ಮಂಗಳೂರು: ಸಂಚಾರಲ್ಲಿದ್ದ ರೈಲು ಹತ್ತಲು ಯತ್ನಿಸಿ ಎಡವಿ ಬಿದ್ದ ಯುವಕನನ್ನು ರೈಲ್ವೇ ಪೊಲೀಸರೊಬ್ಬರು ರಕ್ಷಿಸಿರುವ ಘಟನೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದೃಶ್ಯ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರೈಲು ಚಲಿಸಲು ಆರಂಭಿಸಿದ ಬಳಿಕ ಅದರ ವೇಗವೂ ಹೆಚ್ಚಿತ್ತು. ಆಗ ಓಡೋಡಿಕೊಂಡು ಬಂದ ಹಾಸನ ಮೂಲದ ಶಶಾಂಕ್ ಎಂಬ ಯುವಕ ರೈಲು ಹತ್ತಲು ಯತ್ನಿಸಿದ್ದಾನೆ. ಆಗ ರೈಲಿನ ಬಾಗಿಲಿನ ಸರಳು ಆತನ ಹಿಡಿತಕ್ಕೆ ಸಿಗದೆ ಎಡವಿ ಬಿದ್ದಿದ್ದಾನೆ. ಈ ವೇಳೆ ಆತ ರೈಲು ಹಾಗೂ ಪ್ಲ್ಯಾಟ್ಫಾರ್ಮ್ನಲ್ಲಿ ಎಡವಿ ಬಿದ್ದು ಅಪಾಯಕ್ಕೆ ಸಿಲುಕಿದ್ದನು. ಆಗ ಅಲ್ಲಿಯೇ ಇದ್ದ ರೈಲ್ವೇ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಾಘವನ್ ಇದನ್ನು ಗಮನಿಸಿದ್ದಾರೆ. ತಕ್ಷಣ ಧಾವಿಸಿದ ಅವರು ಯುವಕನನ್ನು ಎಳೆದು ರಕ್ಷಿಸಿದ್ದಾರೆ. ಕ್ಷಣ ಮಾತ್ರದಲ್ಲಿ ಈ ಘಟನೆ ನಡೆದುಹೋಗಿದೆ. ಯುವಕ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾನೆ. ಈ ದೃಶ್ಯ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಶಾಂಕ್ ಅಹ್ಮದಾಬಾದ್ಗೆ ಹೋಗಲು ಹಾಸನದಿಂದ ಬಸ್‌ನಲ್ಲಿ ಬಂದಿದ್ದ. ಬಸ್ ಬರುವುದು ಕೊಂಚ ತಡವಾಗಿತ್ತು. ಹೀಗಾಗಿ ತಡವಾದ ಕಾರಣ ರೈಲ್ವೆ ನಿಲ್ದಾಣಕ್ಕೆ ಬರುವಾಗ ರೈಲು ಹೊರಟಿತ್ತು. ಹಾಗೆ ತರಾತುರಿಯಲ್ಲಿ ಓಡಿ ಏರುವಾಗ ಆತ ಆಯತಪ್ಪಿ ಬಿದ್ದಿದ್ದಾನೆ. ಜಾರಿ ಬೀಳುವಾಗ ಒಂದು ಕಾಲು ಕೆಳಗೆ ಹೋಗಿದ್ದು, ಬಲಗಾಲು ಪ್ಲಾಟ್‌ಫಾರಂ ಮೇಲೆಯೇ ಇತ್ತು. ರೈಲಿಗೆ ಸಿಲುಕಿಕೊಳ್ಳದ ಕಾರಣ ಆತ ಬಚಾವ್ ಆಗಿದ್ದಾನೆ. ಬ್ಯಾಗ್ ಭಾರವಿದ್ದ ಕಾರಣ ಆತನಿಗೆ ಮೇಲೇಳಲು ಕಷ್ಟವಾಗುತ್ತಿತ್ತು. ಆಗ ರಾಘವನ್ ಸಹಾಯ ಮಾಡಿದ್ದಾರೆ.