ಬೆಂಗಳೂರು: ಜಗತ್ತಿನಲ್ಲಿ ಸುಳ್ಳು ಎಲ್ಲಿದೆ ಎಂದು ಪ್ರಶ್ನೆ ಮಾಡಿದರೆ ಆ ಸುಳ್ಳು ಬಿಜೆಪಿಯವರ ಬಾಯಲ್ಲಿ ಸಿಗುತ್ತದೆ ಎಂದು ಸಚಿವ ದಿನೇಶ್ ಗಂಡೂರಾವ್ ವಾಗ್ದಾಳಿ ನಡೆಸಿದರು.
ಸರ್ಕಾರ ದೇವಸ್ಥಾನಗಳ ಹುಂಡಿಗೆ ಕನ್ನ ಹಾಕುತ್ತಿದೆ ಎಂಬ ಬಿಜೆಪಿ ಆರೋಪದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿ, ಬಿಜೆಪಿಯವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಏನು ಬೇಕಾದರೂ ಹೇಳಲು ತಯಾರಾಗಿದ್ದಾರೆ. ಒಂದು ಕೋಟಿ ರೂಪಾಯಿ ಆದಾಯ ಇರುವ ದೇವಸ್ಥಾನಗಳಿಗೆ 10% ವಂತಿಗೆ ಸಂಗ್ರಹ ಮಾಡಲು ನಿರ್ಧರಿಸಿದ್ದೇವೆ. 25 ಲಕ್ಷ ರೂ. ಇದ್ದ ಆದಾಯ ಮಿತಿಯನ್ನು ಒಂದು ಕೋಟಿಗೆ ಏರಿಕೆ ಮಾಡಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕಳಕಳಿ, ಕಾಳಜಿ ಇದ್ದಿದ್ದರೆ, ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು. ಆಗ ಯಾಕೆ ಕಾನೂನು ವಾಪಸ್ ಪಡೆಯಲಿಲ್ಲ, ರದ್ದು ಮಾಡಲಿಲ್ಲ ಎಂದು ಸವಾಲು ಹಾಕಿದರು.
''ನಾವು ಸಣ್ಣ ದೇವಸ್ಥಾನಗಳಿಗೆ ಅನುಕೂಲ ಆಗಲು ಸಹಾಯ ಮಾಡಿದ್ದೇವೆ. ನಮ್ಮಿಂದ ದೇವಸ್ಥಾನಕ್ಕೆ, ಅರ್ಚಕರಿಗೆ ಅನುಕೂಲ ಆಗುತ್ತಿದೆ. ದೇವಸ್ಥಾನದ ಅಭಿವೃದ್ಧಿಗೆ ಹಣ ಬಳಕೆ ಮಾಡುತ್ತೇವೆ. ಇವರ ತಕರಾರು ಏನು? ಪ್ರತಿಯೊಂದರಲ್ಲೂ ಹಿಂದೂ ವಿರೋಧಿ, ಹಿಂದೂ ವಿರೋಧಿ ಎನ್ನುತ್ತಾರೆ, ಇವರೊಬ್ಬರೇನಾ ಹಿಂದೂಗಳು? ಸುನೀಲ್ ಕುಮಾರ್ ಉಡುಪಿಯಲ್ಲಿ ಪರಶುರಾಮರನ್ನ ಅರ್ಧಕ್ಕೆ ನಿಲ್ಲಿಸಿಬಿಟ್ಟಿದ್ದಾರೆ. ಭುಜಾನು ಇಲ್ಲ, ಸೊಂಟಾನು ಇಲ್ಲ, ಪರಶುರಾಮನಿಗೆ ಏನು ಇಲ್ಲ. ಅದರಲ್ಲಿ ಬಿಜೆಪಿಯವರು ಭ್ರಷ್ಟಾಚಾರ ಮಾಡಿದ್ದಾರೆ. ಇವರು ದೇವರ ಬಗ್ಗೆ ಮಾತಾಡುತ್ತಾರೆ. ಅರ್ಧಕ್ಕೆ ನಿಲ್ಲಿಸಿ ಅವಮಾನ ಮಾಡಿದ್ದಾರೆ. ಭೂಮಿ ಬಗ್ಗೆನೂ ಕೂಡ ಗೊಂದಲಗಳಿವೆ. ಇವರಿಗೆ ಅನುಕೂಲವಾದಾಗ ಹಿಂದುತ್ವ ಮಾತ್ರ. ದೆಹಲಿಯಲ್ಲಿ ರೈತರಿಗೆ ತೊಂದರೆಯಾಗುತ್ತಿದೆ, ಅವರು ಹಿಂದೂಗಳಲ್ವಾ? ಇವರು ಎಷ್ಟಂತ ವಿಷ ತುಂಬುವ ಪ್ರಯತ್ನ ಮಾಡುತ್ತಾರೆ? ಇದಕ್ಕೊಂದು ಇತಿಮಿತಿ ಬೇಕು'' ಎಂದು ಕಿಡಿಕಾರಿದರು.
ಕನ್ನಡ ನಾಮಫಲಕ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಮೊರೆ ಹೋಗುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕರ್ನಾಟಕದಲ್ಲಿ ನಾವೇನು ತೀರ್ಮಾನ ಮಾಡ್ತೀವಿ, ಮಹಾರಾಷ್ಟ್ರ ಸರ್ಕಾರಕ್ಕೆ ಏನು ಸಂಬಂಧ ಅರ್ಥವಾಗುವುದಿಲ್ಲ. ಪದೇ ಪದೆ ಮಹಾರಾಷ್ಟ್ರ ಸರ್ಕಾರದವರು ನಮ್ಮ ರಾಜ್ಯಕ್ಕೆ ಬಂದು ಅವರ ಸ್ಕೀಮ್ಗಳನ್ನು ಇಂಪ್ಲಿಮೆಂಟ್ ಮಾಡಲಿಕ್ಕೆ ಬಂದಿದ್ದರು. ಅದನ್ನು ತಡೆದು ನಾವು ವಾಪಸ್ ಕಳಿಸಿದ್ದೇವೆ. ದೇಶದ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ. ಇದು ಖಂಡನೀಯ, ಅವರಿಗೆ ಯಾವುದೇ ಹಕ್ಕಿಲ್ಲ, ನೈತಿಕತೆ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್ ಟಿ ಸೋಮಶೇಖರ್ ನಮ್ಮ ಹಳೆ ಸ್ನೇಹಿತ: ಬಿಜೆಪಿ ಶಾಸಕರಿಗೆ ಆಫರ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಸ್ ಟಿ ಸೋಮಶೇಖರ ನಮ್ಮ ಹಳೆ ಕಾಂಗ್ರೆಸಿಗ, ಒಳ್ಳೆಯ ಸಂಪರ್ಕ, ಸ್ನೇಹವಿದೆ. ಬಿಜೆಪಿಯಲ್ಲಿ ಮಂತ್ರಿ ಇದ್ದಾಗಲೂ ನಮ್ಮ ಜೊತೆಗೆ ಚೆನ್ನಾಗಿದ್ದರು. ಮುಂದಿನ ರಾಜಕಾರಣ ಏನು ಮಾಡ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು. ಒಳ್ಳೆಯ ಕಾರ್ಯಕರ್ತ, ನಾಯಕ ಆಗಿದ್ದರು. ಕೆಲ ಕಾರಣಗಳಿಂದ ಬಿಟ್ಟು ಹೋಗಿದ್ದರು. ನಾವು ಆಗಲೂ ವಿರೋಧ ಮಾಡಿದ್ದೆವು, ಈಗಲೂ ವಿರೋಧ ಮಾಡ್ತೇವೆ. ಆದರೆ, ಒಳ್ಳೆಯ ಸ್ನೇಹ ಇರುತ್ತದೆ ಎಂದರು.
ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ: ಡಿಕೆಶಿ ಸಿಎಂ ಆಗ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇವೆಲ್ಲವನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಇದರ ಬಗ್ಗೆ ಯಾವುದೇ ಗೊಂದಲವಿಲ್ಲ. ಇದರ ಬಗ್ಗೆ ಮಾತನಾಡುವ ಅವಶ್ಯಕತೆಯೂ ಇಲ್ಲ. ಒಬ್ಬರು ಸಿಎಂ ಇದ್ದಾಗ ಇನ್ನೊಬ್ಬರು ಸಿಎಂ ಆಗುವ ಬಗ್ಗೆ ಮಾತನಾಡಬಾರದು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ರಾಜ್ಯದ ಪಾಲಿನ ಹಣ ಖರ್ಚು ಮಾಡದ ಕಾರಣ ಕೇಂದ್ರದ ಅನುದಾನ ಬಿಡುಗಡೆ ಆಗಿಲ್ಲ: ಕೈ ಸರ್ಕಾರಕ್ಕೆ ಬಿಜೆಪಿ ತಿರುಗೇಟು