ಮಂಗಳೂರು: ಮೇ ತಿಂಗಳು ಬಂತೆಂದರೆ ಮಾವು ಹಲಸುಗಳ ರುಚಿ ನೋಡುವ ಸಮಯ. ಮಾವಿನ ರುಚಿಯನ್ನು ಈ ಸಂದರ್ಭದಲ್ಲಿ ಸವಿದರೆ ಬಿಸಿಲ ಬೇಗೆಗೆ ಆಹ್ಲಾದಕರ ಅನುಭವ. ಇದೀಗ ಮಂಗಳೂರಿನಲ್ಲಿ ಆರಂಭವಾಗಿರುವ ಮಾವು ಮೇಳ ಗ್ರಾಹಕರನ್ನು ಸಂತುಷ್ಟಗೊಳಿಸಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆಯ ಸಹ ಯೋಗದಲ್ಲಿ ಐದು ದಿನಗಳ ಕಾಲ ನಡೆಯುವ ಮಾವು, ಹಲಸು ಮೇಳಕ್ಕೆ ನಗರದ ಕದ್ರಿ ಪಾರ್ಕ್‌ನಲ್ಲಿ ಗುರುವಾರ ಚಾಲನೆ ನೀಡಲಾಗಿದೆ.
ಮಾವು ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಂಗಳೂರಿನ ಜನರಿಗೆ ಉತ್ತಮ ಮಾವು ನೀಡಬೇಕೆಂಬ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಸುಮಾರು 20 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ಕ್ಯೂಆರ್ ಕೋಡ್ ಮೂಲಕ ಖರೀದಿಗೂ ಅವಕಾಶ ನೀಡಲಾಗಿದೆ.
ರಾಮನಗರದ ನಾನಾ ಭಾಗಗಳ ರೈತರು ಬೆಳೆದ ಮಾವು ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿದ್ದು, ಮೇ 13ರ ವರೆಗೆ ನಡೆಯಲಿದೆ. ಬೆಳಗ್ಗೆ 9 ರಿಂದ ರಾತ್ರಿ 9ಗಂಟೆ ವರೆಗೆ ಮೇಳ ನಡೆಯಲಿದೆ. ಬಿರು ಬಿಸಿಲ ಮಧ್ಯೆ ಏರ್ಪಡಿಸಿರುವ ಮಾವು, ಹಲಸು ಮೇಳಕ್ಕೆ ಉದ್ಘಾಟನೆ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, ಎರಡನೇ ದಿನವು ಗ್ರಾಹಕರು ಉತ್ಸಾಹದಲ್ಲಿ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.
ರಾಮನಗರದ ಈ ರೈತರು ನೈಸರ್ಗಿಕ ವಿಧಾನದಲ್ಲಿ ಯಾವುದೇ ಕಾರ್ಬೈಡ್ ರಾಸಾಯನಿಕ ಬಳಸದೆ ಮಾವಿನ ಕಾಯಿಯನ್ನು ಹಣ್ಣಾಗಿಸುತ್ತಾರೆ. ಕೊಯ್ದ ಕಾಯಿಗಳನ್ನು ಮಣ್ಣಿನ ಮನೆಯಲ್ಲಿ ಮುಚ್ಚಿರಿಸುತ್ತಾರೆ. ಆಗ ಬೆಚ್ಚಗಿನ ವಾತಾವರಣದಲ್ಲಿ ಮಾವು ನೈಸರ್ಗಿಕವಾಗಿ ಹಣ್ಣಾಗುತ್ತದೆ. ಹಾಗೆ ಹಣ್ಣಾಗುವ ಮಾವಿನ ರುಚಿ ಸಿಹಿ ಇರುತ್ತದೆ, ಅಲ್ಲದೆ ಬಣ್ಣ ಸಹಜವಾಗಿ ಕಾಣುತ್ತದೆ, ಹಣ್ಣುಗಳ ಬಣ್ಣ ಬೇರೆ ಬೇರೆ ರೀತಿ ಇರುತ್ತದೆ.
ಏನೇನಿದೆ?: ವಿವಿಧ ತಳಿಗಳಾದ ಅಲ್ಪೋನ್ಸ್, ಬಾದಾಮ್, ಮಲ್ಲಿಕಾ, ರಸಪುರಿ, ಮಲಗೋವಾ, ಸಿಂಧೂರ(ಬಾದಾಮಿ), ಕಾಳಪಾಡಿ, ತೋತಾಪುರಿ, ಬೆಂಗನ್‌ಪಲ್ಲಿ, ಶುಗರ್ ಬೇಬಿ ಇತ್ಯಾದಿ ಮಾರಾಟವಾಗುತ್ತಿವೆ. ಅಲ್ಲದೆ ವಿಶೇಷವೆಂದರೆ ಕೆಲವೊಂದು ವಿಶೇಷ ಮಾವಿನ ತಳಿಗಳನ್ನು ಪ್ರದರ್ಶನಕ್ಕೆ (ಮಾರಾಟ ಇಲ್ಲ) ಕೂಡ ಇರಿಸಲಾಗಿದ್ದು, ಜನ ನೋಡಿ ಖುಷಿ ಪಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ರೈತ ಮಹಿಳೆ ನಾಗಮ್ಮ ರವಿಕುಮಾರ್, "ರಾಮನಗರದಿಂದ ರೈತರೆಲ್ಲ ಒಟ್ಟಿಗೆ ಬಂದಿದ್ದೇವೆ. ಅಧಿಕಾರಿಗಳು, ಜನರು ನಮಗೆ ಸಹಕಾರ ಕೊಡುತ್ತಿದ್ದಾರೆ. ಜನರ ರೆಸ್ಪಾನ್ಸ್ ಚೆನ್ನಾಗಿದೆ. ಕಳೆದ ವರ್ಷ ಕೂಡ ಚೆನ್ನಾಗಿ ರೆಸ್ಪಾನ್ಸ್ ಇತ್ತು. ಆ ಕಾರಣದಿಂದ ಈ ಬಾರಿಯು ಬಂದಿದ್ದೇವೆ. ನಮ್ಮ ತೋಟದಲ್ಲಿ ಬೆಳೆದ ಅಲ್ಪೋನ್ಸೋ, ಮಲಗೊವ, ರಸಪೂರಿ ಮಾವಿನ ಹಣ್ಣು ತಂದಿದ್ದೇವೆ ಎಂದರು.
ಗ್ರಾಹಕ ವಾಮಂಜೂರಿನ ಫೆಲಿಕ್ಸ್ ಮಾತನಾಡಿ, "ಈ ಮೇಳದಲ್ಲಿ ವಿಭಿನ್ನ ತಳಿಯ ಮಾವುಗಳಿವೆ. ತುಂಬಾ ಜನ ಮಾವು ಖರೀದಿಗೆ ಬರುತ್ತಿದ್ದಾರೆ. ಮಾವು ತುಂಬಾ ಕಡಿಮೆ ದರದಲ್ಲಿ ಸಿಗ್ತಾ ಇದೆ" ಎಂದು ತಿಳಿಸಿದರು.
ಮಾವಿನ ದರ ಹೀಗಿದೆ:
ಕ್ರ.ಸ | ಮಾವು ತಳಿ | ದರ (ಕೆ.ಜಿ) |
1. | ರತ್ನಗಿರಿ ಅಲ್ಫೋನ್ಸೋ ಮಾವು | 216 |
2. | ಅಲ್ಫೋನ್ಸೋ ಮಾವು | 250 |
3. | ಮಲ್ಗೋವಾ ಮಾವು | 200 |
4. | ರಸಪೂರಿ ಮಾವು | 150 |
5. | ಸಿಂಧೂರ ಮಾವು | 100 |
6. | ಮಲ್ಲಿಕಾ ಮಾವು | 150 |
7. | ಶುಗರ್ ಬೇಬಿ ಮಾವು | 250 |
8. | ಕಲಪಾಡಿ ಮಾವು | 250 |
9. | ತೋತಾಪುರಿಮಾವು | 50 |
ಇದನ್ನೂ ಓದಿ: ಬೇಸಿಗೆಯಲ್ಲಿ ಸವಿಯಲೇ ಬೇಕು ಈ 8 ಮಾವಿನ ರುಚಿ!