ಬೆಂಗಳೂರು: "ಅಡಿಕೆ ಬೆಳೆಯ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗಕ್ಕೆ ಸರ್ಕಾರದಿಂದ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಲು ಸಾಧ್ಯವಿಲ್ಲ. ಪರಿಹಾರ ಕೊಡುವ ವ್ಯವಸ್ಥೆ ಸರ್ಕಾರದಲ್ಲಿ ಇಲ್ಲದ ಕಾರಣ ಕೇಂದ್ರಕ್ಕೆ ಪರಿಹಾರ ಕೊಡುವ ಬಗ್ಗೆ ಪತ್ರ ಬರೆದಿದ್ದೇವೆ" ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿಂದು ಅಡಿಕೆ ಬೆಳೆಯ ಎಲೆಚುಕ್ಕಿ ರೋಗ ಮತ್ತು ಹಳದಿ ರೋಗಕ್ಕೆ ಸರ್ಕಾರದಿಂದ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರವಾಗಿ ಕೃಷಿ ಸಚಿವರು ಉತ್ತರಿಸಿದರು.
"7 ರಿಂದ 8 ಜಿಲ್ಲೆಗಳಲ್ಲಿ ಎಲೆಚುಕ್ಕಿ, ಹಳದಿ ರೋಗ ಸಮಸ್ಯೆ ಇರುವುದು ಸತ್ಯ. ಸಮಸ್ಯೆಗಳ ಕುರಿತು ಚರ್ಚಿಸಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 2.50 ಕೋಟಿ ಹಣ ಹಳದಿ ರೋಗ ನಿಯಂತ್ರಣಕ್ಕೆ ವಿನಿಯೋಗಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗಿದೆ. ಎಲೆಚುಕ್ಕಿ ರೋಗದಿಂದ 53,977 ಹೆಕ್ಟೇರ್ ಪ್ರದೇಶ ಹಾನಿಗಿಡಾಗಿದೆ. 11,0181.13 ಲಕ್ಷ ಆರ್ಥಿಕ ನಷ್ಟ ಉಂಟಾಗಿದೆ. ಹಳದಿ ರೋಗದಿಂದ 13,767 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ. 56,233.25 ಲಕ್ಷ ಆರ್ಥಿಕ ನಷ್ಟವಾಗಿದೆ. ಅಡಿಕೆ ಬೆಳೆಗಾರರಿಗೆ ಎಲೆಚುಕ್ಕಿ ನಿಯಂತ್ರಣಕ್ಕೆ ಪ್ರತಿ ಹೆಕ್ಟೇರ್ಗೆ 4 ಸಾವಿರಗಳಂತೆ 1.5 ಹೆಕ್ಟೇರ್‌ವರೆಗೆ 6 ಸಾವಿರ ಮೊತ್ತದ ಔಷಧಿ ನಿಡಿಲಾಗುತ್ತಿದೆ. ಶಿವಮೊಗ್ಗ ತೋಟಗಾರಿಕೆ ವಿವಿಯಿಂದ ನಿಯಂತ್ರಣ ಸಂಬಂಧ ಸಂಶೋಧನೆಗಳನ್ನು ಮಾಡಿಸಲಾಗುತ್ತಿದೆ. ಪರಿಹಾರ ಕೊಡುವ ವ್ಯವಸ್ಥೆ ಸರ್ಕಾರದಲ್ಲಿಲ್ಲ. ಕೇಂದ್ರಕ್ಕೆ ಪರಿಹಾರ ಕೊಡುವ ಬಗ್ಗೆ ಪತ್ರ ಬರೆದಿದ್ದೇವೆ" ಎಂದು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಅಕ್ರಮವಾಗಿದ್ದರೆ ತನಿಖೆ: ನಗರಾಭಿವೃದ್ಧಿ ಇಲಾಖೆಯಲ್ಲಿ ಯಾವುದಾದರೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಕೊಟ್ಟರೆ ಸೂಕ್ತ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗದಗ-ಬೆಟಗೇರಿ ಅವಳಿ ನಗರದ 1ರಿಂದ 35 ವಾರ್ಡ್ಗಳ ಪೈಕಿ 8 ವಾರ್ಡ್ಗೆ ಸರಾಸರಿ 2 ದಿನಗಳಿಗೊಮ್ಮೆ ಉಳಿದ 27 ವಾರ್ಡ್ಗೆ 7ರಿಂದ 8 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪು ಬರುತ್ತಿದ್ದಂತೆ ಮೀಸಲಾತಿ ನಿರ್ಧಾರ: ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬರುತ್ತಿದ್ದಂತೆ ಕ್ರಮ ವಹಿಸಲಾಗುತ್ತದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಸ್ಪಷ್ಟಪಡಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ಕೇಸ್ ನಡೆಯುತ್ತಿದೆ. ಹೈಕೋರ್ಟ್ನಲ್ಲಿ 2 ಕೇಸ್ ಮೀಸಲಾತಿ ಬಗ್ಗೆ ಇದೆ. ಕೇಸ್ ಈ ತಿಂಗಳ ಅಂತ್ಯದಲ್ಲಿ ಮುಗಿಯಬಹುದು. ಸರ್ಕಾರದಿಂದ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ. ತೀರ್ಪು ಬಂದ ಬಳಿಕ ಮೀಸಲಾತಿ ಬಗ್ಗೆ ನಿರ್ಧಾರ ಮಾಡುತ್ತೇವೆ" ಎಂದು ಮಾಹಿತಿ ನೀಡಿದರು.
ಕೇಂದ್ರದ ಅನುದಾನ ಬಂದ ನಂತರ ಪರಿಹಾರ ವಿತರಣೆ: ಕೇಂದ್ರ ಸರ್ಕಾರಕ್ಕೆ 15 ಪತ್ರ ಬರೆದರೂ ಬರ ಪರಿಹಾರವನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದು, ಸದ್ಯ ರೈತರಿಗೆ 2 ಸಾವಿರ ರೂ ಪರಿಹಾರ ನೀಡುತ್ತಿದ್ದು ಕೇಂದ್ರದ ಅನುದಾನ ಬರುತ್ತಿದ್ದಂತೆ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಸದಸ್ಯ ಶರವಣ, ತೋಟಗಾರಿಕೆ ಬೆಲೆ ನಷ್ಟ ಮತ್ತು ಪರಿಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು," ರಾಜ್ಯದಲ್ಲಿ ತೀವ್ರ ಬರಗಾಲದಿಂದ 51,1208 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಕೇಂದ್ರಕ್ಕೆ ಪರಿಹಾರಕ್ಕಾಗಿ ಪತ್ರ ಬರೆದು 5 ತಿಂಗಳು ಆಗಿದೆ. ಈವರೆಗೂ ಕೇಂದ್ರ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಈವರೆಗೂ 15 ಪತ್ರ ಕೇಂದ್ರಕ್ಕೆ ಬರೆಯಲಾಗಿದೆ" ಎಂದರು.
ಇದನ್ನೂ ಓದಿ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ: ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡನೆ