ಮಂಡ್ಯ: ಸಾವಿನ ಮನೆ,ಮದುವೆ ಸಮಾರಂಭಗಳನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ, ಹಣ ಕಳ್ಳತನ ಮಾಡಿ ಪರಾರಿ ಆಗುತ್ತಿದ್ದ ಹೈನಾತಿ ಕಳ್ಳ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ವಿವೇಕ್ (23) ಬಂಧಿತ ಖತರ್ನಾಕ್ ಕಳ್ಳ.
ಈತ ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದನು. ಅತ್ತ ಎಲ್ಲರೂ ಅಂತ್ಯ ಸಂಸ್ಕಾರಕ್ಕೆ ಹೋಗುತ್ತಿದ್ದಂತೆ, ಇತ್ತ ಸಾವಿನ ಮನೆಯಲ್ಲಿ ತನ್ನ ಕೈಚಳಕ ತೋರುತ್ತಿದ್ದನು. ಎಲ್ಲರೂ ಸಾವಿನ ನೋವಿನಲ್ಲಿ ಇದ್ದರೆ, ಆತ ಮಾತ್ರ ಚಿನ್ನಾಭರಣ ಕದ್ದು ಸಂಭ್ರಮ ಪಡುತ್ತಿದ್ದನು. ಸಂಬಂಧಿಕರ ಸಾವಿನ ಮನೆಯಲ್ಲಿಯೂ ಕಳ್ಳತನ ಮಾಡಿ ಪೊಲೀಸರ ನಿದ್ರೆಗೆಡಿಸಿದ್ದನು. ಸಾವಿನ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನಲ್ಲಿ ಮೊಬೈಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಕಳ್ಳ ವಿವೇಕ್, ಮೂರು ವರ್ಷದಿಂದ ಕಳ್ಳತನ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದನು. ತನ್ನ ಸಂಬಂಧಿಕರು ಯಾರಾದರೂ ಸಾವನ್ನಪ್ಪಿರುವ ವಿಚಾರ ತಿಳಿದು, ಆ ಮನೆಗಳಿಗೆ ತೆರಳುತ್ತಿದ್ದನು. ಅಂತ್ಯ ಸಂಸ್ಕಾರಕ್ಕೆ ಎಂದು ಎಲ್ಲರೂ ಮನೆಯಿಂದ ತೆರಳಿದ ನಂತರ ಈತ ಮಾತ್ರ ಅಲ್ಲಿಯೇ ಇದ್ದು ಎಲ್ಲರೂ ಹೋದ ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದನು. ಕೇವಲ ಸಾವಿನ ಮನೆ ಮಾತ್ರವಲ್ಲ ಕಲ್ಯಾಣ ಮಂಟಪಗಳಲ್ಲೂ ಕೂಡ ಕಳ್ಳತನ ಮಾಡುತ್ತಿದ್ದನು. ಇನ್ನು ಸಾವಿನ ಮನೆಯಲ್ಲಿ ಕದ್ದ ಚಿನ್ನಾಭರಣಗಳನ್ನು ಅಡವಿಟ್ಟು ಮೋಜು ಮಸ್ತಿ ಮಾಡುತ್ತಿದ್ದನು.
ಮಂಡ್ಯ ಎಸ್ಪಿ ಏನು ಹೇಳ್ತಾರೆ? : ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾಧ್ಯಮದವರೊಂದಿಗೆ ಮಾತನಾಡಿ, ಆರು ತಿಂಗಳಿಂದ ಪಾಂಡವಪುರ ತಾಲೂಕಿನ ಹಿರೇಮರಳ್ಳಿ, ಚಿನಕುರಳಿ, ಆರತಿ ಉಕ್ಕಡ, ಹರವು, ಡಾಮಡಹಳ್ಳಿ ಗ್ರಾಮ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಸಾವಿನ ಮನೆಗಳಲ್ಲಿ ಕಳ್ಳತನ ಆಗುತ್ತಿದ್ದವು. ಇದು ಪೊಲೀಸರಿಗೆ ಕೂಡ ದೊಡ್ಡ ತಲೆ ನೋವಾಗಿತ್ತು.
ಈ ಕಳ್ಳತನ ಪ್ರಕರಣ ಭೇದಿಸಬೇಕು ಎಂದು ಪೊಲೀಸರು ತಂಡ ರಚಿಸಿ ಕಳ್ಳನ ಬಂಧನಕ್ಕೆ ಜಾಲ ಬೀಸಿದೆವು. ಅದೇ ರೀತಿ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಶಿವಕುಮಾರ್ ಎಂಬುವರ ಮನೆಯಲ್ಲಿ 135 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿ ವಿವೇಕ್ನನ್ನು ಬಂಧಿಸಲಾಯಿತು. ಈ ವೇಳೆ, ಹತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ ಒಟ್ಟು 36 ಲಕ್ಷ ಮೌಲ್ಯದ 521 ಗ್ರಾಂ ಚಿನ್ನಾಭರಣ, ಕ್ಯಾಮೆರಾ ಮತ್ತು ಲೆನ್ಸ್, ಒಂದು ಬೈಕ್, ಒಂದು ಕಾರು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಖೋಟಾ ನೋಟು ಜಾಲ ಭೇದಿಸಿದ ದಾವಣಗೆರೆ ಪೊಲೀಸರು: ಆರು ಜನರ ಬಂಧನ - 7.70 ಲಕ್ಷ ಮೊತ್ತದ ನಕಲಿ ನೋಟು ವಶಕ್ಕೆ