ತುಮಕೂರು: ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ತುಮಕೂರಿನಲ್ಲಿಂದು ಬಿಜೆಪಿ-ಜೆಡಿಎಸ್ ಪಕ್ಷದ ವತಿಯಿಂದ ಆರ್.ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಆರ್.ಅಶೋಕ್ ಮಾತನಾಡಿ, ನೇಹಾ ಕೊಲೆ ಪ್ರಕರಣ ಇಡೀ ರಾಜ್ಯವೇ ತಲೆತಗ್ಗಿಸುವಂಥದ್ದು. ಇದರಲ್ಲಿ ಯಾರೂ ರಾಜಕೀಯ ಮಾಡೋಕೆ ಬಯಸೋದಿಲ್ಲ. ಕಾಂಗ್ರೆಸ್ನವರಿಗೆ ತಲೆ ಇದ್ದಿದ್ದರೆ ತಕ್ಷಣ ಕ್ರಮ ತೆಗೆದುಕೊಳ್ತೀನಿ ಅಂತಾ ಹೇಳಬೇಕಿತ್ತು. ಪರಮೇಶ್ವರ್ ಹೇಳ್ತಾರೆ ಲವ್ ಮಾಡಿದ್ರು ಅಂತ, ನೀವಿರೋದು ತುಮಕೂರಿನಲ್ಲಿ. ಆ ಹುಡುಗಿ ಇರೋದು ಹುಬ್ಬಳ್ಳಿಯಲ್ಲಿ. ನೀವೇನಾದ್ರೂ ಅವರು ಪಾರ್ಕ್‌ನಲ್ಲಿ ಕೂತಿರೋದನ್ನು ನೋಡಿದ್ದೀರಾ? ಎಂದು ಟೀಕಿಸಿದರು.
ಮೊದಲು ತನಿಖೆ ಮಾಡ್ತೀವಿ, ನಂತರ ಏನು ಅಂತಾ ಹೇಳ್ತೀವಿ ಅಂತಾ ಹೇಳಬೇಕಿತ್ತು. ನಾನು ಅವರಿಗಿಂತ ಮೊದಲು ಗೃಹ ಸಚಿವನಾಗಿದ್ದೆ. ಯಡಿಯೂರಪ್ಪ ಸರ್ಕಾರದಲ್ಲಿ ಗೃಹ ಸಚಿವನಾಗಿದ್ದೆ. ಅದು ದೇಶದಲ್ಲಿಯೇ ಅತ್ಯಂತ ಶಿಸ್ತುಯುತವಾದ ಇಲಾಖೆ. ಮುಖ್ಯಮಂತ್ರಿಗಿಂತ ಹೆಚ್ಚು ಜವಾಬ್ದಾರಿ ಇರುತ್ತೆ ಎಂದರು.
ಇದು ಲವ್ ಕೇಸ್ ಅಂತಾ ಹೇಳ್ತಿದ್ದಾರೆ. ನಾವು ಅದನ್ನೇ ಹೇಳ್ತಿದ್ದೇವೆ. ಇದು ಲವ್ ಕೇಸೇ. ಲವ್ ಜಿಹಾದ್ ಕೇಸ್ ಅಂತಾ ಹೇಳ್ತಿರೋದು. ಈ ಲವ್ ಜಿಹಾದ್ಗೆ ಹೊರದೇಶಗಳಿಂದ ಫಂಡ್ ಬರ್ತಿದೆ. ಡಿ.ಕೆ.ಶಿವಕುಮಾರ್, ಅವನು ನಮ್ಮ ಬ್ರದರ್ ಅಂತ ಹೇಳ್ತಾರೆ. ಇಂತಹವರೇ ಡಿಕೆಶಿಯವರ ಬ್ರದರ್ಗಳು ಎಂದು ವ್ಯಂಗ್ಯವಾಡಿದರು.
ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು- ಈಶ್ವರಪ್ಪ: ನೇಹಾ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಕೊಲೆ ಖಂಡಿಸಿ ರಾಷ್ಟ್ರಭಕ್ತ ಬಳಗದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಿಬಿಐಗೆ ವಹಿಸಿದರೆ ಸತ್ಯ ಹೊರಬರುತ್ತದೆ. ಇಂತಹ ರಾಕ್ಷಸಿ ಕೃತ್ಯ ನಡೆಸಿದ ಆರೋಪಿಗೆ ಗಲ್ಲು ಶಿಕ್ಷೆ ಅಲ್ಲ, ಜನರ ನಡುವೆ ಬಿಟ್ಟಿದ್ರೆ ಆತನ ದೇಹವೂ ಪತ್ತೆ ಆಗುತ್ತಿರಲಿಲ್ಲ ಎಂದು ತಿಳಿಸಿದರು.