ಮಂಡ್ಯ: "ಯಡಿಯೂರಪ್ಪ, ಕುಮಾರಸ್ವಾಮಿ ಅವರ ಪ್ರಕರಣದ ರೀತಿ ಇದ್ದಿದ್ರೆ, ಸಿದ್ದರಾಮಯ್ಯ ಅವರು ಖಂಡಿತ ರಾಜೀನಾಮೆ ಕೊಡುತ್ತಿದ್ದರು" ಎಂದು ಮಂಡ್ಯದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಜೆಡಿಎಸ್-ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
"ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರೆ ಖಂಡಿತ ರಾಜೀನಾಮೆ ಕೊಡುತ್ತಾರೆ. ಅವರು ಕೂಡ ಹಿಂದೆ ಕೆಲವರಿಗೆ ರಾಜೀನಾಮೆಗೆ ಆಗ್ರಹ ಮಾಡಿರೋದು ಸತ್ಯ. ಯಡಿಯೂರಪ್ಪ, ಕುಮಾರಸ್ವಾಮಿ ಡಿ ನೋಟಿಫಿಕೇಷನಲ್ಲಿ ಇನ್ವಾಲ್ ಆಗಿದ್ದಾರೆ. ಲೋಕಾಯುಕ್ತದಲ್ಲಿ ತನಿಖೆ ಆಗುತ್ತಿದೆ. ಆ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಇದ್ರೆ ಖಂಡಿತ ರಾಜೀನಾಮೆ ಕೊಡ್ತಿದ್ರು. ನೂರಕ್ಕೆ ನೂರರಷ್ಟು ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ" ಎಂದು ತಿಳಿಸಿದರು.
"ಮುಖ್ಯಮಂತ್ರಿ ಕುಟುಂಬ ಎನ್ನುವುದು ಬಿಟ್ಟರೆ ಯಾವ ಸಂಬಂಧವೂ ಇಲ್ಲ. ಸಿದ್ದರಾಮಯ್ಯ ಪತ್ನಿ, ಅವರ ಬಾಮೈದ, ಮುಡಾ ಈ ತರಹ ಇದೆ. ಕಾನೂನು ಬಾಹಿರ ಅಂದ್ರೆ ತಿರಸ್ಕರಿಸಬೇಕಿತ್ತು. ಕಾನೂನು ಬಿಟ್ಟುಕೊಡು ಅಂದಿದ್ರಾ? ಇದೆಲ್ಲ ರಾಜಕೀಯ ಪ್ರೇರಿತ ಚರ್ಚೆಗಳು. ರಾಜ್ಯಪಾಲರು ರಾಜಕೀಯ ಪ್ರೇರಿತ ತೀರ್ಮಾನ ಕೊಟ್ಟಿದ್ದಾರೆ. ನ್ಯಾಯಾಲಯಕ್ಕೆ ನಾವು ಬದ್ಧ. ತನಿಖೆ ಆಗಲಿ ಅಂತ ನ್ಯಾಯಾಲಯ ಹೇಳಿದೆ. ತನಿಖೆ ಬೇಡ ಅಂತ ನಮ್ಮ ಪಕ್ಷ, ನಾವು ಯಾವತ್ತೂ ಹೇಳಿಲ್ಲ. ಎಲೆಕ್ಷನ್ ಬಾಂಡ್ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರಿಗೆ ರಾಜೀನಾಮೆ ಕೊಡಿ ಅಂತ ಹೇಳೋಕಾಗುತ್ತಾ? ಗೋದ್ರಾ ಹಗರಣದಲ್ಲಿ ಮೋದಿ ರಾಜೀನಾಮೆ ಕೊಟ್ಟು ಬಂದಿದ್ರಾ? ಮಾಜಿ ಮುಖ್ಯಮಂತ್ರಿ ಆಗಿದ್ದವರು, ಬಿಜೆಪಿ-ಜೆಡಿಎಸ್ ಸ್ವಲ್ಪ ನೋಡಿ ಮಾತನಾಡಬೇಕು. ಎಲ್ಲಾ ಇತಿಹಾಸ ಇದೆ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ. ನಮ್ಮ ಕಾಲದಲ್ಲಿ ಲೋಕಾಯುಕ್ತ ರಚನೆಯಾಗಿಲ್ಲ. ಲೋಕಾಯುಕ್ತ ಬಗ್ಗೆ ಅಪಾರ ನಂಬಿಕೆ ಇದೆ" ಎಂದು ತಿಳಿಸಿದರು.
ಬಿಡಾಡಿ ಮಂತ್ರಿಗಳು ಎಂಬ ಹೆಚ್ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಅವರು ಮಾತ್ರ ಒಳ್ಳೆಯವರು, ನಾವು ಬಿಡಾಡಿಗಳು. ಅವರು ಸಿಎಂ ಆಗಿದ್ದಾಗ ಏನು ನಡೆಯಿತು? ಅವರು ಸಚಿವರಾಗಿರಲಿಲ್ಲ ಪಾಪ, ನೇರವಾಗಿ ಮುಖ್ಯಮಂತ್ರಿಯಾದವರು. ಅವರ ದೇವೇಗೌಡರಿಗೆ ಕಣ್ಣೀರು ಹಾಕಿಸಿದ್ದು ಯಾರು? ದೇವೇಗೌಡರಿಂದಾಗಿ ನೂರಾರು ರಾಜಕಾರಣಿಗಳು ಕಣ್ಣೀರು ಹಾಕಿದ್ದಾರೆ. ಆದರೂ ದೇವೇಗೌಡ್ರು ಬಗ್ಗೆ ಹಿಂತಿರುಗಿ ಯಾರೂ ಮಾತನಾಡಿಲ್ಲ. ಹಿರಿಯರು, ಮಾಜಿ ಪ್ರಧಾನಿ, ರಾಜಕೀಯ ಮುತ್ಸದ್ಧಿ ಎಂದು ಗೌರವ ಕೊಟ್ಟಿದ್ದಾರೆ. ಬಹಳಷ್ಟು ಜನ ಅವರ ಮೇಲೆ ಇವತ್ತಿಗೂ ಗೌರವ ಇಟ್ಟುಕೊಂಡಿದ್ದಾರೆ. ದೇವೇಗೌಡರ ಕಣ್ಣಲ್ಲಿ ನೀರು ಬರಿಸಲು ಅವರ ಕುಟುಂಬ ಕಾರಣ" ಎಂದು ಗಂಭೀರ ಆರೋಪ ಮಾಡಿದರು.
ನಾಗಮಂಗಲ ಗಲಭೆಯಿಂದ ನೋವಾಗಿದೆ. ಬೇಸರ ಇದ್ದು, ಪರಿಹಾರ ಒದಗಿಸುತ್ತಿದ್ದೇವೆ. ಜೆಡಿಎಸ್-ಬಿಜೆಪಿ ನಾಯಕರಿಗೆ ಬಹಳ ನೋವಾಗುತ್ತಿದೆ. ನಾಗಮಂಗಲ, ಕೆರಗೋಡು ವಿವಾದ ಮುಗಿಯಿತು ಅಂತ ನಿದ್ದೇನೆ ಮಾಡ್ತಿಲ್ಲ. ಬಹಳ ಒದ್ದಾಡುತ್ತಿದ್ದಾರೆ, ಅವರನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಅವರಿಗೆ ಮಂಡ್ಯ ನೆಮ್ಮದಿಯಾಗಿರುವುದು ಬೇಕಿಲ್ಲ. ರಾಮನಗರ, ಚನ್ನಪಟ್ಟಣದ ಪರಿಸ್ಥಿತಿ ನೋಡಿದ್ದೇವೆ. ಕುಮಾರಸ್ವಾಮಿ ಇದೆಲ್ಲ ಬಿಟ್ಟು ಬನ್ನಿ ಮಂಡ್ಯಕ್ಕೆ, ಸಹಾಯ ಮಾಡಿ. ಹಿಟ್ ಆ್ಯಂಡ್ ರನ್ ಬೇಡ. ಚರ್ಚೆ ಮಾಡೋದಾದ್ರೆ ಎದುರುಗಡೆ ಬರಲಿ. ಹಾನಿಯಾದವರಿಗೆ ಈ ವಾರದಲ್ಲಿ ಪರಿಹಾರ ಕೊಡುತ್ತೇವೆ" ಎಂದರು.
ಇದನ್ನೂ ಓದಿ: ಸುಮ್ಮನೆ ರಾಜೀನಾಮೆ ಕೊಡಲು ನನಗೆ ತಲೆ ಕೆಟ್ಟಿದ್ಯಾ? ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ - HD Kumaraswamy