ಬೆಂಗಳೂರು : ಜವಾಬ್ದಾರಿಯುತ ಸ್ಥಾನದಲ್ಲಿರುವ ಭೂವಿಜ್ಞಾನಿಗಳು ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ದರ್ಪ ದೌರ್ಜನ್ಯದಿಂದ ಉದ್ದಿಮೆದಾರರನ್ನು ನಡೆಸಿಕೊಳ್ಳುತ್ತಾರೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯ ಕ್ವಾರಿ ಮತ್ತು ಕ್ರಷರ್ ಮಾಲೀಕ ಹಾಗೂ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಅವರಿಗೆ ಚಿತ್ರದುರ್ಗ ತಾಲೂಕಿನ ಭೂವಿಜ್ಞಾನಿಯಾದ ಮಧುಸೂಧನ್ ಅವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಭೂವಿಜ್ಞಾನಿಗಳು ಯಾವ ಮಟ್ಟಕ್ಕೆ ಇಳಿಯುತ್ತಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಯಾವ ರೀತಿ ದರ್ಪ- ದೌರ್ಜನ್ಯದಿಂದ ಉದ್ದಿಮೆದಾರರನ್ನು ನಡೆಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
''ಅಬ್ದುಲ್ ಮಜೀದ್ ಅವರು ನಮ್ಮ ಉದ್ಯಮದ ಹಿರಿಯ ಸದಸ್ಯರು. ಮಾತ್ರವಲ್ಲದೇ ಅನುಭವಿಗಳು ಕೂಡಾ ಆಗಿದ್ದಾರೆ. ಅವರಿಗೆ ಚಿತ್ರದುರ್ಗ ಜಿಲ್ಲೆಯ ಭೂವಿಜ್ಞಾನಿ ಮಧುಸೂಧನ್ ಅವರು ಜಿಲ್ಲೆಯ ಪ್ರತಿ ಕ್ರಷರ್‌ಗಳಿಂದ 5 ಲಕ್ಷ ರೂ. ಗಳ ಬೇಡಿಕೆ ಇಟ್ಟಿದ್ದರು. ಅಲ್ಲದೆ ಸಾಕಷ್ಟು ಬಾರಿ ಒತ್ತಡ ತಂದಿದ್ದರು. ಈ ವಿಚಾರವಾಗಿ ಕುಳಿತು ಮಾತಾಡೋಣ ಎಂದು ಹೇಳಿದಾಗ ಭೂವಿಜ್ಞಾನಿ ಸ್ಥಳ ಸೂಚಿಸಿ ಬರುತ್ತೇನೆಂದು ಹೇಳಿದ್ದಾರೆ'' ಎಂದರು.
''ಫೆಬ್ರವರಿ 8 ರಂದು ಭೇಟಿಯಾಗಿ ಮಾತುಕತೆ ಮಾಡುತ್ತಿರುವಾಗ ಏಕಾಏಕಿ ನೀವು ಈ ರೀತಿ ಹಣ ಕೇಳುತ್ತೀರಿ. ಇಷ್ಟೆಲ್ಲ ಹಣ ಕೊಡಲು ಹೇಗೆ? ಆಗುತ್ತದೆ. ನಾವುಗಳು ಈಗಾಗಲೇ ಉದ್ಯಮದಲ್ಲಿ ಸಾಕಷ್ಟು ತೊಂದರೆಯಲ್ಲಿದ್ದೇವೆ. ವ್ಯವಹಾರಗಳು ನಿಂತುಹೋಗಿವೆ. ಕೆಲಸಗಾರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಇಷ್ಟೆಲ್ಲ ಸಂಕಷ್ಟದಲ್ಲಿದ್ದೇವೆ ಎಂದು ಮಜೀದ್ ಹೇಳಿದ್ದಾರೆ. ಅದಕ್ಕೆ ಮಧುಸೂಧನ್ ಒತ್ತಾಯಪೂರ್ವಕವಾಗಿ ಕೊಡಲೇಬೇಕು ಎಂದು ಹೇಳಿ ಹೆಚ್ಚು ಮಧ್ಯಪಾನ ಮಾಡಿ ಅಬ್ದುಲ್ ಮಜೀದ್ ಅವರಿಗೆ ಹಿಂದಿನಿಂದ ಬಂದು ಏಕಾಏಕಿ ಹೊಡೆದು, ಮೂಗು ಮತ್ತು ತುಟಿಗಳನ್ನು ಜಜ್ಜಿ ಗಂಭೀರ ಗಾಯಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಇದೀಗ ಅವರು ಚಿಂತಾಜನಕ ಸ್ಥಿತಿಯಲ್ಲಿ ಚಿತ್ರದುರ್ಗ ಆಸ್ಪತ್ರೆಯ ಐಸಿಯುನಲ್ಲಿ ಅಡ್ಮಿಟ್ ಆಗಿದ್ದಾರೆ'' ಎಂದು ಹೇಳಿದರು.
ಸರ್ಕಾರ ತೆರಿಗೆ ಸೋರಿಕೆಯನ್ನು ತಡೆಗಟ್ಟಬೇಕು ಎಂದು ನಮ್ಮ ಮೇಲೆ ಅವೈಜ್ಞಾನಿಕ ಡ್ರೋನ್ ಸರ್ವೆ, ಲಾರಿಗಳಿಗೆ ಜಿಪಿಎಸ್ ಮತ್ತು ವಿದ್ಯುತ್ ಬಿಲ್‌ನೊಂದಿಗೆ ಲೆಕ್ಕಪರಿಶೋಧನೆ ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದನ್ನು ದುರುಪಯೋಗಪಡಿಸಿ ಇದನ್ನೇ ಬಂಡವಾಳವಾಗಿಸಿಕೊಂಡು ಗಣಿ ಮತ್ತು ಕ್ರಷರ್‌ಗಳಿಗೆ ತೊಂದರೆಗಳನ್ನು ಕೊಡುವುದನ್ನು ಇಲಾಖೆಯ ಕೆಲವು ಅಧಿಕಾರಿಗಳು ರೂಢಿ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ರಾಜಧನ ಪಾವತಿಸುವ ಕುರಿತು ಸ್ಪಷ್ಟವಾದ ತೀರ್ಮಾನವನ್ನು ತೆಗೆದುಕೊಂಡಿದ್ದರೂ ಇಲಾಖೆಯ ಕೆಲವು ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುತ್ತಿಲ್ಲ. ಇವರಿಗೆ ಅಕ್ರಮ ಗಣಿಗಾರಿಕೆಯೇ ಬೇಕಾಗಿದೆ. ಮಾತ್ರವಲ್ಲದೇ ಇಂತಹ ಕೊಲೆ ಬೆದರಿಕೆ, ಹಲ್ಲೆ ನಡೆಸುವಂತಹ ಮಟ್ಟಕ್ಕೆ ಕೆಲವು ಅಧಿಕಾರಿಗಳು ಬಂದಿದ್ದಾರೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಉಗ್ರ ಹೋರಾಟ: ಸರ್ಕಾರ ಈ ಕೂಡಲೇ ಚಿತ್ರದುರ್ಗ ಜಿಲ್ಲೆಯ ಭೂವಿಜ್ಞಾನಿ ಮಧುಸೂಧನ್ ಅವರನ್ನು ಅವರ ಸ್ಥಾನದಿಂದ ಖಾಯಂ ಆಗಿ ವಜಾಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುವುದು ಅನಿವಾರ್ಯವಾಗುತ್ತದೆ ಎಂದು ರವೀಂದ್ರ ಶೆಟ್ಟಿ ಎಚ್ಚರಿಸಿದರು.
ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್, ಕಾರ್ಯದರ್ಶಿ ವಿ ಅರುಣ್ ಕುಮಾರ್ ಹಾಗೂ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ : ಬೇಡಿಕೆಗಳು ಈಡೇರದಿದ್ದರೆ ಕಟ್ಟಡ ಕಲ್ಲು, ಎಂ ಸ್ಯಾಂಡ್ ಪೂರೈಕೆ ಬಂದ್: ಫೆಡರೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ