ಮಂಗಳೂರು: ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ಯುವಕನ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ಕುತ್ತಿಗೆಗೆ ನಾಯಿ ಸಂಕೋಲೆ ಬಿಗಿದ ಪರಿಣಾಮದಿಂದಲೇ ಸಾವು ಸಂಭವಿಸಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಚೇತನ್ (33) ಸಾವನ್ನಪ್ಪಿದ ಯುವಕ. ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚೇತನ್ ನೇಣು ಬಿಗಿದು ಮೃತಪಟ್ಟಿರುವ ಬಗ್ಗೆ ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಮದ್ಯಪಾನ ಮಾಡಿ ಚೇತನ್ ಮನೆಗೆ ಬಂದಿದ್ದ. ಬಳಿಕ ತಾಯಿಯೊಂದಿಗೆ ಜಗಳವಾಡಿ ಮನೆ ಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದಾನೆ. ಇದನ್ನು ಯೂಸುಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ತಿಳಿಸಿದ್ದರು. ಅಲ್ಲಿಗೆ ಬಂದ ಚೇತನ್ ತಾಯಿ ಉಮಾವತಿಯವರು ನಾಯಿಯನ್ನು ಕಟ್ಟುವ ಸಂಕೋಲೆಯನ್ನು ಚೇತನ್ ಸೊಂಟಕ್ಕೆ ಹಾಕಿ ಮನೆಗೆ ಎಳೆದೊಯ್ದಿದ್ದರು.
ಎಳೆಯುವ ಸಮಯದಲ್ಲಿ ಚೇತನ್ ಕುತ್ತಿಗೆಗೆ ಸಂಕೋಲೆ ಸುತ್ತಿಕೊಂಡಿದೆ. ಕುತ್ತಿಗೆಗೆ ಸಂಕೋಲೆ ಬಿಗಿದು ಚೇತನ್ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಘಟನೆಗೆ ಸಂಬಂಧಿಸಿದಂತೆ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಶವಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಂಗಳೂರು: ವಿಮಾನದಲ್ಲಿ ದುರ್ವರ್ತನೆ ತೋರಿದ ಪ್ರಯಾಣಿಕ ಪೊಲೀಸ್ ವಶಕ್ಕೆ - Misbehavior on the plane