ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ದೊಡ್ಡರಸಿನಕೆರೆ ಗ್ರಾಮದಲ್ಲಿ ಮತದಾನ ಮಾಡಿದರು. ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 164ರಲ್ಲಿ ಸುಮಲತಾ ತಮ್ಮ ಹಕ್ಕು ಚಲಾಯಿಸಿದರು.
ಮತದಾನ ಕರ್ತವ್ಯವನ್ನು ನಿರ್ವಹಿಸಿದ್ದೀನಿ-ಸುಮಲತಾ: ವೋಟ್ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಮತದಾನ ಮಾಡೋದು ಕರ್ತವ್ಯ, ಅದನ್ನು ನಾನು ನಿರ್ವಹಿಸಿದ್ದೀನಿ ಎಂದರು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿದ್ದಾರೆ. ಆದರೆ ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಸ್ವತಂತ್ರ ಸಂಸದೆಯಾಗಿ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೀನಿ. ಮೋದಿಯವರು ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ತ್ಯಾಗ ಮಾಡಿದ್ದೇನೆ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನು ಎನ್‌ಡಿಎಗೆ ಕೊಟ್ಟಿದ್ದೇವೆ ಎಂದು ಹೇಳಿದರು.
ಮುಂದುವರೆದು, 'ಮೈತ್ರಿ ಪಕ್ಷ ಪರ ನಮ್ಮ ಬೆಂಬಲಿಗರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಆದರೆ ಜೆಡಿಎಸ್ ನಾಯಕರು ಯಾವುದೇ ಸಭೆ, ಪ್ರಚಾರಕ್ಕೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಬರದೆ ಇದ್ದರೆ ತಪ್ಪಾಗುತ್ತೆ. ಆದರೆ ಅವರು ನನ್ನ ಕರೆದೇ ಇಲ್ಲವೆಂದು ಅಸಮಧಾನ ಹೊರಹಾಕಿದರು.
ಕೆ.ಹೊನ್ನಲಗೆರೆ ಮತಗಟ್ಟೆಗೆ ಹೆಚ್ಡಿ ಕುಮಾರಸ್ವಾಮಿ ಭೇಟಿ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆ ಮತಗಟ್ಟೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಚಿವ ಎನ್. ಚಲುವರಾಯಸ್ವಾಮಿ ಮತದಾನ: ಪತ್ನಿ ಧನಲಕ್ಷ್ಮಿ ಹಾಗೂ ಪುತ್ರ ಸಚ್ಚಿನ್ ಅವರೊಂದಿಗೆ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಮತಗಟ್ಟೆಗೆ ಆಗಮಿಸಿ ಸಚಿವ ಎನ್. ಚಲುವರಾಯಸ್ವಾಮಿ ಮತದಾನ ಮಾಡಿದರು.