ಯಾದಗಿರಿ: ನರೇಗಾ ಯೋಜನೆಯಡಿ ಕೆಲಸ ಮಾಡುವಾಗ ಮಹಿಳೆಯೊಬ್ಬರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಕುರುಕುಂದಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಹಣಮಂತಿ ಮಲ್ಲಿಕಾರ್ಜುನಪ್ಪ (52) ಮೃತ ದುರ್ದೈವಿ. ಮಹಿಳೆ ಸಾವಿಗೆ ರಣಬಿಸಿಲು ಕಾರಣ ಎನ್ನಲಾಗುತ್ತಿದೆ. ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಾಗ ಘಟನೆ ನಡೆದಿದೆ. ಏಕಾಏಕಿ ಕುಸಿದು ಬಿದ್ದ ಮಹಿಳೆ ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ಸಹಕಾರ್ಮಿಕರು ತಿಳಿಸಿದ್ದಾರೆ.
ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹೂಳೆತ್ತುವಾಗ ಹೃದಯಾಘಾತ: ಇತ್ತೀಚೆಗೆ ಇಂತಹುದೇ ಘಟನೆಯೊಂದರಲ್ಲಿ ನರೇಗಾ ಯೋಜನೆಯಡಿ ಹಳ್ಳ ಹೂಳೆತ್ತುವಾಗಲೇ ಹೃದಯಾಘಾತದಿಂದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತರಾಗಿದ್ದರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ಮಲ್ಲೇಶ ಲಕ್ಷ್ಮಣ ಸಂಬರಗಿ (55) ಎಂಬುವರು ಅಸುನೀಗಿದ್ದರು.
ಒಕ್ಕುಂದ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಹಳ್ಳದ ಹೂಳೆತ್ತುವ ಕಾಮಗಾರಿ ಮಾಡುತ್ತಿದ್ದಾಗ ಮಲ್ಲೇಶ ತೀವ್ರ ಎದೆನೋವಿನಿಂದ ಕುಸಿದು ಬಿದ್ದಿದ್ದರು. ನೋಡ ನೋಡುತ್ತಿದ್ದಂತೆ ಸ್ಥಳದಲ್ಲೇ ಮಲ್ಲೇಶ ಕೊನೆಯುಸಿರೆಳೆದಿದ್ದರು. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ: ಬೈಲಹೊಂಗಲ: ಹೂಳೆತ್ತುವಾಗಲೇ ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು - Heart Attack