ದಾವಣಗೆರೆ: ಇತ್ತೀಚೆಗೆ ಬಾರ್‌ವೊಂದರಲ್ಲಿ ಮದ್ಯ ಸೇವಿಸುತ್ತಾ ಕುಳಿತಿದ್ದ ವ್ಯಕ್ತಿಯನ್ನು ಮನಸೋಇಚ್ಛೆ ಚೂರಿಯಿಂದ ಚುಚ್ಚಿ ಕೊಲೆಗೈದಿದ್ದ ಘಟನೆಯ ಹಿಂದಿನ ಕಾರಣ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಕೊಲೆಯಾದ ವ್ಯಕ್ತಿ ಹನುಮಂತ ಅಲಿಯಾಸ್ ಕುಮಾರ್ ತನ್ನ ಸಹೋದರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೇ ಕೆಲವು ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿ ಗೌತಮ್ ಪವಾರ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಉಮಾಪ್ರಶಾಂತ್ ಪ್ರತಿಕ್ರಿಯೆ: ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸ್ಪಿ ಉಮಾ ಪ್ರಶಾಂತ್, "ಸೆ.21ರಂದು ಕೆಟಿಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಗೌತಮ್ ಪವಾರ್ (36) ಎಂಬಾತ ಹನುಮಂತ ಅಲಿಯಾಸ್ ಕುಮಾರ್ (30)ನನ್ನು ಚಾಕು ಇರಿದು ಕೊಲೆ ಮಾಡಿದ್ದ. ಗಾಯಾಳು ಆಸ್ಪತ್ರೆಗೆ ಸಾಗಿಸುವಾಗಲೇ ಕೊನೆಯುಸಿರೆಳೆದಿದ್ದ. ಕೊಲೆ ಹಿಂದಿನ ಕಾರಣ ನಿಗೂಢವಾಗಿತ್ತು. ಇದೀಗ ಪ್ರಾಥಮಿಕ ತನಿಖೆಯಲ್ಲಿ ಕಾರಣ ಬಯಲಾಗಿದೆ. ಮುಂದೆ ಹೆಚ್ಚಿನ ತನಿಖೆ ನಡೆಸಿ, ಸಂಪೂರ್ಣ ವರದಿ ಸಲ್ಲಿಸುತ್ತೇವೆ" ಎಂದು ತಿಳಿಸಿದರು.
"ಹನುಮಂತ ಆರೋಪಿ ಗೌತಮ್ ಪವಾರ್ ಸಹೋದರಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಅಲ್ಲದೇ ಕೆಲವು ಫೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದಾಗಿ ಆತನನ್ನು ಕೊಲೆ ಮಾಡಿರುವುದಾಗಿ ಗೌತಮ್ ಒಪ್ಪಿಕೊಂಡಿದ್ದಾನೆ. ಎರಡು ಬಾರಿ ಗೌತಮ್, ಹನುಮಂತನಿಗೆ ವಾರ್ನ್ ಕೂಡ ಮಾಡಿದ್ದ. ಇದನ್ನು ಕೇಳದ ಬೆನ್ನಲ್ಲೇ ಕೊಲೆ ಮಾಡಿದ್ದಾನೆ. ಗೌತಮ್ ಮನೆಯಲ್ಲೇ ಹನುಮಂತ ಎರಡು ವರ್ಷಗಳ ಕಾಲ ವಾಸ ಇದ್ದಾಗ, ಅನೈತಿಕ ಸಂಬಂಧ ಹೊಂದಿದ್ದ. ಇಬ್ಬರ ನಡುವೆ ಜಗಳವಾಗಿ, ಕೊಲೆಯಲ್ಲಿ ಅಂತ್ಯವಾಗಿದೆ" ಎಂದು ಹೇಳಿದರು.