ಮಂಗಳೂರು(ದಕ್ಷಿಣ ಕನ್ನಡ): ನಾಟೆಕಲ್ನ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವಿಭಾಗದ ಆಂಕಲಾಜಿ ವಿಭಾಗದ ವೈದ್ಯರ ತಂಡವು ಮಹಿಳೆಯೊಬ್ಬರಿಗೆ ನಾಲ್ಕನೇ ಹಂತದಲ್ಲಿದ್ದ ಕ್ಯಾನ್ಸರ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿದ್ದು, ಮಹಿಳೆಯಿಂದ 8 ಕೆ.ಜಿ ತೂಕದ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಈಗ ಮಹಿಳೆ ಸಂಪೂರ್ಣ ಆರೋಗ್ಯವಾಗಿದ್ದಾರೆ. ಇದರಿಂದ ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ಪೀಡಿತ ರೋಗಿಗಳನ್ನು ಬದುಕಿಸಬಹುದು ಎಂಬುದನ್ನು ಕಣಚೂರು ಆಸ್ಪತ್ರೆಯ ವೈದ್ಯರು ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಸರ್ಜಿಕಲ್ ಆಂಕಲಾಜಿ ಸ್ಪೆಷಲಿಸ್ಟ್ ಡಾ ರವಿವರ್ಮ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 40 ವಯಸ್ಸಿನ ಮಹಿಳೆಯೊಬ್ಬರಿಗೆ ಒಂದೂವರೆ ವರ್ಷಗಳ ಕಾಲ ಬಲ ಪ್ರಷ್ಠದಲ್ಲಿ ಊತದ ತೊಂದರೆಗೊಳಗಾಗಿದ್ದರು. ಈ ಕುರಿತು ಪರೀಕ್ಷೆಗೆ ಒಳಪಡಿಸಿದಾಗ, ಆಕೆಗೆ ಕ್ಯಾನ್ಸರ್ ಸಾರ್ಕೋಮಾ ಇರುವುದು ಪತ್ತೆಯಾಯಿತು, ಅದು ರೋಗಿಯ ಶ್ವಾಸಕೋಶಕ್ಕೆ ಹರಡಿ ಅದು 4ಕ್ಕೆ ಹಂತಕ್ಕೆ ತಲುಪಿತ್ತು.
ರೋಗಿಯು ವಿವಿಧ ಕಡೆ ತೋರಿಸಿದಾಗ ಅಂಕೊಲಾಜಿಸ್ಟ್‌ಗಳು ಉಪಶಾಮಕ ಕೀಮೋಥೆರಪಿಯನ್ನು ಏಕೈಕ ಆಯ್ಕೆಯಾಗಿ ಸಲಹೆ ನೀಡಿದ್ದರು. ನಾಲ್ಕು ಹಂತಗಳ ಕಿಮೋಥೆರಪಿಯನ್ನು ಸ್ವೀಕರಿಸಿದರು, ಗೆಡ್ಡೆ ಬೆಳೆಯುತ್ತ ಹೋಗಿತ್ತು. ನಂತರ ರೋಗಿಯು ಚಿಕಿತ್ಸೆಗಾಗಿ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಂಕೊಲಾಜಿ ವಿಭಾಗಕ್ಕೆ ಭೇಟಿ ಮಾಡಿ ಶಸ್ತ್ರಚಿಕಿತ್ಸೆಗೆ ಮನವಿ ಮಾಡಿದರು.
ಕೂಡಲೇ ಶಸ್ತ್ರಚಿಕಿತ್ಸೆ ಸಿದ್ಧತೆ ಮಾಡಿಕೊಂಡ ಸರ್ಜಿಕಲ್ ಆಂಕಲಾಜಿ ಸ್ಪೆಷಲಿಸ್ಟ್ ಡಾ.ರವಿವರ್ಮ ನೇತೃತ್ವದ ವೈದ್ಯರ ತಂಡ, ಕ್ಯಾನ್ಸ್ರ್ ಪೀಡಿತ ಮಹಿಳೆಗೆ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಮೂಲಕ 8 ಕೆ.ಜಿ ತೂಕದ ಗೆಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಯಿತು. 40 ವರ್ಷದ ಮಹಿಳೆ 10 ದಿನಗಳಲ್ಲೇ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಹೊರಬಂದು ಮನೆಗೆ ತಾನು ಆರೋಗ್ಯರಾಗಿ ನಡೆದುಕೊಂಡು ಹೋಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಗರ್ಭಿಣಿಯರಿಗೆ ಉಚಿತ ಸೇವೆ: ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ ಮತನಾಡಿ, ಕಣಚೂರು ಆಸ್ಪತ್ರೆಯಿಂದ ಸುತ್ತಲಿನ ಮಂಚಿ, ಕೊಣಾಜೆ, ಮಂಜನಾಡಿ, ಕಿನ್ಯಾ, ತಲಪಾಡಿ, ಕೋಟೆಕಾರು ಪಪಂ, ಉಳ್ಳಾಲ ನಗರಸಭೆ ವ್ಯಾಪ್ತಿ ಗರ್ಭಿಣಿಯರಿಗೆ ಉಚಿತ ಪರೀಕ್ಷೆಗಳನ್ನು ಆಸ್ಪತ್ರೆ ಕೈಗೊಂಡಿದೆ. ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಆರ್ಬಿಎಸ್, ಸಿರೋಲಾಜಿ, ಮೂತ್ರ ಪರೀಕ್ಷೆ, ಗ್ಲುಕೋಸ್ ಚಾಲೆಂಜ್ ಪರೀಕ್ಷೆ ಮತ್ತು ವ್ಯಾಕ್ಸಿನೇಷನ್ ಅನ್ನು ಉಚಿತವಾಗಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವೈದ್ಯಕೀಯ ಕಾಲೇಜಿನ ಡೀನ್ ಡಾ. ಯು.ಪಿ ರತ್ನಾಕರ್ ಮಾತನಾಡಿ, ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ನಡೆಸಿದ ಪರೀಕ್ಷೆಗಳಲ್ಲಿ ಚಿನ್ನದ ಪದಕ ಸಹಿತ ಹಲವು ಪುರಸ್ಕಾರಗಳನ್ನು ಗಳಿಸಿದ್ದಾರೆ.
ಕಣಚೂರು ವೈದ್ಯಕೀಯ ವಿಜ್ಞಾನದ ಡಾ. ಮಧುರಾ ಕೆ.ಐ ರಾಜ್ಯಕ್ಕೆ ಮೊದಲನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇನ್ನುಳಿದ 18 ವಿದ್ಯಾರ್ಥಿಗಳು ವಿವಿಧ ವಿವಿಧ ವಿಷಯಗಳಲ್ಲಿ ರ್ಯಾಂಕ್ ಪಡೆದು ಉನ್ನತ ಸಾಧನೆ ತೋರಿದ್ದಾರೆ. ಕಣಚೂರು ನರ್ಸಿಂಗ್ ವಿಜ್ಞಾನಗಳ ಕಾಲೇಜಿನ ಆಷಿತಾ ಜೋಸೆಫ್ ರಾಜ್ಯಕ್ಕೆ ಐದನೇ ರ್ಯಾಂಕ್ ಮತ್ತು 13 ವಿದ್ಯಾರ್ಥಿಗಳು ವಿಷಯವಾರು ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಕಣಚೂರು ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿ ಟೆನ್ಝಿನ್ ಯಾಂಗ್ಝಾಮ್ 7ನೇ ರ್ಯಾಂಕ್ ಮತ್ತು ಕರ್ಪೊ ತಮಾಂಗ್ 9ನೇ ರ್ಯಾಂಕ್ , ಎಂಪಿಟಿಯಲ್ಲಿ ಶಮೀಮಾ 2ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ವಿಷಯವಾರು 8 ಮಂದಿ ವಿದ್ಯಾರ್ಥಿಗಳು ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಮಂಡಳಿ ಸದಸ್ಯ ಡಾ. ಇಸ್ಮಾಯಿಲ್, ಕೌನ್ಸಿಲ್ ಸದಸ್ಯ ಡಾ.ವೆಂಕಟರಾಯ ಪ್ರಭು, ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್ ಉಪಸ್ಥಿತರಿದ್ದರು.
ಇದನ್ನೂಓದಿ:ಮಂಗಳೂರು: ಮಾ.8ರಿಂದ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲ್ ಸರ್ಫಿಂಗ್ ಸ್ಪರ್ಧೆ