ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಕರೆದಿದ್ದ ಸರ್ವಪಕ್ಷ ಸಭೆಗೆ ಬರದೇ ಇರುವುದು ಮಂಡ್ಯದ ಜನರಿಗೆ ಮಾಡಿದ ಅಗೌರವವಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಟೀಕಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ಕುರಿತ ಸರ್ವಪಕ್ಷ ಸಭೆಗೆ ನಿನ್ನೆ ಕೇಂದ್ರದ ಸಚಿವರು ಯಾರೂ ಬಂದಿಲ್ಲ. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಬಂದಿಲ್ಲ. ಯಾವ ಕೇಂದ್ರದ ಸಚಿವರೂ ಸರ್ವಪಕ್ಷ ಸಭೆಗೆ ಬಂದಿಲ್ಲ. ನಮ್ಮ ಮಂಡ್ಯದ ಸಂಸದರು ಸಭೆಗೆ ಬಂದಿಲ್ಲ. ಅವರು ಬಾಡೂಟಕ್ಕೆ ಹೋಗಿದ್ದರು. ಇದು ದುರಂತ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಾನು ಈಗಷ್ಟೇ ಕೇಂದ್ರ ಸಚಿವನಾಗಿದ್ದೇನೆ. ಒಂದು ತಿಂಗಳು ಬೇಕು ಅಂತ ಕೇಳಿದ್ದಾರೆ. ಅವರು ಮಾಜಿ ಸಿಎಂ, ದೇಶ ಆಳಿದ ಕುಟುಂಬದವರಾಗಿದ್ದಾರೆ. ಕನಿಷ್ಠ ರೈತರ ವಿಚಾರ ಬಂದಾಗ ಅವರು ಬರಬೇಕಿತ್ತು. ಚುನಾವಣೆ ವೇಳೆ ಕಾವೇರಿ ವಿಚಾರವಾಗಿ ಮೊದಲ ಆದ್ಯತೆ ನೀಡುತ್ತೇನೆ ಅಂದಿದ್ದರು. ನಿನ್ನೆ ಸರ್ವಪಕ್ಷ ಸಭೆಗೆ ಬರದೇ ಇರುವುದು ಮಂಡ್ಯದ ಜನರಿಗೆ ಕುಮಾರಸ್ವಾಮಿ ಮಾಡಿದ ಅಗೌರವವಾಗಿದೆ ಎಂದು ಕಿಡಿಕಾರಿದರು.
ತಮಿಳುನಾಡು ರಾಜಕೀಯ ಮಾಡಬಾರದು: ಕಾವೇರಿ ವಿಚಾರವಾಗಿ ನಮ್ಮ ಸರ್ಕಾರ ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡುತ್ತೆ. ನಾವು ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಬಾರದು ಎಂದು ಹೇಳಲು ತಮಿಳುನಾಡಿಗೂ ಅಧಿಕಾರ ಇಲ್ಲ. ಅವರು ಬೇಕಾದರೆ ಸರ್ವಪಕ್ಷ ಸಭೆ ಮಾಡಲಿ ಎಂದರು.
ನಾವು ಅವರು ನಿರ್ಣಯ ತೆಗೆದುಕೊಳ್ಳುವುದನ್ನು ತಪ್ಪು ಅನ್ನಲ್ಲ. ನಮ್ಮ ರಾಜ್ಯದ ಹಿತ ನಮಗೆ ಮುಖ್ಯ. ನಾವು ಜೊತೆಗೂಡಿ ಚರ್ಚೆ ಮಾಡಬೇಕು. ತಮಿಳುನಾಡು ರಾಜಕೀಯ ಪ್ರೇರಿತ ಚರ್ಚೆ ಬಿಡಬೇಕು. ಎರಡು ರಾಜ್ಯದ ಜನ ಬೇರೆಯವರಲ್ಲ. ನಾವೆಲ್ಲರೂ ಒಂದೇ. ಪರಸ್ಪರ ಕೂತು ಚರ್ಚೆ ಮಾಡೋಣ. ಅವರು ನ್ಯಾಯಯುತ ತೀರ್ಮಾನ ಮಾಡಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ನಿಮ್ಮೆಲ್ಲರ ನಿರೀಕ್ಷೆಯಂತೆ ಕೇಂದ್ರದಲ್ಲಿ ನನಗೆ ಕೃಷಿ ಖಾತೆ ಸಿಕ್ಕಿಲ್ಲ: ಹೆಚ್.ಡಿ.ಕುಮಾರಸ್ವಾಮಿ ಬೇಸರ - h d kumaraswamy