ಬೆಂಗಳೂರು: ಆಸ್ತಿ ವಿಚಾರವಾಗಿ ಆರಂಭವಾದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕು ಇರಿದು ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಾಬುರೆಡ್ಡಿ (54) ಎಂಬಾತನನ್ನು ಹತ್ಯೆಗೈದಿದ್ದ ಆರೋಪದಡಿ ಆತನ ಸಹೋದರಿಯ ಪತಿ ಗೋಪಾಲ್ ರೆಡ್ಡಿ ಹಾಗೂ ಸಹೋದರನ ಮಗ ಭರತ್ ಎಂಬಾತನನ್ನು ಬಂಧಿಸಲಾಗಿದೆ.
ಶನಿವಾರ ಸಂಜೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿ ವಿಜಿನಾಪುರದಲ್ಲಿ ಆರೋಪಿಗಳು ಬಾಬುರೆಡ್ಡಿಗೆ ಚಾಕು ಇರಿದು ಹತ್ಯೆ ಮಾಡಿದ್ದರು. ಬಾಬು ರೆಡ್ಡಿ ಪಿತ್ರಾರ್ಜಿತ ಆಸ್ತಿಯಲ್ಲಿ ತನ್ನ ಅಣ್ಣ ಹಾಗೂ ತಂಗಿಗೆ ಪಾಲು ನೀಡಿರಲಿಲ್ಲ. ಇದರಿಂದ ಎರಡೂ ಬಣದ ನಡುವೆ ಆಸ್ತಿಗಾಗಿ ನಡೆಯುತ್ತಿದ್ದ ತಕರಾರು ನ್ಯಾಯಾಲಯದ ಮೆಟ್ಟಿಲೇರಿತ್ತು.
ಅದೇ ವಿಚಾರವಾಗಿ ಹಂಚಿಕೆ ಕುರಿತು ಶನಿವಾರ ಮಾತುಕತೆಗಾಗಿ ವಿಜಿನಾಪುರದಲ್ಲಿ ಎಲ್ಲರೂ ಸೇರಿದ್ದರು. ಈ ವೇಳೆ ಸಿಟ್ಟಿಗೆದ್ದ ಗೋಪಾಲ್ ರೆಡ್ಡಿ ಹಾಗೂ ಭರತ್ ಚಾಕುವಿನಿಂದ ಇರಿದಿದ್ದರು. ಇರಿತದಿಂದ ತೀವ್ರವಾಗಿ ರಕ್ತಸ್ರಾವಕ್ಕೊಳಗಾಗಿದ್ದ ಬಾಬುರೆಡ್ಡಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನ್ನಪ್ಪಿದ್ದರು.
ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಗೋಪಾಲ್ ರೆಡ್ಡಿ ಹಾಗೂ ಭರತ್ನನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: 38 ಮನೆಗಳ್ಳತನ ಪ್ರಕರಣ: ಗೆಳೆಯ, ಗೆಳತಿ ಬಂಧನ, ₹45 ಲಕ್ಷ ಮೌಲ್ಯದ ಆಭರಣ ವಶಕ್ಕೆ - House Burglary Case