ಬೆಳಗಾವಿ: ಹಣ್ಣುಗಳ ರಾಜ ಮಾವು. ಮಾವು ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲಿ ಇಂದಿನ ದಿನಗಳಲ್ಲಿ ರಾಸಾಯನಿಕ ಮಿಶ್ರಣ ಇಲ್ಲದ ಮಾವಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಮಾವು ಪ್ರಿಯರಿಗಾಗಿ ಬೆಳಗಾವಿಯಲ್ಲಿ ನಿನ್ನೆಯಿಂದ ಮೂರು ದಿನ ಕಾಲ ಮಾವು ಮೇಳ ಆರಂಭಗೊಂಡಿದೆ. ಈ ಬಾರಿ ವಿಶೇಷತೆ ಬೆಳಗಾವಿ ಮಾವು ಬ್ರ್ಯಾಂಡ್ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು ಬೆಳಗಾವಿ ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ನಗರದ ಹ್ಯೂಮ್ ಪಾರ್ಕ್ ನಲ್ಲಿ ಮಾವು ಮತ್ತು ಒಣ ದ್ರಾಕ್ಷಿ ಮೇಳಕ್ಕೆ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಶುಕ್ರವಾರ ಚಾಲನೆ ನೀಡಿದರು. ಕಷ್ಟ ಪಟ್ಟು ಮಾವು ಬೆಳೆಯುವ ರೈತರು ಮಧ್ಯವರ್ತಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದರು. ಇದರಿಂದ ರೈತರಿಗೆ ಯೋಗ್ಯ ಬೆಲೆ ಒದಗಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಬೆಳೆಯುವ ಮಾವನ್ನು ಆಯಾ ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ತೋಟಗಾರಿಕೆ ಇಲಾಖೆ ಮಾಡಿದೆ.
ಅದಕ್ಕೆ ಬೆಳಗಾವಿ ಮಾವು ಬ್ರ್ಯಾಂಡ್ ಅಂತ ಹೆಸರು ಕೂಡ ಕೊಟ್ಟಿದೆ, ಈ ಬಾರಿಯ ಮಾವು ಮೇಳದಲ್ಲಿ ರೈತರು ಭರ್ಜರಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳು ಸಿಗುತ್ತಿದ್ದು, ಗ್ರಾಹಕರಿಗೆ ಅನುಕೂಲ ಆಗಿದೆ.
ನಾನಾ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ:ಈಟಿವಿ ಭಾರತ ಜೊತೆಗೆ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಬೆಳಗಾವಿ ಜಿಲ್ಲೆ 12 ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯದ 12 ರೈತರಿಗೆ ಮಾವು ಮೇಳದಲ್ಲಿ ಅವಕಾಶ ನೀಡಲಾಗಿದೆ. ಮೂವತ್ತಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗಿದೆ. ಇದರ ಜೊತೆಗೆ ಒಣ ದ್ರಾಕ್ಷಿ ಮೇಳ ಕೂಡ ನಡೆಯುತ್ತಿದೆ. ಮಾವಿನ ಹಣ್ಣಿಗೆ ಯಾವುದೇ ರೀತಿ ಕೆಮಿಕಲ್ ಮಿಶ್ರಣ ಮಾಡಿಲ್ಲ. ನೈಸರ್ಗಿಕವಾಗಿ ಬೆಳೆದ ಮಾವನ್ನು ಮಾರಾಟ ಮಾಡಲಾಗುತ್ತಿದೆ. ಅಥಣಿಯಲ್ಲಿ ರೈತರು ಬೆಳೆದ ಒಣ ದ್ರಾಕ್ಷಿ ಕೂಡ ಮಾರಾಟಕ್ಕೆ ಲಭ್ಯವಿದೆ. ಅಲ್ಲದೆ ವೆಂಗುರ್ಲಾದ ಎಐಸಿಆರ್ ಪಿ ಕೇಂದ್ರದಿಂದ 60 ಬಗೆ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ. ಬೆಳಗಾವಿ ಜನ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
2,900 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ: ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 2,900 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಎಂತಹ ಪರಿಸ್ಥಿತಿಯಲ್ಲಿಯೂ ಎಕರೆಗೆ 5ರಿಂದ 6 ಟನ್ ಮಾವು ಬರುತ್ತದೆ. ರತ್ನಗಿರಿ, ದೇವಗಡ ಬ್ರ್ಯಾಂಡ್ ಹೆಸರಿನಲ್ಲಿ ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಬೆಳೆದ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಗುಜರಾತ, ಹೈದರಾಬಾದ್, ಮುಂಬೈ ಸೇರಿ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ಬೆಳಗಾವಿ ಬ್ರ್ಯಾಂಡ್ ಬೆಳಕಿಗೆ ಬರುತ್ತಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ತೋಟಗಾರಿಕೆ ಅಧಿಕಾರಿಗಳು ಬೆಳಗಾವಿ ಮಾವಿಗೆ ಒಂದು ಒಳ್ಳೆಯ ಬ್ರ್ಯಾಂಡ್ ತಂದು ಕೊಡುವ ಜೊತೆಗೆ ರೈತರ ಆದಾಯ ಹೆಚ್ಚಿಸಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಕೊಪ್ಪಳಕ್ಕೆ ಹೋಗಿ ಅಧ್ಯಯನ ಕೂಡ ಮಾಡಿ ಬಂದಿದ್ದಾರೆ.
ಇಟಗಿ ಗ್ರಾಮದ ರೈತ ಮಹಿಳೆ ದೀಪಾ ಸಾವಳೇಕರ್ ಮಾತನಾಡಿ, ಕೋಲ್ಡ್ ಸ್ಟೋರೇಜ್ನಲ್ಲಿ ಮಾವಿನ ಹಣ್ಣನ್ನು ರಿಫೈನಿಂಗ್(ಸಂಸ್ಕರಣೆ) ಮಾಡುತ್ತೇವೆ. ಆರಂಭಿಕ ಹಂತದಲ್ಲಿ ಮಾವಿನ ಕಾಯಿ ಚಿಕ್ಕವು ಇದ್ದಾಗ ಪೇಪರ್ ಬ್ಯಾಗ್ ಬಳಸಿ ಬೆಳೆಸಿದ್ದೇವೆ. ಹಾಗಾಗಿ ಕೀಟಗಳ ಕಾಟ ಇಲ್ಲ. ರತ್ನಗಿರಿ, ಆಪೂಸ್, ಕೇಸರ, ಗೋವಾ ಮಾನಕೂರ ತಳಿಯ ಹಣ್ಣುಗಳು ನಮ್ಮಲ್ಲಿವೆ. ಜನರ ರೆಸ್ಪಾನ್ಸ್ ಚೆನ್ನಾಗಿದ್ದು, ವ್ಯಾಪಾರ ಒಳ್ಳೆಯ ರೀತಿ ಆಗುತ್ತಿದೆ ಎಂದರು.
ಮಾವು ಖರೀದಿಗೆ ಮುಗಿಬಿದ್ದ ಜನ: ಮೇಳದ ಮೊದಲ ದಿನ ಮಾವು ಖರೀದಿಗೆ ಜನ ಮುಗಿ ಬಿದ್ದಿದ್ದು, ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಇಷ್ಟದ ಮಾವು ಖರೀದಿಸುತ್ತಿದ್ದಾರೆ. ಗ್ರಾಹಕರಾದ ಸುನಂದಾ ಕರಲಿಂಗನವರ ಮಾತನಾಡಿ, ಮಾವು ಮೇಳದಿಂದ ರೈತರು ಮತ್ತು ಗ್ರಾಹಕರಿಗೆ ತುಂಬಾ ಅನುಕೂಲ ಆಗಿದೆ. ಪುಣೆಯಿಂದ ನಮ್ಮ ಸಹೋದರನ ಕುಟುಂಬದ ಜೊತೆಗೆ ಮೇಳಕ್ಕೆ ಬಂದಿದ್ದೇನೆ. ಕೇಸರ, ಆಪೂಸ್, ದೇವಗಡ ಮಾವಿನ ಹಣ್ಣುಗಳನ್ನು ಇಷ್ಟ ಪಟ್ಟು ಖರೀದಿಸಿದ್ದೇನೆ. ಮೇಳವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ರೈತರಿಗೆ ಅವಕಾಶ:ನೆರೆಯ ಮಹಾರಾಷ್ಟ್ರದ ರೈತರಿಗೆ ಮೇಳದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ಮಹಾರಾಷ್ಟ್ರದಲ್ಲಿ ನಡೆಯಲಿರುವ ಮಾವು ಮೇಳದಲ್ಲಿ ಕರ್ನಾಟಕದ ರೈತರಿಗೂ ಅವಕಾಶ ಕಲ್ಪಿಸುವುದಾಗಿ ಅಲ್ಲಿನ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದರಿಂದ ಗಡಿ ಜಿಲ್ಲೆ ಜನ ಎರಡು ರಾಜ್ಯದ ಒಳ್ಳೆಯ ಮಾವಿನ ಹಣ್ಣು ಸವಿಯಲು ಸಾಧ್ಯವಾಗಲಿದೆ.
ಮಾವಿನ ದರ: (1ಡಜನ್)
ಕೇಸರ: 500 ರೂ.
ಆಪೂಸ್: 400-500 ರೂ.
ಪೈರಿ: 300 ರೂ.
ರತ್ನಗಿರಿ: 400 ರೂ.
ಬೆಳಗಾವಿಯಲ್ಲಿ ಆಯೋಜಿಸಿರುವ ಮಾವು ಮೇಳಕ್ಕೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾವಿನ ಹಣ್ಣುಗಳ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಒಟ್ಟಿನಲ್ಲಿ ಇನ್ನೂ ಎರಡು ದಿನ ಮಾವು ಮೇಳ ನಡೆಯಲಿದೆ. ವಿಕೆಂಡ್ನಲ್ಲಿ ಕುಂದಾನಗರಿ ಜನರಿಗೆ ಮಾವು ಮೇಳ ಆಯೋಜಿಸಿದ್ದು ಸಹಕಾರಿಯಾಗಿದೆ.
ಇದನ್ನೂಓದಿ:ಮಂಗಳೂರಲ್ಲಿ ಮಾವು ಮೇಳ: ಹಣ್ಣುಗಳ ರಾಜನ ಖರೀದಿಗೆ ಮುಗಿಬಿದ್ದ ಗ್ರಾಹಕರು - Mango Mela