ಚಿಕ್ಕಮಗಳೂರು : ಮದುವೆ, ಸಂಬಂಧ, ಸಂಬಂಧಿಕರು ಏನೂ ಬೇಡ, ಪ್ರಾಣಿಗಳೇ ಸಾಕು ಎಂದು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖದಲ್ಲೊಬ್ಬ ಪ್ರಾಣಿಪ್ರೇಮಿ ಸಾಕು ಹಾಗೂ ಕಾಡು ಪ್ರಾಣಿಗಳ ಜೊತೆ ಜೀವನ ನಡೆಸುತ್ತಿದ್ದಾರೆ.
ರೂಬೆಸ್ ಎಂಬುವವರು ಕುದುರೆಮುಖ ಅದಿರು ಮತ್ತು ಗಣಿ ಇಲಾಖೆ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಅಲ್ಲಿ ಕೆಲಸ ಮಾಡುತ್ತಿದ್ದರು. 2005ರಲ್ಲಿ ಅದಿರು ಕಂಪನಿ ಮುಚ್ಚಿದ ಬಳಿಕ ಬೇರೆಲ್ಲೂ ಹೋಗದೇ ಕುದುರೆಮುಖದಲ್ಲಿಯೇ ಮೆಕ್ಯಾನಿಕ್ ಕೆಲಸ ಮಾಡಿಕೊಂಡು ಪ್ರಾಣಿಗಳ ಜೊತೆ ಬದುಕುತ್ತಿದ್ದಾರೆ.
2005ರಲ್ಲಿ ಕುದುರೆಮುಖ ಕಂಪನಿಗೆ ಬೀಗ ಬಿದ್ದ ಮೇಲೆ ಬದುಕಿನ ದಾರಿ ಕಾಣದೇ ಕುದುರೆಮುಖ ಅರಣ್ಯ ತಪ್ಪಲಿನಲ್ಲಿ ಬೈಕ್ ಮೆಕ್ಯಾನಿಕ್ ಕೆಲಸ ಮಾಡ್ಕೊಂಡಿದ್ದಾರೆ. ಮದುವೆಯೂ ಆಗಿಲ್ಲ. ದುಡಿದ ಹಣವನ್ನೆಲ್ಲ ಸಾಕು, ಕಾಡು ಪ್ರಾಣಿಗಳಿಗೆ ಮೀಸಲಿಟ್ಟಿದ್ದಾರೆ. ಇರೋಕೆ ಸೂರಿಲ್ಲ. ಕರೆಂಟೂ ಇಲ್ಲ. 20 ವರ್ಷಗಳಿಂದ ತಗಡಿನ ಶೆಡ್‍ನಲ್ಲಿಯೇ ವಾಸವಿದ್ದಾರೆ. ಅದು ಪ್ರಾಣಿಗಳಿಗಾಗಿ. ಇವರ ಮನೆಯಲ್ಲಿ ಒಂದನ್ನ ಕಂಡ್ರೆ ಒಂದು ಆಗದಂತಹ ನಾಯಿ, ಬೆಕ್ಕು, ಹಂದಿ ಕ್ಲೋಸ್ ಫ್ರೆಂಡ್ಸ್. ಎಲ್ಲವೂ ಒಂದೇ ತಟ್ಟೆಯಲ್ಲಿ ಅನ್ನ ತಿನ್ನುತ್ತವೆ.
’ಇವರು ನಿಜಕ್ಕೂ ಕಾಡಿನ ರಾಜನೇ‘: ಯಾರೂ ಕೂಡ ಗುರ್ ಅನ್ನಲ್ಲ, ತಿವಿಯಲ್ಲ, ಕಚ್ಚಲ್ಲ. ಸಾಕು ಪ್ರಾಣಿಗಳಷ್ಟೇ ಅಲ್ಲ, ಕಾಡುಪ್ರಾಣಿಗಳು ಇವರ ಅತಿಥಿಗಳೇ. ಆಗಾಗ ಬಂದು ಇವರ ಸತ್ಕಾರ ಅನುಭವಿಸಿ ಹೋಗುತ್ತವೆ. ತನ್ನ ಇಡೀ ಬದುಕನ್ನೇ ಪ್ರಾಣಿಗಳಿಗಾಗಿ ಮೀಸಲಿಟ್ಟಿರೋ ಇವರು ನಿಜಕ್ಕೂ ಕಾಡಿನ ರಾಜನೇ ಸರಿ. ಮನುಷ್ಯ ದುಡಿಯೋದು ತಮಗಾಗಿ, ತಮ್ಮವರಿಗಾಗಿ. ಆದ್ರೆ, ಇವರು ಜೀವಮಾನವಿಡಿ ದುಡಿದ ಹಣವನ್ನೆಲ್ಲ ಪ್ರಾಣಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ.
ಒಂದು ವೇಳೆ ಕೆಲಸ ಇಲ್ಲದೆ ಪ್ರಾಣಿಗಳಿಗೆ ಆಹಾರ ತರೋದಕ್ಕೂ ದುಡ್ಡಿಲ್ಲ ಅಂದ್ರೆ ಹೊಳೆಗೆ ಹೋಗಿ ಮೀನು ಹಿಡಿದುಕೊಂಡು ಬಂದು ಅದನ್ನ ಸುಟ್ಟು ಪ್ರಾಣಿಗಳಿಗೆ ಹಾಕುತ್ತಾರೆ. ಮದುವೆಯೂ ಇಲ್ಲದ ಇವರನ್ನು ಆತನ ಕುಟುಂಬಸ್ಥರು ಬಂದು ಕರೆದರೂ ಹೋಗಿಲ್ಲ. ನಾನು ಬಂದರೆ ಪ್ರಾಣಿಗಳಿಗೆ ಊಟ ಹಾಕೋದು ಯಾರು ಅಂತ ಹೋಗೇ ಇಲ್ಲ. ಕಳಸ ಜನ ಕಳಸದಲ್ಲಿ ಗ್ಯಾರೇಜ್ ಹಾಕಿಕೊಡ್ತೀವಿ ಅಂದ್ರು, ಪ್ರಾಣಿಗಳಿಗಾಗಿ ಅಲ್ಲಿಗೂ ಹೋಗಿಲ್ಲ. ಯಾಕಂದ್ರೆ, ನಿತ್ಯವೂ ಊಟದ ಸಮಯಕ್ಕೆ ಪ್ರಾಣಿಗಳು ಬರುತ್ತವೆ. ಅವುಗಳಿಗೆ ಇವರೇ ಊಟ ಹಾಕೋದು. ಹಾಗಾಗಿ, ಇದ್ದರೂ ಇಲ್ಲೇ, ಸತ್ರೂ ಇಲ್ಲೇ. ಇಲ್ಲಿಂದ ಮಾತ್ರ ಎಲ್ಲಿಗೂ ಹೋಗಲ್ಲ ಅಂತ ಎರಡು ದಶಕಗಳಿಂದ ಇಲ್ಲೇ ವಾಸವಿದ್ದಾರೆ.
ಈ ಬಗ್ಗೆ ರೂಬೆಸ್ ಅವರು ಮಾತನಾಡಿ, 'ಇಲ್ಲಿ ಒಮ್ಮೆ ಚಿರತೆ ಬಂದಿತ್ತು. ಆಗ ನಮ್ಮ ನಾಯಿಗೂ ಸ್ವಲ್ಪ ಗಾಯವಾಯಿತು. ನಂತರ ನಾನು ಚಿರತೆಯೊಂದಿಗೆ ಹೊಡೆದಾಡಿ ಅದನ್ನು ಓಡಿಸಿದೆ. ಅವತ್ತು ಹೋಗಿದ್ದು ಇನ್ನೂ ಬಂದಿಲ್ಲ' ಎಂದು ತಮ್ಮ ಅನುಭವವನ್ನು ಹೇಳಿಕೊಂಡರು.
ಈ ಬಗ್ಗೆ ಸ್ಥಳೀಯರಾದ ನಾಗೇಶ್ ಅವರು ಮಾತನಾಡಿ, 'ರೂಬೆಸ್ ಅವರು ಕುದುರೆಮುಖ ಕಂಪನಿ ಬರುವುದಕ್ಕೂ ಮುಂಚೆಯೇ ಬಂದಿದ್ದರು. ಇಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದರು. ನಂತರ ಬೆಕ್ಕುಗಳ ಸಂಗ್ರಹ ಮಾಡಿದರು. ಕಾಡಿನಿಂದ ಬರುವ ಪ್ರಾಣಿಗಳಿಗೂ ಊಟ ಸೌಲಭ್ಯ ಕೊಡುತ್ತಾರೆ. ಆದರೆ ಅವರಿಗೆ ಇಲ್ಲಿ ಕರೆಂಟ್ ಇಲ್ಲ, ವ್ಯವಸ್ಥೆ ಸರಿ ಇಲ್ಲ. ಮಳೆಗಾಲವಾದ್ದರಿಂದ ಬಿಲ್ಡಿಂಗ್ ಸೋರುತ್ತಿದೆ. ಧರ್ಮಸ್ಥಳ ಯೋಜನೆಯಿಂದ ಅವರಿಗೆ ಸನ್ಮಾನ ಮಾಡಿದ್ದೇವೆ. ಇಲ್ಲಿ ಸ್ವಚ್ಛತೆಯನ್ನು ಮಾಡಿದ್ದೇವೆ. ನಮ್ಮಿಂದ ಸಾಧ್ಯವಾದ ಸಹಾಯ ಮಾಡಿದ್ದೇವೆ. ಬೇರೆಯವರು ಇವರಿಗೆ ಸಹಾಯ ಮಾಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಮರ - ಗಿಡ, ರಸ್ತೆ ಬದಿ ನೀರು - ಆಹಾರ ಇಟ್ಟು ಪ್ರಾಣಿ - ಪಕ್ಷಿಗಳ ಹಸಿವು ನೀಗಿಸುತ್ತಿದೆ ಗೆಳೆಯರ ಬಳಗ - Youngsters feeding the birds