ ವಿರುದ್ಧ 7 ದಿನ ದೋಸ್ತಿಗಳ ಬೆಂಗಳೂರು-ಮೈಸೂರು ಪಾದಯಾತ್ರೆ; ರೂಪುರೇಷೆ ಹೇಗಿರಲಿದೆ? - BJP JDS Padayatra