ಬೆಂಗಳೂರು : ಸಿಎಎ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಧರ್ಮದ ಆಧಾರದ ಮೇಲೆ ಪೌರತ್ವ ಕೊಡುವ ನಿರ್ಧಾರ ಮಾಡಬಾರದು. ಒಂದು ಸಾಮಾನ್ಯ ಕಾನೂನು ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬರ್ಮಾದಲ್ಲಿ ರೋಹಿಂಗ್ಯಾ ಜನಾಂಗದವರಿಗೆ ಆ ಸರ್ಕಾರ ತೊಂದರೆ ಕೊಡ್ತಿದೆ. ಆ ಜನಾಂಗದವರು ನಮ್ಮ ದೇಶಕ್ಕೆ ಬಂದಿದ್ದಾರೆ. ಬೌದ್ಧರಿಗೆ ಪೌರತ್ವ ಯಾಕೆ ಕೊಟ್ರು ಹೇಳಿ?. ಮಾನವೀಯತೆಯಿಂದ ನೆಹರು ಕೊಟ್ಟಿದ್ದಾರೆ. ಐದು ವರ್ಷದ ಹಿಂದೆ ಈ ಕಾನೂನು ಮಾಡಿ ಚುನಾವಣೆ ಬಂದಾಗ ನೋಟಿಫಿಕೇಷನ್ ಮಾಡಿರುವ ಉದ್ದೇಶ ಏನು? ಎಂದು ಪ್ರಶ್ನಿಸಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಸರ್ಕಾರ ದಬ್ಬಾಳಿಕೆ ಮಾಡಿದ್ದಾರೆಂದು ಹೇಗೆ ಗೊತ್ತಾಗುತ್ತದೆ. ಅದನ್ನು ನಿರ್ಧಾರ ಮಾಡುವುದು ಯಾರು?. ನಿಮಗೆ ಹೇಗೆ ಗೊತ್ತಾಗುತ್ತದೆ. ಶ್ರೀಲಂಕಾದಲ್ಲಿ ತಮಿಳು ಮುಸ್ಲಿಂರಿದ್ದಾರೆ. ತಮಿಳು ಹಿಂದೂಗಳಿದ್ದಾರೆ. ತಮಿಳು ಮುಸ್ಲಿಂಗೆ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳುವುದಕ್ಕೆ ಆಗುತ್ತಾ?. ಪಾಕಿಸ್ತಾನದಲ್ಲಿ ಸಿಯಾ ಜನಾಂಗಕ್ಕೆ ಸಮಸ್ಯೆ ಆಗ್ತಿದೆ. ಅವರು ನಮ್ಮ ದೇಶಕ್ಕೆ ಬರುತ್ತಾರೆ. ನೀವು ಕ್ರಿಶ್ಚಿಯನ್, ಬೌದ್ದರಿಗೆ, ಪರ್ಶಿಯನ್ರಿಗೆ ಪೌರತ್ವ ಕೊಡುವುದಾಗಿ ಹೇಳುತ್ತೀರಿ?. ಆದರೆ, ಮುಸ್ಲಿಮರಿಗೆ ಪೌರತ್ವ ಕೊಡಲ್ಲವೆಂದು ಹೇಳುವುದಕ್ಕೆ ಆಗುತ್ತಾ? ಎಂದು ಮುಸ್ಲಿಮರಿಗೂ ಪೌರತ್ವವನ್ನು ಕೊಡಬೇಕೆಂದು ಪರೋಕ್ಷವಾಗಿ ಹೇಳಿದರು.
ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಾಟೆ ಯಾರೋ ಕೆಲವರು ಮಾಡಿರೋದನ್ನು ಇಡೀ ಮುಸ್ಲಿಂ ಸಮುದಾಯ ಮಾಡಿದೆ ಅಂತಾ ಹೇಳೊಕೆ ಆಗಲ್ಲ. ಎಂ ಎಂ ಕಲಬುರ್ಗಿಯವರನ್ನು ಹತ್ಯೆ ಮಾಡಿದವರು ಯಾರು?. ಯಾರೇ ತಪ್ಪು ಮಾಡಿದ್ರು ಅದು ತಪ್ಪೇ. ಗೌರಿ ಲಂಕೇಶ್ ಹತ್ಯೆ ಮಾಡಿದ್ರು. ಹಾಗಾದ್ರೆ ಹಿಂದೂಗಳೆಲ್ಲಾ ಭಯೋತ್ಪಾದಕ ಪ್ರಮೋಟರ್ ಅಂತಾ ಹೇಳುವುದಕ್ಕೆ ಆಗಲ್ಲ ಎಂದರು.
ಇದನ್ನೂ ಓದಿ : ಸಿಎಎ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಚಿವ ಪರಮೇಶ್ವರ್