ಹುಬ್ಬಳ್ಳಿ: ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 37 ಮಂದಿಗೆ ವಾಂತಿ-ಭೇದಿಯಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥರಾದ ಐವರನ್ನು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದವರಿಗೆ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆದಿದೆ.
ಈ ಕುರಿತು ವಿನೋದ್ ಎಂಬವರು ಮಾತನಾಡಿ, ''ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಹಳ್ಳದ ನೀರು ಕಲುಷಿತವಾಗಿದೆ. ಈ ನೀರು ಕುಡಿದು ನಮಗೆ ವಾಂತಿ-ಭೇದಿ ಶುರುವಾಗಿದೆ. ಮೊದಲು ನೀರು ಸ್ವಚ್ಛವಾಗಿತ್ತು. ಆದರೆ ಹಳ್ಳದಲ್ಲಿ ಬಂದ ಕಲುಷಿತ ನೀರನ್ನು ಬೋರ್ಗೆ ತುಂಬಿ ಅದನ್ನು ನಮಗೆ ಸರಬರಾಜು ಮಾಡಿದ್ದರು. ಮೊದಲಿಗೆ ನಮಗೆ ನೀರು ಅಷ್ಟೊಂದು ಕಲುಷಿತವಾಗಿ ಕಂಡುಬರಲಿಲ್ಲ. ನಂತರ ಗ್ರಾಮ ಪಂಚಾಯತ್ನವರಿಗೆ ತಿಳಿಸಿದೆವು. ನಂತರ ಅವರು ಟ್ಯಾಂಕ್ ಸ್ವಚ್ಛಗೊಳಿಸಿದರು'' ಎಂದು ತಿಳಿಸಿದರು.
ನಿರ್ಮಲಾ ಎಂಬವವರು ಪ್ರತಿಕ್ರಿಯಿಸಿ, ''ನಿರಂತರ ಮಳೆಯಾಗಿದ್ದರಿಂದ ಕೆಂಪುಮಿಶ್ರಿತ ನೀರು ಸರಬರಾಜು ಮಾಡಿದ್ದರು. ನಾವು ಇದು ಮಳೆ ನೀರು ಇರಬೇಕೆಂದು ಕುಡಿದಿದ್ದೇವೆ. ಆದ್ರೆ ಈಗ ಅದು ಕಲುಷಿತ ನೀರೆಂದು ಗೊತ್ತಾಗಿದೆ. ಗ್ರಾಮದ ಮಹಿಳೆಯರು, ಮಕ್ಕಳು, ವೃದ್ದರು ಎಲ್ಲರಿಗೂ ವಾಂತಿ-ಭೇದಿ ಶುರುವಾಗಿದೆ. ಇದಕ್ಕೆ ನಿಖರ ಕಾರಣ ಏನು ಅಂತ ಗೊತ್ತಾಗಿಲ್ಲ'' ಎಂದರು.
ಪಿಡಿಒ ಅಮಾನತು: ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ.ಸಿಇಒ ಸ್ವರೂಪ ಟಿ.ಕೆ. ಅವರು ಕಲಘಟಗಿ ತಾಲೂಕಿನ ಮುತಗಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಕರ್ತವ್ಯಲೋಪ ಮತ್ತು ನಿಷ್ಕಾಳಜಿ ತೋರಿದ ಪಿಡಿಒ ಪ್ರವೀಣ ಕುಮಾರ ಗಣಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಕಲುಷಿತ ನೀರು ಸೇವಿಸಿ 80 ಜನ ಅಸ್ವಸ್ಥ, ಪಿಡಿಒ ಅಮಾನತು - PDO Suspend