ಮಂಗಳೂರು: ಇಮ್ಯುನೊ ಡಿಫಿಷಿಯನ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಐದು ತಿಂಗಳಿನ ಮಗುವಿನ ಶಸ್ತ್ರ ಚಿಕಿತ್ಸೆಗೆ 50 ಲಕ್ಷ ರೂ ಅಗತ್ಯವಿದೆ ಎಂದು ಎರಡು ದಿನಗಳ ಹಿಂದೆ ಹೆತ್ತವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ಗೆ ದೇಶ - ವಿದೇಶಗಳಿಂದ ದಾನಿಗಳು ಸ್ಪಂದಿಸಿದ್ದಾರೆ. ಮಗುವಿನ ಚಿಕಿತ್ಸೆಗೆ 48 ಗಂಟೆಗಳ ಅವಧಿಯಲ್ಲಿ 60.62 ಲಕ್ಷ ರೂ. ಜಮೆಯಾಗಿದೆ.
ಈ ಮಗುವಿನ ಚಿಕಿತ್ಸೆಗೆ ಅಗತ್ಯವಿದ್ದ ಹಣ ಸಂಗ್ರಹ ಆಗಿರುವುದರಿಂದ ಈ ಖಾತೆಗೆ ಇನ್ನು ಹಣ ನೀಡುವುದು ಬೇಡ ಎಂದು ಮಗುವಿನ ತಂದೆ ತಾಯಿಗಳಾದ ಮಂಗಳೂರಿನ ಕೊಣಾಜೆ ನಿವಾಸಿ ಸಂತೋಷ್ ಮೊಂತೇರೊ ಮತ್ತು ಪ್ರಿಯಾ ಮನವಿ ಮಾಡಿದ್ದಾರೆ.
ಇಮ್ಯುನೊ ಡಿಫಿಷಿಯನ್ಸಿ ಕಾಯಿಲೆ: ಮಗುವಿನ ಚಿಕಿತ್ಸೆಗೆ ಸ್ಪಂದಿಸುವಂತೆ ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹಾಕಿದ್ದರು. ಇಮ್ಯುನೊ ಡಿಫಿಷಿಯನ್ಸಿ ಎಂಬ ಮಾರಕ ಕಾಯಿಲೆಯಿಂದ ಮಗು ಬಳಲುತ್ತಿದ್ದು, ಚಿಕಿತ್ಸೆಗೆ ಸಂಬಂಧಿಸಿದಂತೆ ಹೆತ್ತವರು ಸಹಕರಿಸುವಂತೆ ವಿಡಿಯೋ ಮಾಹಿತಿಯನ್ನು ಬಿತ್ತರಿಸಿದ್ದರು.
ದೇಶ ವಿದೇಶದಿಂದ ಉತ್ತಮ ಸ್ಪಂದನೆ: ಮಗುವಿನ ತಾಯಿ ಪ್ರಿಯಾ ಅವರ ಮಗುವಿನ ಸ್ಥಿತಿ ಕುರಿತು ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ವಿಡಿಯೋ - ರೆಕಾರ್ಡ್ ಮಾಡಿ ವಿವಿಧ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು. 48 ಗಂಟೆಗಳಲ್ಲಿ ದೇಶ ವಿದೇಶದಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಒಂದು ರೂ.ಗಳಿಂದ ಒಂದು ಲಕ್ಷ ರೂಪಾಯಿ ವರೆಗೆ ದಾನಿಗಳು ಸಹಾಯ ಮಾಡಿದ್ದಾರೆ. ದಾನಿಗಳಿಂದ ಮಗುವಿನ ತಾಯಿ ಮತ್ತು ತಂದೆಯ ಬ್ಯಾಂಕ್ ಖಾತೆಗೆ ಹಣ ಹರಿದು ಬಂದಿದೆ. ಒಟ್ಟಾರೆ 60. 62 ಲಕ್ಷ ರೂ ಸಂಗ್ರಹವಾಗಿದೆ. ಎಲ್ಲ ಜಾತಿ ಧರ್ಮದ ಸಂಘ - ಸಂಸ್ಥೆಗಳು, ದಾನಿಗಳು ಸಹಾಯ ಹಸ್ತ ನೀಡಿದ್ದಾರೆ ಎಂದು ದಂಪತಿ ಮಾಹಿತಿ ನೀಡಿದ್ದು, ದಾನಿಗಳಿಗೆ ಕೃತಜ್ಞತೆ ಕೂಡಾ ಸಲ್ಲಿಸಿದ್ದಾರೆ.
ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ಒಂದು ಹಂತದ ಶಸ್ತ್ರ ಚಿಕಿತ್ಸೆ ನಡೆದಿದೆ. ಮಗು ಆರೋಗ್ಯವಾಗಿದೆ ಎಂದು ಮಗುವಿನ ತಂದೆ ತಾಯಿ ಇದೇ ವೇಳೆ ತಿಳಿಸಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.