ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ಐಡಿಯಲ್ ಮತ್ತು ಪಬ್ಬಾಸ್ನ ಐಸ್ ಕ್ರೀಂ ರುಚಿ ದೇಶದೆಲ್ಲೆಡೆ ಪರಿಚಿತ. ಮಂಗಳೂರಿನವರಿಗೆ ಚಿರಪರಿಚಿತವಾಗಿರುವ ಮಂಗಳೂರಿನ ಐಡಿಯಲ್ ಮತ್ತು ಪಬ್ಬಾಸ್ ಐಸ್ ಕ್ರೀಂ ನಗರಕ್ಕೆ ಬರುವ ಪ್ರವಾಸಿಗರನ್ನು ರುಚಿಯ ಕಾರಣಕ್ಕಾಗಿ ಸದಾ ಸೆಳೆಯುತ್ತಿದೆ. ಇದೀಗ ಈ ಪ್ರಸಿದ್ದ ಐಸ್ ಕ್ರೀಂನ ಐಟಂವೊಂದು ವಿಶ್ವದ ಟಾಪ್ 100ರಲ್ಲಿ ಸ್ಥಾನ ಪಡೆದುಕೊಂಡಿದೆ.
ವಿಶ್ವದ ಟಾಪ್ 100 ಐಕಾನಿಕ್ ಐಸ್ ಕ್ರೀಂಗಳ ಪಟ್ಟಿ ಬಿಡುಗಡೆಗೊಂಡಿದ್ದು, ಇದರಲ್ಲಿ ಮಂಗಳೂರಿನ ಪಬ್ಬಾಸ್ನ ಗಡ್ಬಡ್ಗೆ ಸ್ಥಾನ ಲಭಿಸಿದೆ. ಇದು ಮಂಗಳೂರಿಗರಿಗಷ್ಟೇ ಅಲ್ಲ, ದೇಶಕ್ಕೂ ಹೆಮ್ಮೆ ವಿಚಾರವಾಗಿದೆ.
TasteAtlas ಎಂಬ ಜನಪ್ರಿಯ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿ "ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್ ಕ್ರೀಮ್‌ಗಳ" ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ 100ರ ಪಟ್ಟಿಯಲ್ಲಿ ಭಾರತದ ಐದು ಐಸ್ ಕ್ರೀಮ್ ಫ್ಲೇವರ್ಗಳು ಸೇರಿವೆ. ಅವುಗಳಲ್ಲಿ ಬೆಂಗಳೂರಿನ ಕಾರ್ನರ್ ಹೌಸ್‌ನಲ್ಲಿ ತಯಾರಿಸಲಾಗುವ ಜನಪ್ರಿಯ ಡೆತ್ ಬೈ ಚಾಕಲೇಟ್, ಮುಂಬಯಿಯ ಕೆ. ರುಸ್ತೋಮ್ ಆ್ಯಂಡ್ ಕೋನಲ್ಲಿ ಸಿಗುವ ಮ್ಯಾಂಗೋ ಐಸ್‌ಕ್ರೀಮ್ ಸ್ಯಾಂಡ್‌ವಿಚ್, ಮುಂಬಯಿಯ ಅಪ್ಸರಾ ಐಸ್‌ಕ್ರೀಮ್‌ನವರು ತಯಾರಿಸುವ ಗ್ವಾವಾ ಐಸ್‌ಕ್ರೀಮ್ (ಪೇರಳೆ ಐಸ್ ಕ್ರೀಮ್), ಮುಂಬಯಿಯ ನ್ಯಾಚುರಲ್ಸ್ ಸಂಸ್ಥೆಯ ಟೆಂಡರ್ ಕೋಕನಟ್ ಐಸ್‌ಕ್ರೀಮ್ ಹಾಗೂ ಮಂಗಳೂರಿನ ಪಬ್ಬಾಸ್‌ನಲ್ಲಿ ಸಿಗುವ ಗಡ್‌ಬಡ್ ಐಸ್‌ಕ್ರೀಮ್‌ಗಳಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಮುಂಬಯಿಯಲ್ಲಿರುವ ನ್ಯಾಚುರಲ್ಸ್ ಸಂಸ್ಥೆ ಮೂಲತಃ ಮಂಗಳೂರು ಮೂಲದವರಿಂದ ಹುಟ್ಟಿ ಬೆಳೆದ ಸಂಸ್ಥೆ. ನಗರದ ಹೊರವಲಯ ಅಡ್ಯಾರ್ ಎಂಬಲ್ಲಿ ನ್ಯಾಚುರಲ್ ಸಂಸ್ಥೆಯ ಫ್ಯಾಕ್ಟರಿ ಇದ್ದು, ಇಲ್ಲಿ ಐಸ್ ಕ್ರೀಂ ತಯಾರಾಗುತ್ತದೆ.
ಅದೇ ರೀತಿ ಮಂಗಳೂರಿನ ಐಡಿಯಲ್ ಐಸ್‌ಕ್ರೀಮ್ ಅವರ ಪಬ್ಬಾಸ್ ಐಸ್‌ಕ್ರೀಮ್ ಮಳಿಗೆಯಲ್ಲಿ ಸಿಗುವ ಗಡ್‌ಬಡ್‌ಗೂ ಇದರಲ್ಲಿ ಸ್ಥಾನ ನೀಡಲಾಗಿದೆ. ಮಂಗಳೂರಿನ ಅಚ್ಚುಮೆಚ್ಚಿನ ಐಸ್‌ಕ್ರೀಂ ಗಡ್‌ಬುಡ್ ಹಣ್ಣುಗಳು, ಬೀಜಗಳು ಮತ್ತು ಸಿರಪ್‌ಗಳ ಮಿಶ್ರಣಕ್ಕೆ ಹೆಸರುವಾಸಿಯಾಗಿವೆ. ಮಂಗಳೂರಿನ ಐಡಿಯಲ್ ಸಂಸ್ಥೆಯಲ್ಲಿ ಇದೀಗ 100 ಕ್ಕೂ ಅಧಿಕ ಐಟಂಗಳು ಲಭ್ಯ ಇದೆ. ಇವುಗಳು ಒಂದಕ್ಕೊಂದು ಮೀರಿಸುವ ಭಿನ್ನ ರುಚಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.
1975 ರಲ್ಲಿ ಗಡ್ ಬಡ್ ಆರಂಭ : ಮಂಗಳೂರಿನ ಐಡಿಯಲ್ ಸಂಸ್ಥೆಯನ್ನು ದಿವಂಗತ ಪ್ರಭಾಕರ ಕಾಮತ್ ಅವರು 1975 ರಲ್ಲಿ ಆರಂಭಿಸಿದ್ದರು. 1975ರಲ್ಲಿ ಐಡಿಯಲ್ ಸಂಸ್ಥೆಯ ವಿವಿಧ ಐಸ್ ಕ್ರೀಂಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. 1975ರಲ್ಲಿ ಸಂಸ್ಥೆ ಆರಂಭವಾದ ಕೆಲ ತಿಂಗಳಲ್ಲಿ ಪ್ರಭಾಕರ ಕಾಮತ್ ಐಡಿಯಲ್ ಸಂಸ್ಥೆಯಲ್ಲಿ ಗಡ್ ಬಡ್ ತಯಾರಿಸಿದರು.
ಕೇಸರಿ, ರಸಬಾರಿ ಜೆಲ್ಲಿ, ವಿವಿಧ ಬಗೆಯ ಬೀಜಗಳು, ಸ್ಟ್ರಾಬೆರಿ ಐಸ್ ಕ್ರೀಂ, ವಿವಿಧ ಬಗೆಯ ಹಣ್ಣಿನ ತುಂಡುಗಳು ಮತ್ತು ವೆನಿಲ್ಲಾ ಐಸ್ ಕ್ರೀಂಗಳನ್ನು ಸೇರಿಸಿ ಈ ಗಡ್ ಬಡ್ ತಯಾರಿಸಲಾಗಿದೆ. ಈ ಗಡ್ ಬಡ್ ಐಸ್ ಕ್ರೀಂ 300 ಎಂಎಲ್ನಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದೆ. 1975 ರಲ್ಲಿ ಆರಂಭವಾದ ಗಡ್ ಬಡ್ನ ಫ್ಲೇವರ್ ಇಂದಿಗೂ ಅದೇ ರೀತಿ ಇದ್ದು, ಕಾಲ ಕಳೆದಂತೆ ಆಧುನಿಕತೆಯ ಟಚ್ ನೀಡಲಾಗಿದೆ.
1975ರಲ್ಲಿ ಐಡಿಯಲ್ ಸಂಸ್ಥೆಯನ್ನು ಆರಂಭಿಸಿದ್ದು, ಇದೇ ಸಂಸ್ಥೆಯ ಪಬ್ಬಾಸ್ ಐಸ್ ಕ್ರೀಂ ಸಂಸ್ಥೆಯನ್ನು 1996ಕ್ಕೆ ಆರಂಭಿಸಲಾಗಿದೆ. ಎರಡು ಕಡೆಯು ಒಂದೇ ರೀತಿಯ ರುಚಿಯ ಐಸ್ ಕ್ರೀಂ ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಬ್ಬಾಸ್ ಸಂಸ್ಥೆ ಮಾಲೀಕ ಮುಕುಂದ ಕಾಮತ್ ಅವರು, ವಿಶ್ವದ ಟಾಪ್ 100ರ ಪಟ್ಟಿಯಲ್ಲಿ ನಮ್ಮ ಸಂಸ್ಥೆಯ ಗಡ್ ಬಡ್ ಹೆಸರಿಸಿರುವುದು ತುಂಬಾ ಖುಷಿಯಾಗಿದೆ. ಇದೊಂದು ಹೆಮ್ಮೆಯ ಕ್ಷಣ. ಇದು ಮಂಗಳೂರಿನ ಜನತೆಗೆ, ಐಡಿಯಲ್ ತಂಡಕ್ಕೆ ಖುಷಿಯ ಕ್ಷಣ. ಈ ಗೌರವವನ್ನು ಮಂಗಳೂರಿನ ಜನತೆಗೆ ಮತ್ತು ನಮ್ಮೆಲ್ಲ ಗ್ರಾಹಕರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.