ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಯುವಕ ಮತ್ತು ಥೈಲ್ಯಾಂಡ್‌ನ ಯುವತಿಯ ನಡುವೆ ಪ್ರೇಮಾಂಕುರವಾಗಿ ಭಾರತೀಯ ಸಂಪ್ರದಾಯದಂತೆ ಇಂದು ಮದುವೆಯಾದರು.
ಈ ಜೋಡಿಯದ್ದು ಮಾತ್ರ ದೇಶ-ಕಾಲ, ಜಾತಿ-ಮತ ಮೀರಿದ ಪ್ರೀತಿ. ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯುವ ಮೂಲಕ ಒಂದಾಗಿದೆ.
ಮಂಗಳೂರಿನ ಪೃಥ್ವಿರಾಜ್ ಎಸ್.ಅಮೀನ್ ಹಾಗೂ ಥೈಲ್ಯಾಂಡ್‌ನ ಮೊಂತಕನ್ ಸಸೂಕ್ ಜೋಡಿ ವಿವಾಹ ಮಾಡಿಕೊಂಡಿದ್ದಾರೆ. ವಕೀಲೆ ಸುಜಯಾ ಸತೀಶ್ ಹಾಗೂ ಸತೀಶ್ ಕುಮಾರ್ ಅವರ ಪುತ್ರ ಪೃಥ್ವಿರಾಜ್ ಅವರು ಬೆಂಗಳೂರಿನಲ್ಲಿ ತಮ್ಮದೇ ಸಾಫ್ಟ್‌ವೇರ್ ಕಂಪೆನಿ ಹೊಂದಿದ್ದಾರೆ. ಇವರ ಸಂಸ್ಥೆ ಟಾಟಾ, ಪೋರ್ಸ್ ಮುಂತಾದ ಕಂಪೆನಿಗಳಿಗೆ ಸಾಫ್ಟ್‌ವೇರ್ ಸರ್ವೀಸ್ ಒದಗಿಸುತ್ತದೆ.
ಪ್ರಾಜೆಕ್ಟ್ ಮೇಲೆ ಥೈಲ್ಯಾಂಡ್ ದೇಶಕ್ಕೆ ಹೋಗಿದ್ದಾಗ ಪೃಥ್ವಿರಾಜ್‌ಗೆ ಪ್ರೇಮಿಗಳ ದಿನದಂದೇ ಮೊಂತಕನ್ ಸಸೂಕ್ ಪರಿಚಯವಾಗಿದ್ದಾರೆ. ಅವರನ್ನು ನೋಡಿದ್ದೇ ಪೃಥ್ವಿರಾಜ್‌ಗೆ ಪ್ರೀತಿ ಚಿಗುರೊಡೆದಿದೆ. ಮೊಂತಕನ್ ಕೂಡಾ ಇವರ ಪ್ರೀತಿಯನ್ನು ಒಪ್ಪಿದ್ದಾರೆ. ಪ್ರೀತಿ ಗಟ್ಟಿಗೊಳ್ಳುತ್ತಿದ್ದಂತೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ತಾನು ಥೈಲ್ಯಾಂಡ್ ಯುವತಿಯನ್ನು ಮದುವೆಯಾಗುತ್ತೇನೆ ಎಂದು ಪೃಥ್ವಿರಾಜ್ ಹೆತ್ತವರಿಗೆ ತಿಳಿಸಿದಾಗ ಅವರು ಮೊದಲು ಗೊಂದಲಕ್ಕೊಳಗಾಗಿದ್ದರು. ಆಮೇಲೆ ಪ್ರೀತಿಗೆ ಅಸ್ತು ಅಂದಿದ್ದಾರೆ. ಇತ್ತ ಮೊಂತಕನ್ ಮನೆಯಲ್ಲೂ ವಿವಾಹಕ್ಕೆ ಸಮ್ಮತಿ ದೊರೆತಿದ್ದು, ಇಬ್ಬರಿಗೂ ಥೈಲ್ಯಾಂಡ್‌ನಲ್ಲಿ ಅಲ್ಲಿನ ಪದ್ಧತಿಯಂತೆ ಜುಲೈನಲ್ಲಿ ವಿವಾಹ ನೆರವೇರಿದೆ.
ಈ ವಿವಾಹಕ್ಕೆ ಪೃಥ್ವಿರಾಜ್ ಹೆತ್ತವರು ಸಾಕ್ಷಿಯಾಗಿದ್ದರು. ಇದೀಗ ಭಾರತೀಯ ಪದ್ಧತಿ ಪ್ರಕಾರ ಗುರುವಾರ ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ ನಡೆದಿದೆ. ಡಿ.7ರಂದು ಅಡ್ಯಾರ್ ಗಾರ್ಡನ್‌ನಲ್ಲಿ ಅದ್ದೂರಿ ರಿಸೆಪ್ಷನ್ ನಡೆಯಲಿದೆ. ಇನ್ನು ಮುಂದೆ ಮೊಂತಕಾನ್ ಥೈಲ್ಯಾಂಡ್ ತೊರೆದು ಭಾರತೀಯ ಸೊಸೆಯಾಗಲಿದ್ದಾರೆ.
ಪೃಥ್ವಿರಾಜ್ ಹೇಳಿದ್ದೇನು?: "ನಾನು ಥೈಲ್ಯಾಂಡ್ಗೆ ಹೋಗಿದ್ದೆ. ವೆಲೈಂಟೈನ್ಸ್ ಡೇ ದಿನ ಇವರು ನನಗೆ ಪರಿಚಯವಾದರು. ಆ ಬಳಿಕ ನಾವು ಮದುವೆಯಾಗಲು ತೀರ್ಮಾನಿಸಿದೆವು. ಹೆತ್ತವರಿಗೆ ಕೂಡ ಖುಷಿಯಾಗಿದೆ. ಈ ವಿಚಾರ ಮೊದಲಿಗೆ ಹೇಳಿದಾಗ ಶಾಕ್ ಆದ್ರು. ಆದರೆ ಕೆಲ ಸಮಯದ ಬಳಿಕ ಒಪ್ಪಿಕೊಂಡರು. ನನಗೆ ಥೈಲ್ಯಾಂಡ್ ಸ್ವಲ್ಪ ಕೀ ವರ್ಡ್ಸ್ ಬರುತ್ತದೆ. ಯುವತಿಗೂ ತುಳುವಿನ ಸ್ವಲ್ಪ ಕೀ ವರ್ಡ್ಸ್ ಬರುತ್ತದೆ" ಎಂದರು.
ಇದನ್ನೂ ಓದಿ: ಮದುವೆಗೆ ವಧು ಸಿಗುತ್ತಿಲ್ಲವೆಂದು ಮಾದಪ್ಪನ ಬೆಟ್ಟಕ್ಕೆ ಹೊರಟ ಯುವಕರ ದಂಡು