ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಐಆರ್‌ಬಿ ಕಾಮಗಾರಿ ಪ್ರಾರಂಭವಾಗಿ 10 ವರ್ಷವಾದರೂ ಕಾಮಗಾರಿ ಮುಗಿದಿಲ್ಲ. ಈ ಅವ್ಯವಸ್ಥೆಗೆ ಮೋದಿ ಸರ್ಕಾರವೇ ಕಾರಣ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾರವಾರದಲ್ಲಿ ಮಂಗಳವಾರ ತ್ರೈಮಾಸಿಕ ಕೆಡಿಪಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ಕಾಮಗಾರಿ ಮೂಲಕ ಐಆರ್ ಬಿ ಕಂಪನಿ ದುಡ್ಡು ಮಾಡಿಕೊಂಡು ಹೋಗಲು ಬಂದಿದೆ. ಇದು ಕೇಂದ್ರ ಮಂತ್ರಿಗಳ ಕಂಪನಿಯಾದ ಕಾರಣ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡ ಸಹಕಾರ ನೀಡುತ್ತಿದ್ದಾರೆ. ಆದರೆ, ಇದನ್ನು ಸರಿಪಡಿಸದೇ ಇದ್ದಲ್ಲಿ ಜನರು ಬೀದಿಗೆ ಇಳಿಯಲಿದ್ದಾರೆ. ಇದಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹೊಣೆಯಲ್ಲ. ಇದಕ್ಕೆ ಎನ್‌ಎಚ್‌ಐ ಅಧಿಕಾರಿಗಳು ಐಆರ್‌ಬಿ ಹೊಣೆಯಾಗಲಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಈಗಾಗಲೇ ಕುಂಟುತ್ತಿರುವ ಕಾಮಗಾರಿ ಅವ್ಯವಸ್ಥೆಯಿಂದಾಗಿ ಸಾವಿರಾರು ಜನರು ಸತ್ತಿದ್ದಾರೆ. ಇಷ್ಟಾದರೂ ಕ್ರಮ ಕೈಗೊಳ್ಳಬೇಕಿದ್ದ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಐಆರ್‌ಬಿ ಕಂಪನಿ ಏನು ಮಾಡಿದರು ಕೇಳುವವರಿಲ್ಲ. ಸ್ವತಃ ಮುಖ್ಯಮಂತ್ರಿ ಕೂಡ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಸೂಚಿಸಿದ್ದರು. ಇಷ್ಟಾದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೆತ್ತಿಕ್ಕೊಳ್ಳುತ್ತಿಲ್ಲ. ಐಆರ್‌ಬಿ ಕಂಪನಿ ಕೇಂದ್ರ ಸರ್ಕಾರವನ್ನೇ ಕೊಂಡುಕೊಂಡಿದೆ" ಎಂದು ಆರೋಪಿಸಿದ್ದಾರೆ.
ಎನ್‌ಜಿಟಿ ಆದೇಶ ಬರುವವರೆಗೆ ಮರಳುಗಾರಿಕೆ ಬಂದ್: "ಶರಾವತಿ ನದಿಯಲ್ಲಿ ಮರಳುಗಾರಿಕೆ ವಿರುದ್ಧ ಬಿಜೆಪಿ ಮುಖಂಡರು ಚೆನ್ನೈನ ಎನ್‌ಜಿಟಿಗೆ ತೆರಳಿದ್ದಾರೆ. ಇದೀಗ ನ್ಯಾಯಾಲಯ ಮರಳುಗಾರಿಕೆ ನಿಲ್ಲಿಸುವಂತೆ ಆದೇಶ ನೀಡಿದೆ. ಹಲವು ಅಡೆತಡೆಗಳ ನಡುವೆಯೂ ಪ್ರಾರಂಭಿಸಿದ್ದ ಮರಳುಗಾರಿಕೆ ಮತ್ತೆ ಬಂದ್ ಆಗಿದೆ. ಮುಂದಿನ ತಿಂಗಳು 4ನೇ ತಾರಿಕು ಮತ್ತೆ ವಿಚಾರಣೆ ಇದೆ. ನಿರ್ಣಯ ಆಗುವರೆಗೂ ನಮ್ಮ ಹತ್ತಿರ ಏನು ಮಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯವರು ನಾಳೆ ಈ ಕಂಪ್ಲೇಟ್ ವಾಪಸ್ ಪಡೆದರೆ ನಾಡಿದ್ದು, ನಮ್ಮ ಜಿಲ್ಲಾಧಿಕಾರಿ ಮರಳುಗಾರಿಕೆ ಪ್ರಾರಂಭಿಸಲು ಆದೇಶ ನೀಡುತ್ತಾರೆ" ಎಂದಿದ್ದಾರೆ.
ಇನ್ನು ಕೆಡಿಪಿ ಸಭೆ ನಡೆಸಿದ ಸಚಿವ ಮಂಕಾಳ ವೈದ್ಯ, "ಜಿಲ್ಲೆಯ ಸಾಮಾನ್ಯ ಬಡ ಜನರು, ಅಂಗನವಾಡಿ, ಶಾಲೆ, ವಸತಿ ಶಾಲೆ, ವಸತಿ ನಿಲಯದ ಬಡ ವಿದ್ಯಾರ್ಥಿಗಳಿಗೆ ಸರಕಾರದ ಎಲ್ಲ ಜನಪರ ಯೋಜನೆ ಹಾಗೂ ಕಾರ್ಯಕ್ರಮದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಮೂಲಕ ಯಾರೊಬ್ಬರು ವಂಚಿತರಾಗದಂತೆ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸುವಂತೆ" ಸೂಚನೆ ನೀಡಿದ್ದಾರೆ.
ಮುಂದುವರಿದು, "ಜಿಲ್ಲೆಯಲ್ಲಿ ಅಡಕೆ ಬೆಳೆ ಪ್ರದೇಶ ಹೆಚ್ಚಿದ್ದು, ಪ್ರಸಕ್ತ ಸಾಲಿನಲ್ಲಿ ನಿರಂತರ ಮಳೆಯಿಂದ ಅಡಕೆ ಬೆಳೆಗೆ ಬೇರುಳು ಬಾದೆ, ಕೊಳೆ ರೋಗ, ಎಲೆಚುಕ್ಕಿ ರೋಗ ಹೆಚ್ಚಾಗಿ ರೈತರು ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ. ಈ ಅಡಕೆ ಬೆಳೆಗೆ ತಾಗಿರುವ ರೋಗ ನಿವಾರಣೆಗೆ ಸಂಬಂಧಪಟ್ಟ ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಸ್ತರಣಾ ಕೇಂದ್ರದ ತಜ್ಞರಿಂದ ಪರಿಶೀಲಿಸಿ ಕೂಡಲೇ ಅಗತ್ಯಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರ ಸಮಸ್ಯೆಗಳ ನಿವಾರಣೆಗಾಗಿ ಗ್ರಾಮ, ಪಟ್ಟಣ ಪಂಚಾಯತ್‌ಗಳ ಹಾಗೂ ನಗರ ಸಭೆಗಳ ಸ್ಥಳೀಯ ಆಡಳಿತ ಮಂಡಳಿಯಿಂದ ಅವಶ್ಯಕತೆಯಿದ್ದರೆ ಮಾತ್ರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಭೆಗಳಲ್ಲಿ ಭಾಗವಹಿಸುವಂತೆ ಸಭಾ ನೋಟಿಸ್ ನೀಡಲಾಗುತ್ತದೆ. ಪ್ರತಿಯೊಬ್ಬ ಅಧಿಕಾರಿಗಳು ಇದಕ್ಕೆ ತಕ್ಷಣ ಸ್ಪಂದಿಸಿ ಕಡ್ಡಾಯವಾಗಿ ತೆರಳಲೇಬೇಕು" ಎಂದಿದ್ದಾರೆ.
ಈ ವೇಳೆ, ಶಾಸಕ ಭೀಮಣ್ಣ ನಾಯ್ಕ "ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಶಿರಸಿ ಪಂಡಿತ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರದ್ದೇ ಎರಡು ಗುಂಪುಗಳಾಗಿದೆ. ಯಾರು ಕೂಡ ಸರಿಯಾಗಿ ಆಸ್ಪತ್ರೆಗೆ ಬರುತ್ತಿಲ್ಲ. ಹೆಚ್ಚಿನ ಚಿಕಿತ್ಸೆಗೆ ಕ್ರೀಮ್ಸ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿದರೆ ಇಲ್ಲಿಯೂ ಕೂಡ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಇದರಿಂದ ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದ ಯುವಕನೊಬ್ಬ ಜಿಲ್ಲಾಸ್ಪತ್ರಗೆ ಬಂದರು ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. ಕೂಡಲೇ ಈ ಆಸ್ಪತ್ರೆಗಳ ಹಾಗೂ ವೈದ್ಯರ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು" ಎಂದು ಸಭೆ ಗಮನಕ್ಕೆ ತಂದರು.
ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು, "ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದರು. ಯಾವುದೇ ಜನಸಮಾನ್ಯರು ಬಂದರು ಸೂಕ್ತ ಚಿಕಿತ್ಸೆ ನೀಡಬೇಕು. ಜಿಲ್ಲೆಯಿಂದ ಯಾರೂ ಕೂಡ ಹೊರಗಡೆ ಹೋಗುವಂತೆ ಆಗಬಾರದು ಇದೇ ಕಾರಣಕ್ಕೆ ಕಾರವಾರ ಕ್ರೀಮ್ಸ್ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇದೀಗ ನರರೋಗ ತಜ್ಞರು ಬಂದಲ್ಲಿ ಕ್ರೀಮ್ಸ್ ಆಸ್ಪತ್ರೆಗೆ ಬಹುತೇಕ ಎಲ್ಲ ವೈದ್ಯರು ಬಂದಂತಾಗುತ್ತದೆ. ಅಲ್ಲದೆ ಅವಲಂಬಿತರು ಇಲ್ಲದೇ ಇದ್ದರೂ ತಾಲೂಕು ಆಸ್ಪತ್ರೆಗಳಿಂದ ಹೆಚ್ಚಿನ ಚಿಕಿತ್ಸೆಗೆ ಬರುವವರನ್ನು ವಿಳಂಬ ಮಾಡದಂತೆ ಮೊದಲು ಚಿಕಿತ್ಸೆ ನೀಡಿ ಅವರ ಜೀವಕ್ಕೆ ರಕ್ಷಣೆ ನೀಡಬೇಕು. ಈ ಬಗ್ಗೆ ಆರೋಗ್ಯಾಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು" ಎಂದು ಆದೇಶಿಸಿದ್ದಾರೆ.
ಏಜೆಂಟರ ಹಾವಳಿ ನಿಲ್ಲಿಸಿ: "ಸರ್ಕಾರ ಏಜೆಂಟರುಗಳ ಹಾವಳಿ ತಪ್ಪಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್‌ಟಿಒಗಳಲ್ಲಿ ನೋಂದಣಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಆನ್ಲೈನ್ ಮಾಡಿದೆ. ಆದರೆ, ಆರ್‌ಟಿಒ ಅಧಿಕಾರಿಗಳು ಏಜೆಂಟರು ಇಲ್ಲದೇ ಜನಸಾಮಾನ್ಯರ ಕೆಲಸ ಮಾಡದ ಆರೋಪಗಳು ಹೆಚ್ಚಾಗಿದೆ. ಕೂಡಲೇ ಈ ಏಜೆಂಟರುಗಳ ಹಾವಳಿ ಬಂದ್ ಆಗಬೇಕು. ಜನಸಮಾನ್ಯರಿಗೆ ನೇರವಾಗಿ ಸರ್ಕಾರದ ಸೌಲಭ್ಯ ಸಿಗುವಂತೆ ನೋಡಿಕ್ಕೊಳ್ಳಬೇಕು" ಎಂದು ಸೂಚಿಸಿದ್ದಾರೆ.
ಮುಡಾಕ್ಕೆ ಪ್ರತಿಕ್ರಿಯೆ: ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, "ಸಿಎಂ ಪತ್ನಿ ಅಧಿಕೃತವಾಗಿಯೇ ಸೈಟ್ ಪಡೆದುಕೊಂಡಿದ್ದರು. ಇದರಿಂದ ಈಗಲೂ ಹೇಳುತ್ತೇನೆ ಸಿಎಂ ಸಿದ್ಧರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಸಿಎಂ ಪತ್ನಿ ಮನಸ್ಸಿಗೆ ಬೇಸರವಾಗಿ ಸೈಟ್ ವಾಪಸ್ ಮಾಡುತ್ತಿರೋದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಮಗೆ ಆಸ್ತಿ ಮುಖ್ಯವಲ್ಲ, ರಾಜ್ಯ ಮುಖ್ಯ ಎಂದು ಪತ್ರ ಬರೆದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಸೈಟ್ ಹಂಚಿಕೆಯಾಗಿದೆ. ಬಿಜೆಪಿಯವರು ತಪ್ಪು ಮಾಡಿ ನಮ್ಮ ಮೇಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಾವುದೇ ತಪ್ಪು ಮಾಡಿಲ್ಲ. ಅಕ್ರಮ ಆಸ್ತಿ ಗಳಿಸಿಲ್ಲ. ಇನ್ನಾದರೂ ಸರಿಯಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಿ. ಮುಡಾ ಪ್ರಕರಣವನ್ನು ಇಲ್ಲಿಗೇ ಕೈಬಿಡಲಿ. ಮುಡಾ ಪ್ರಕರಣ ಮುಗಿಸಿ, ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು" ಎಂದು.
ಇದನ್ನೂ ಓದಿ: ಕಲಬುರಗಿ: ಕಲುಷಿತ ನೀರು ಸೇವಿಸಿ 80 ಜನ ಅಸ್ವಸ್ಥ, ಪಿಡಿಒ ಅಮಾನತು - PDO Suspend